ನವ ದೆಹಲಿ: ದ್ರೌಪದಿ ಮುರ್ಮು ಅವರು ದೇಶದ ಮುಂದಿನ ರಾಷ್ಟ್ರಪತಿಯಾಗಿ ಹೊಮ್ಮಿದ್ದಾರೆ. ಬಿಜೆಪಿ ಬೆಂಬಲಿತ ದ್ರೌಪದಿ ಮುರ್ಮು ದೇಶದ 15ನೇ ರಾಷ್ಟ್ರಪತಿಯಾಗಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿ, ನಿರ್ಗಮನ ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಗಣ್ಯರು ಅಭಿನಂದನೆ ತಿಳಿಸಿದ್ದಾರೆ.
ಗುರುವಾರ 3ನೇ ಸುತ್ತಿನ ಮತ ಎಣಿಕೆಯ ನಂತರ, ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಪ್ರತಿಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ವಿರುದ್ಧದ ಕದನದಲ್ಲಿ ಭಾರಿ ಅಂತರದಿಂದ ಗೆಲುವು ಸಾಧಿಸಿದರು. ಶೇಕಡಾ 50ಕ್ಕಿಂತ ಅಧಿಕ ಮತಗಳನ್ನು ಅವರು ಪಡೆದರು. ಇಲ್ಲಿಯವರೆಗೆ ಎಣಿಕೆಯಾದ 3,219 ಮಾನ್ಯ ಮತಗಳಲ್ಲಿ ಮುರ್ಮು 2,161 ಗಳಿಸಿದ್ದರೆ, ಸಿನ್ಹಾ 1,058 ಪಡೆದಿದ್ದಾರೆ. 64 ವರ್ಷದ ಮುರ್ಮು ರಾಷ್ಟ್ರಪತಿಯಾದ ಮೊದಲ ಆದಿವಾಸಿ ಮತ್ತು ಎರಡನೇ ಮಹಿಳೆ. 2015ರಲ್ಲಿ ಮುರ್ಮು ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲರಾಗಿದ್ದರು.
ದೇಶದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರಿಗೆ ಶುಭಹಾರೈಕೆಗಳು ಎಂದು ನಿರ್ಗಮನ ರಾಷ್ಟ್ರಾಧ್ಯಕ್ಷ ರಾಮನಾಥ್ ಕೋವಿಂದ್ ಹಾರೈಸಿದ್ದಾರೆ.
130 ಕೋಟಿ ಭಾರತೀಯರು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವಾಗ, ಮೂಲೆಯ ಈಶಾನ್ಯ ಭಾರತದ ಬುಡಕಟ್ಟು ಸಮುದಾಯದಿಂದ ಬಂದ ಭಾರತದ ಮಗಳೊಬ್ಬಳು ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಅವರ ಹೋರಾಟದ ಬದುಕು, ಯಶಸ್ಸು, ಸೇವೆಗಳು ಎಲ್ಲರಿಗೂ ಸ್ಫೂರ್ತಿದಾಯಕ. ಬಡವರಿಗೆ, ದೀನದಲಿತರಿಗೆ ಭರವಸೆಯ ಬೆಳಕಾಗಿ ಅವರು ಹೊಮ್ಮಿದ್ದಾರೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ದ್ರೌಪದಿ ಮುರ್ಮು ಅವರು ಅತ್ಯುತ್ತಮ ಶಾಸಕ ಮತ್ತು ಸಚಿವರಾಗಿದ್ದರು. ಜಾರ್ಖಂಡ್ ರಾಜ್ಯಪಾಲರಾಗಿ ಅತ್ಯುತ್ತಮ ಅಧಿಕಾರಾವಧಿ ನಡೆಸಿದ್ದರು. ಅವರು ಮುಂಚೂಣಿಯಿಂದ ಮುನ್ನಡೆಸುವ ಮತ್ತು ಭಾರತದ ಅಭಿವೃದ್ಧಿ ಪಯಣವನ್ನು ಬಲಪಡಿಸುವ ಅತ್ಯುತ್ತಮ ರಾಷ್ಟ್ರಪತಿಯಾಗುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಮೋದಿ ಹೇಳಿದ್ದಾರೆ.
ಆಯ್ಕೆಯಾಗಿರುವ ಮುರ್ಮು ಅವರಿಗೆ ಪ್ರತಿಸ್ಪರ್ಧಿಯಾಗಿದ್ದ ಯಶ್ವಂತ್ ಸಿನ್ಹಾ ಅವರು ಟ್ವೀಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ. ʻʻಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಅಭಿನಂದಿಸುವಲ್ಲಿ ನಾನೂ ದೇಶದ ಇತರ ಪ್ರಜೆಗಳನ್ನು ಸೇರಿಕೊಳ್ಳುತ್ತೇನೆ. ದೇಶದ 15ನೇ ರಾಷ್ಟ್ರಪತಿಯಾಗಿ ಅವರು ಯಾವುದೇ ಭಯಾತಂಕಗಳಿಲ್ಲದೆ ಸಂವಿಧಾನದ ಸಂದೇಶವನ್ನು ಉಳಿಸಿಕೊಳ್ಳುತ್ತಾರೆ ಎಂದು ಭರವಸೆಯಿಡುತ್ತೇನೆʼʼ ಎಂದು ಹೇಳಿದ್ದಾರೆ ಸಿನ್ಹಾ.