Site icon Vistara News

Drug Seize:‌ ಇರಾನ್‌ನಿಂದ ಬರುತ್ತಿದ್ದ ಭಾರಿ ಡ್ರಗ್‌ ಸೀಜ್‌, 3300 ಕಿಲೋ ಮಾದಕವಸ್ತು ವಶಕ್ಕೆ

drug seize gujarat

ಪೋರಬಂದರ್:‌ ಭಾರತೀಯ ನೌಕಾಪಡೆ (Indian Navy) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (Narcotics Control bureau – NCB) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಂಗಳವಾರ ಗುಜರಾತ್ ಕರಾವಳಿಯಲ್ಲಿ (Gujarat Coast) 3,300 ಕೆಜಿ ಮಾದಕವಸ್ತುಗಳನ್ನು ಹೊತ್ತೊಯ್ಯುತ್ತಿದ್ದ (Drug seize) ಬೋಟನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿದ್ದ ಐದು ಮಂದಿಯನ್ನು ಬಂಧಿಸಲಾಗಿದೆ.

ನೌಕಾಪಡೆಯ ಪ್ರಕಾರ 3,089 ಕಿಲೋಗ್ರಾಂಗಳಷ್ಟು ಚರಸ್, 158 ಕೆಜಿ ಮೆಥಾಂಫೆಟಮೈನ್ ಮತ್ತು 25 ಕೆಜಿ ಮಾರ್ಫಿನ್ ಅನ್ನು ಒಳಗೊಂಡಿರುವ ಈ ಮಾದಕವಸ್ತು ವಶಪಡಿಸಿಕೊಳ್ಳುವಿಕೆಯು ಇತ್ತೀಚಿನ ದಿನಗಳಲ್ಲಿ ಬೃಹತ್‌ ಪ್ರಮಾಣದ್ದಾಗಿದೆ. ಪೋರಬಂದರ್‌ನ ಬಂದರಿನಲ್ಲಿ ನಡೆಸಿದ ಕಾರ್ಯಾಚರಣೆಯ ನಂತರ ಐವರು ವಿದೇಶಿ ಆರೋಪಿಗಳನ್ನು ಬಂಧಿಸಲಾಗಿದೆ.

ಫೆಬ್ರವರಿ 27ರಂದು ಬಂಧಿತ ದೋಣಿ, ಸಿಬ್ಬಂದಿ ಮತ್ತು ನಿಷಿದ್ಧ ಮಾದಕ ವಸ್ತುಗಳನ್ನು ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲಾಯಿತು. ಕಣ್ಗಾವಲು ಕಾರ್ಯಾಚರಣೆಯ ಸಮಯದಲ್ಲಿ P8I LRMR ವಿಮಾನವು ಮಾಹಿತಿ ಸಂಗ್ರಹಿಸಿದ್ದು, ನಂತರ ಪ್ರತಿಕ್ರಿಯೆಯಾಗಿ ಕಾರ್ಯಾಚರಣೆಯನ್ನು ನಡೆಸಲಾಯಿತು. ಅನುಮಾನಾಸ್ಪದ ದೋಣಿಯನ್ನು ಯಶಸ್ವಿಯಾಗಿ ಪ್ರತಿಬಂಧಿಸಿ ಸೆರೆಹಿಡಿಯಲಾಯಿತು.

“ಕಾನೂನು ಜಾರಿ ಸಂಸ್ಥೆಗಳೊಂದಿಗೆ ಭಾರತೀಯ ನೌಕಾಪಡೆಯ ಸಂಘಟಿತ ಪ್ರತಿಕ್ರಿಯೆಯು ಭಾರತದ ಕಡಲ ನೆರೆಹೊರೆಯಲ್ಲಿ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ನಮ್ಮ ದೃಢವಾದ ನಿಲುವನ್ನು ಪ್ರತಿಬಿಂಬಿಸುತ್ತದೆ” ಎಂದು Xನಲ್ಲಿನ ಪೋಸ್ಟ್‌ನಲ್ಲಿ ನೌಕಾಪಡೆ ತಿಳಿಸಿದೆ. ಈ ದೋಣಿ ಇರಾನ್ ಮೂಲದ್ದು ಎಂದು ಹೇಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಅಂದಾಜು 1,000 ಕೋಟಿ ರೂಪಾಯಿ.

ನಿರ್ದಿಷ್ಟ ಸುಳಿವಿನ ಮೇರೆಗೆ ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ, ಭಾರತೀಯ ನೌಕಾಪಡೆ ಮತ್ತು ಎನ್‌ಸಿಬಿ ಜಂಟಿಯಾಗಿ ಇಂಟರ್ನ್ಯಾಷನಲ್ ಮ್ಯಾರಿಟೈಮ್ ಬೌಂಡರಿ ಲೈನ್ (ಐಎಂಬಿಎಲ್) ಬಳಿ ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿದವು. ಬುಧವಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು NCB, ನೌಕಾಪಡೆ ಮತ್ತು ಗುಜರಾತ್ ಪೊಲೀಸರನ್ನು ಅಭಿನಂದಿಸಿದರು.

“ಮಾದಕ ದ್ರವ್ಯ ಮುಕ್ತ ಭಾರತದ ಕುರಿತ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಯನ್ನು ಅನುಸರಿಸುವ ಮೂಲಕ ನಮ್ಮ ಏಜೆನ್ಸಿಗಳು ಇಂದು ಭಾರಿ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳುವಲ್ಲಿ ಭವ್ಯವಾದ ಯಶಸ್ಸನ್ನು ಸಾಧಿಸಿವೆ. ಎನ್‌ಸಿಬಿ, ನೌಕಾಪಡೆ ಮತ್ತು ಗುಜರಾತ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 3132 ಕೆಜಿ ತೂಕದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ನಮ್ಮ ದೇಶವನ್ನು ಮಾದಕ ದ್ರವ್ಯ ಮುಕ್ತಗೊಳಿಸಲು ನಮ್ಮ ಸರ್ಕಾರದ ಅಚಲ ಬದ್ಧತೆ ಹೊಂದಿದೆ. ಈ ಸಂದರ್ಭದಲ್ಲಿ ನಾನು ಎನ್‌ಸಿಬಿ, ನೌಕಾಪಡೆ ಮತ್ತು ಗುಜರಾತ್ ಪೊಲೀಸರನ್ನು ಅಭಿನಂದಿಸುತ್ತೇನೆ” ಎಂದು ಷಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ; ಏನಿದು ಮಿಯಾಂವ್‌ ಮಿಯಾಂವ್‌ ಡ್ರಗ್ಸ್?

Exit mobile version