Site icon Vistara News

Earthquake In Delhi: ದೆಹಲಿಯಲ್ಲಿ ಮತ್ತೆ ಭೂಕಂಪ, 24 ಗಂಟೆಯಲ್ಲಿ 2ನೇ ಬಾರಿ ಕಂಪಿಸಿದ ಭೂಮಿ

Delhi Earthquake

Earthquake tremors felt in Delhi-National Capital Region again

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Earthquake In Delhi) ಮತ್ತೆ ಭೂಕಂಪ ಸಂಭವಿಸಿದೆ. ಮಂಗಳವಾರ ರಾತ್ರಿ (ಮಾರ್ಚ್‌ 21) ದೆಹಲಿ, ರಾಷ್ಟ್ರ ರಾಜಧಾನಿ ವ್ಯಾಪ್ತಿ (NCR) ಸೇರಿ ಹಲವು ರಾಜ್ಯಗಳಲ್ಲಿ ಭೂಕಂಪ ಸಂಭವಿಸಿದ ಬೆನ್ನಲ್ಲೇ ಬುಧವಾರ ಸಂಜೆಯೂ ದೆಹಲಿಯ ಹಲವೆಡೆ ಭೂಕಂಪದ ಅನುಭವವಾಗಿದೆ. ಇದರಿಂದಾಗಿ ಜನ ಆತಂಕಕ್ಕೀಡಾಗಿದ್ದು, ಮನೆಯಿಂದ ಹೊರಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

“ಬುಧವಾರ ಸಂಜೆ 4.46ರ ಸುಮಾರಿಗೆ ದೆಹಲಿಯಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪನದಲ್ಲಿ 2.7ರ ತೀವ್ರತೆಯ ಭೂಕಂಪ ದಾಖಲಾಗಿದೆ. ಹಾಗೆಯೇ, 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ” ಎಂದು ಭಾರತೀಯ ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ. ಅಫಘಾನಿಸ್ತಾನದ ಹಿಂದು ಕುಶ್‌ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ 6.6 ತೀವ್ರತೆಯ ಭೂಕಂಪದಿಂದಲೇ ಮತ್ತೆ ದೆಹಲಿಯಲ್ಲಿ ಭೂಕಂಪ ಸಂಭವಿಸಿದೆ ಎಂದು ತಿಳಿದುಬಂದಿದೆ.

ಭೂಕಂಪದ ತೀವ್ರತೆ

ಪಾಕಿಸ್ತಾನ ಮತ್ತು ಅಫಘಾನಿಸ್ತಾನದಲ್ಲಿ ಮಂಗಳವಾರ ರಾತ್ರಿ ತೀವ್ರ ಭೂಕಂಪ ಉಂಟಾಗಿದ್ದು, ಎರಡೂ ದೇಶಗಳಿಂದ ಸೇರಿ ಸುಮಾರು 11 ಜನರು ಮೃತಪಟ್ಟಿದ್ದಾರೆ. ಅಫಘಾನಿಸ್ತಾನದ ಜರ್ಮ್​​ ಎಂಬಲ್ಲಿ, ಭೂ ಮೇಲ್ಮೈನಿಂದ ಸುಮಾರು 180 ಕಿಮೀ ಆಳದಲ್ಲಿ ಭೂಮಿ ನಡುಗಿದೆ. ರಿಕ್ಟರ್​ ಮಾಪಕದಲ್ಲಿ ಭೂಕಂಪದ ತೀವ್ರತೆ 6.6ರಷ್ಟು ದಾಖಲಾಗಿದೆ ಎಂದು ಯುಎಸ್​ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ. ಹಾಗೇ, ಭೂಕಂಪನದ ಕೇಂದ್ರವಾದ ಜರ್ಮ್​​ನಿಂದ 40 ಕಿಮೀ ದೂರದಲ್ಲಿರುವ ಅಫ್ಘಾನಿಸ್ತಾನದ ಹಿಂದು ಕುಶ್​ ಪ್ರಾಂತ್ಯದಲ್ಲಿ ಭೂಕಂಪ ತೀವ್ರವಾಗಿ ಪರಿಣಾಮ ಬೀರಿದ್ದರೆ, ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಹಾನಿಯಾಗಿದೆ.

ಇದನ್ನೂ ಓದಿ: Pakistan Earthquake: ಪಾಕಿಸ್ತಾನ-ಅಫ್ಘಾನಿಸ್ತಾನದಲ್ಲಿ 6.6 ತೀವ್ರತೆಯ ಭೂಕಂಪ; 11 ಮಂದಿ ಸಾವು

ಇದರಿಂದಾಗಿ ಭಾರತದ ದೆಹಲಿ, ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶದ ಹಲವೆಡೆ ಭೂಕಂಪ ಸಂಭವಿಸಿತ್ತು. ಮನೆಗಳಲ್ಲಿ ಫ್ಯಾನ್‌ ಸೇರಿ ಹಲವು ವಸ್ತುಗಳು ಅಲುಗಾಡಿದ ಕಾರಣ ಜನರು ಮನೆಯಿಂದ ಹೊರಬಂದು, ಬಯಲು ಪ್ರದೇಶಗಳಲ್ಲಿ ಜಮೆಯಾಗಿದ್ದರು. ಆದಾಗ್ಯೂ, ಯಾವುದೇ ಸಾವು-ನೋವು, ಕಟ್ಟಡ ಕುಸಿತದ ಕುರಿತು ವರದಿಯಾಗಿರಲಿಲ್ಲ.

Exit mobile version