ನವದೆಹಲಿ: ಪರಿಸರ ದಿನಾಚರಣೆಯ ದಿನ ವೇದಿಕೆ ಮೇಲೆ ನಿಂತು ಪರಿಸರ ರಕ್ಷಣೆ ಕುರಿತು ಭಾಷಣ ಮಾಡುತ್ತೇವೆ. ಚಳಿಗಾಲದಲ್ಲಿ ಮಳೆ ಬಂದಾಗ, ಮಳೆಗಾಲದಲ್ಲಿ ಭಾರಿ ಬಿಸಿಲು ಇದ್ದಾಗ ಹವಾಮಾನ ಬದಲಾವಣೆ ಕುರಿತು ಮಾತನಾಡುತ್ತೇವೆ. ಪರಿಸರ ರಕ್ಷಣೆಯ ಚರ್ಚೆಗಳು ತುಂಬ ಆಗುತ್ತವೆ. ಆದರೆ, ಪ್ರಾಯೋಗಿಕವಾಗಿ ಪರಿಸರ ರಕ್ಷಣೆಯಲ್ಲಿ ತೊಡಗುವವರ ಸಂಖ್ಯೆ ಕಡಿಮೆ ಇರುತ್ತದೆ. ಆದರೆ, ಪ್ರಾಯೋಗಿಕವಾಗಿ ಪರಿಸರ ರಕ್ಷಣೆ ಅಭಿಯಾನಕ್ಕೆ ನಾವು ಬೆಂಬಲ ನೀಡಬಹುದಾಗಿದೆ. ಇಂದು ರಾತ್ರಿ 8.30ರಿಂದ 9.30ರಿಂದ ಅರ್ಥ್ ಅವರ್ (Earth Hour 2023) ಆಚರಿಸಲಾಗುತ್ತಿದ್ದು, ನಮ್ಮ ಮನೆ, ಕಚೇರಿ ಸೇರಿ ಯಾವುದೇ ಸ್ಥಳಗಳಲ್ಲಿ ಅನವಶ್ಯಕವಾಗಿ ಉರಿಸುತ್ತಿರುವ ವಿದ್ಯುತ್ ದೀಪಗಳನ್ನು ಆರಿಸುವ ಮೂಲಕ ಪರಿಸರ ರಕ್ಷಣೆಗೆ ನಾವೂ ಕೊಡುಗೆ ನೀಡೋಣ.
ಏನಿದು ಅರ್ಥ್ ಅವರ್?
ಜಾಗತಿಕವಾಗಿ ಏರುತ್ತಿರುವ ತಾಪಮಾನವನ್ನು ನಿಗ್ರಹಿಸಲು ಪ್ರತಿ ವರ್ಷದ ಮಾರ್ಚ್ ಕೊನೆಯ ಶನಿವಾರ ರಾತ್ರಿ 8.30ರಿಂದ 9.30ರವರೆಗೆ ವಿದ್ಯುತ್ ದೀಪಗಳನ್ನು ಆರಿಸುವ ಆಚರಣೆಯೇ ಅರ್ಥ್ ಅವರ್ ಆಗಿದೆ. ವಿದ್ಯುತ್ ದೀಪಗಳ ಜತೆಗೆ ವಿದ್ಯುತ್ ಉಪಕರಣಗಳನ್ನು ಕೂಡ ಆಫ್ ಮಾಡುವ ಮೂಲಕ ಅರ್ಥ್ ಅವರ್‌ಅನ್ನು ಆಚರಿಸಲಾಗುತ್ತದೆ. ಆಸ್ಟ್ರೇಲಿಯದ ವರ್ಲ್ಡ್ ವೈಲ್ಡ್‌ಲೈಫ್ ಫಂಡ್ (WWF) ಎಂಬ ಸಂಸ್ಥೆಯು 2007ರಲ್ಲಿ ಮೊದಲ ಬಾರಿಗೆ ಅರ್ಥ್ ಅವರ್ ಆಚರಣೆಗೆ ಕರೆ ನೀಡಿತು. ಇದಾದ ಬಳಿಕ ಪ್ರತಿವರ್ಷ ಆಚರಣೆ ಮಾಡಲಾಗುತ್ತಿದ್ದು, ಜಗತ್ತಿನಾದ್ಯಂತ ಬೆಂಬಲ ವ್ಯಕ್ತವಾಗಿದೆ.
ಡಬ್ಲ್ಯೂಡಬ್ಲ್ಯೂಎಫ್ ಟ್ವೀಟ್
ಏನಿದರ ಉದ್ದೇಶ? ಏಕಿಷ್ಟು ಪ್ರಾಮುಖ್ಯತೆ?
ಪರಿಸರ ರಕ್ಷಣೆ ಹಾಗೂ ಭವಿಷ್ಯತ್ತಿಗಾಗಿ ಸುಸ್ಥಿರ ಅಭಿವೃದ್ಧಿ ಕಲ್ಪನೆಯಿಂದ ಅರ್ಥ್ ಅವರ್ ಆಚರಣೆ ಮಾಡಲಾಗುತ್ತಿದೆ. ಹವಾಮಾನ ಬದಲಾವಣೆ, ಪರಿಸರಕ್ಕೆ ಹಾನಿ ಮಾಡುತ್ತಿರುವ ಕಾರಣ ಜಾಗತಿಕ ತಾಪಮಾನ ದಿನೇದಿನೆ ಏರಿಕೆಯಾಗುತ್ತಿದೆ. ಇದರಿಂದ ಜೀವಸಂಕುಲದ ಮೇಲೆ ಪರಿಣಾಮ ಉಂಟಾಗುತ್ತಿದೆ. ಹಾಗಾಗಿ, ಭೂಮಿಯ ತಾಪಮಾನವನ್ನು ತಗ್ಗಿಸಲು, ಪರಿಸರ ರಕ್ಷಣೆ ದೃಷ್ಟಿಯಿಂದ ಅರ್ಥ್ ಅವರ್ ಆಚರಿಸಲಾಗುತ್ತಿದೆ. ಇದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, 190ಕ್ಕೂ ಅಧಿಕ ರಾಷ್ಟ್ರಗಳು ಅರ್ಥ್ ಅವರ್‌ಗೆ ಬೆಂಬಲ ಸೂಚಿಸಿವೆ. ಭಾರತದಲ್ಲೂ ಆಚರಣೆ ಮಾಡಲಾಗುತ್ತದೆ.
ನಾವೂ ಬೆಂಬಲಿಸೋಣ, ಪರಿಸರ ಉಳಿಸೋಣ
ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಲೈಟ್ ಆಫ್ ಮಾಡುವ ಮೂಲಕ ಅರ್ಥ್ ಅವರ್‌ಗೆ ಬೆಂಬಲ ನೀಡಲಾಗುತ್ತಿದೆ. ಸಾವಿರಾರು ಖಾಸಗಿ ಕಂಪನಿಗಳು ಕೂಡ ಪರಿಸರ ರಕ್ಷಣೆಗೆ ಬೆಂಬಲ ನೀಡುತ್ತಿವೆ. ಹಾಗೆಯೇ, ನಾವು ಕೂಡ ವೈಯಕ್ತಿಕವಾಗಿ ಅರ್ಥ್ ಅವರ್‌ಗೆ ಬೆಂಬಲ ಸೂಚಿಸೋಣ. ನಮ್ಮ ಮನೆ ಸೇರಿ ಯಾವುದೇ ಪ್ರದೇಶಗಳಲ್ಲಿ ವಿದ್ಯುತ್ ಆಫ್ ಮಾಡುವ ಮೂಲಕ, ವಿದ್ಯುತ್ ಉಪಕರಣಗಳನ್ನು ಬಳಸದಿರುವ ಮೂಲಕ ಜಾಗತಿಕ ಹವಾಮಾನ ಸ್ಥಿರತೆಗೆ ನಾವೂ ಕೊಡುಗೆ ನೀಡೋಣ.
ಇದನ್ನೂ ಓದಿ: ಹೊಸ ಅಂಕಣ: ಪರಿಸರ ಪದ: ಮರಳಿ ಬರುವುದೆ ಊರಿನ ಉಲ್ಲಾಸ?