Site icon Vistara News

Earthquake: ಜಮ್ಮು-ಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆ ಬ್ಯಾಕ್‌ ಟು ಬ್ಯಾಕ್‌ ಭೂಕಂಪ

Earthquake

Earthquakes in Baramulla: Two back-to-back quakes rock Kashmir district

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ(Jammu Kashmir)ದ ಬಾರಾಮುಲ್ಲಾ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಎರಡು ಭೂಕಂಪ(Earthquake) ಸಂಭವಿಸಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿ 4.9 ಮತ್ತು 4.8 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರದ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಅದೃಷ್ಟವಶಾತ್‌ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಇಂದು ಬೆಳಗ್ಗೆ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಯಾವುದೇ ಪ್ರಾಣಹಾನಿ ಅಥವಾ ಗಮನಾರ್ಹ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ. ಯಾವುದೇ ಬೆಳವಣಿಗೆಗಳಿಗಾಗಿ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ ತಿಂಗಳೂ ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಭಾರಿ ಭೂಕಂಪ ಸಂಭವಿಸಿದ್ದು, ಜನ ಬೆಚ್ಚಿಬಿದ್ದಿದ್ದರು. ರಿಕ್ಟರ್‌ ಮಾಪನದಲ್ಲಿ 4.1 ತೀವ್ರತೆ ದಾಖಲಾಗಿದ್ದು, ಭೂಮಿ ಕಂಪಿಸಿದ ಅನುಭವವಾಗುತ್ತಲೇ ಜನ ಮನೆಯಿಂದ ಹೊರಗೆ ಬಂದಿದ್ದರು. ಕೆಲ ಗಂಟೆಗಳ ಬಳಿಕವೇ ಅವರು ಮನೆಗೆ ಹೋಗಿದ್ದಾರೆ. ಆದಾಗ್ಯೂ, ಪ್ರಾಣಾಪಾಯ ಸೇರಿ ಯಾವುದೇ ದುರಂತ ಸಂಭವಿಸಿರಲಿಲ್ಲ.

ಬಾರಾಮುಲ್ಲಾ ಪ್ರದೇಶದಲ್ಲಿ ಜುಲೈ 12 ಮಧ್ಯಾಹ್ನ 12.26ರ ಸುಮಾರಿಗೆ ಭೂಮಿ ಕಂಪಿಸಿದೆ. ಜನರ ಮನೆಗಳಲ್ಲಿರುವ ಫ್ಯಾನ್‌ ಹಾಗೂ ಮೇಜುಗಳು ಅಲುಗಾಡಿದ ಕಾರಣ ಜನ ಕೂಡಲೇ ಮನೆಯಿಂದ ಹೊರಗೆ ಬಂದಿದ್ದಾರೆ. ಭೂಮಿಯ 10 ಕಿಲೋಮೀಟರ್‌ ಆಳದಲ್ಲಿ ಕಂಪನ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಲ ತಿಂಗಳ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ ಸೇರಿ ಹಲವೆಡೆ ಭೂಕಂಪ ಸಂಭವಿಸಿತ್ತು.

ಚೀನಾದಲ್ಲಿ ಕೆಲ ತಿಂಗಳ ಹಿಂದಷ್ಟೇ ಸಂಭವಿಸಿದ್ದ ಭೂಕಂಪದಲ್ಲಿ 100ಕ್ಕೂ ಅಧಿಕ ಜನ ಮೃತಪಟ್ಟು, ಸಾವಿರಾರು ನಾಗರಿಕರು ಗಾಯಗೊಂಡಿದ್ದರು. ಜಪಾನ್‌ನಲ್ಲೂ ಹೊಸ ವರ್ಷದ ದಿನವೇ ಭೂಕಂಪ ಸಂಭವಿಸಿ 100ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಚೀನಾದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿತ್ತು. ಅಫಘಾನಿಸ್ತಾನ, ಪಾಕಿಸ್ತಾನ, ಮ್ಯಾನ್ಮಾರ್‌ ಸೇರಿ ಹಲವೆಡೆ ಭೂಕಂಪ ಸಂಭವಿಸಿದರೆ, ದೆಹಲಿ ಹಾಗೂ ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪದ ಅನುಭವವಾಗುವುದು ಸಾಮಾನ್ಯವಾಗಿದೆ.

ಇದನ್ನೂ ಓದಿ: Earthquake: ಜಮ್ಮು-ಕಾಶ್ಮೀರದಲ್ಲಿ 4.1 ತೀವ್ರತೆಯ ಭೂಕಂಪ; ಮನೆಯಿಂದ ಓಡಿಬಂದ ಜನ

Exit mobile version