Site icon Vistara News

Economic Survey 2023-24: ಉದ್ಯೋಗ ಸೃಷ್ಟಿ, ಕೃಷಿ ಏಳಿಗೆ; ಬಜೆಟ್‌ಗೂ ಮುನ್ನ ಕೇಂದ್ರದಿಂದ ಮಹತ್ವದ ಸುಳಿವು

Economic Survey 2023-24

Economic Survey 2023-24: Jobs Creation, Agri Push, Skill Development, MSME Support: Government Unveils Key Policy Focus Areas

ನವದೆಹಲಿ: ದೇಶದ ಜನ ಕುತೂಹಲದಿಂದ ಕಾಯುತ್ತಿರುವ ಕೇಂದ್ರ ಬಜೆಟ್‌ ಮಂಡನೆಗೆ (Union Budget 2024) ಮುನ್ನಾ ದಿನವಾದ ಸೋಮವಾರ (ಜುಲೈ 22) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಸಂಸತ್‌ನಲ್ಲಿ ಆರ್ಥಿಕ ಸಮೀಕ್ಷಾ (Economic Survey 2023-24) ವರದಿಯನ್ನು ಮಂಡಿಸಿದ್ದಾರೆ. ದೇಶದ ಆರ್ಥಿಕತೆ ಸುಭದ್ರವಾಗಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು, ಮುಂದಿನ ದಿನಗಳಲ್ಲಿ ದೇಶದಲ್ಲಿ ಉದ್ಯೋಗ ಸೃಷ್ಟಿ, ಕೃಷಿಗೆ ಆದ್ಯತೆ ಹಾಗೂ ಕೌಶಲ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಉದ್ಯೋಗ ಸೃಷ್ಟಿಗೆ ಆದ್ಯತೆ

2024-25ನೇ ಸಾಲಿನಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಆರ್ಥಿಕ ಸಮೀಕ್ಷೆ ಪ್ರಕಾರ, ಉದ್ಯೋಗ ಸೃಷ್ಟಿಯ ಪ್ರಮಾಣ ಏರಿಕೆಯಾಗಿದೆ. ದೇಶದಲ್ಲಿ ಪ್ರಸ್ತುತ 56.5 ಕೋಟಿ ಉದ್ಯೋಗಿಗಳಿದ್ದು, ಕೃಷಿ ಕ್ಷೇತ್ರದಲ್ಲಿಯೇ ಶೇ.45ರಷ್ಟು ಜನ ತೊಡಗಿದ್ದಾರೆ. ಇನ್ನು ಶೇ.11.4ರಷ್ಟು ಜನ ಉತ್ಪಾದನೆ, ಶೇ.28.9 ಮಂದಿ ಸೇವೆಗಳು ಹಾಗೂ ಶೇ.13ರಷ್ಟು ಜನ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಮುಂದಿನ ದಿನಗಳಲ್ಲೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಕೌಶಲ ವೃದ್ಧಿಗೆ ಪ್ರಾಮುಖ್ಯತೆ

ಆರ್ಥಿಕ ಸಮೀಕ್ಷೆಯ ವರದಿಯನ್ನು ಅವಲೋಕಿಸಿ ದೇಶಾದ್ಯಂತ ಕೌಶಲ ವೃದ್ಧಿಗೆ ಇನ್ನಷ್ಟು ಪ್ರಾಮುಖ್ಯತೆ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ದೇಶದಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಪ್ರಮಾಣವು ಶೇ.65ರಷ್ಟಿದೆ. ಹಾಗಾಗಿ, ಆಧುನಿಕ ಆರ್ಥಿಕತೆಯ ಸೃಜನೆಗೆ ಯುವಕರಿಗೆ ಕೌಶಲ ಅಭಿವೃದ್ಧಿಯು ಪ್ರಮುಖವಾಗಿದೆ. ಕಳೆದ ಒಂದು ದಶಕದಲ್ಲಿ ಶೇ.34ರಿಂದ ಶೇ.51.3ಕ್ಕೆ ಕೌಶಲ ವೃದ್ಧಿ ಪ್ರಮಾಣ ಏರಿಕೆಯಾಗಿದೆ. ಇದಕ್ಕೆ ಇನ್ನಷ್ಟು ಒತ್ತು ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಕೃಷಿ ಕ್ಷೇತ್ರದ ಏಳಿಗೆಗೆ ಒತ್ತು

ದೇಶದ ಆರ್ಥಿಕತೆಗೆ ಬಹುಮುಖ್ಯ ಪಾತ್ರ ವಹಿಸುವ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಕೃಷಿ ಉತ್ಪಾದನೆ ಹೆಚ್ಚಳ, ಉದ್ಯೋಗ ಸೃಷ್ಟಿ, ವಿವಿಧ ಬೆಳೆಗಳನ್ನು ಬೆಳೆಯಲು ಉತ್ತೇಜನ, ಆಧುನಿಕ ತಂತ್ರಜ್ಞಾನದ ಅಳವಡಿಕೆ, ಆಧುನಿಕ ಕೃಷಿಗಾಗಿ ಕೌಶಲ ವೃದ್ಧಿ, ಸಾವಯವ ಗೊಬ್ಬರದ ಬಳಕೆಗೆ ಪ್ರೋತ್ಸಾಹ ಸೇರಿ ಹಲವು ದಿಸೆಯಲ್ಲಿ ಸರ್ಕಾರವು ಕೃಷಿ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಕೃಷಿ, ಉದ್ಯೋಗ ಸೃಷ್ಟಿಯ ಜತೆಗೆ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಶ್ರೇಣಿ ಉದ್ಯಮಗಳಿಗೆ (MSME) ಪ್ರೋತ್ಸಾಹ, ಆರ್ಥಿಕ ನೆರವು, ಪರಿಸರ ಮಾಲಿನ್ಯ, ಹವಾಮಾನ ಬದಲಾವಣೆ ನಿಯಂತ್ರಣ, ಸುಸ್ಥಿರ ಅಭಿವೃದ್ಧಿಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಗಮನ ಹರಿಸುವುದು ಸೇರಿ ಕೇಂದ್ರ ಸರ್ಕಾರವು ಹಲವು ನಿರ್ಧಾರಗಳನ್ನು ಘೋಷಣೆ ಮಾಡಿದೆ. ಇವುಗಳನ್ನು ಬಜೆಟ್‌ನಲ್ಲಿ ಹೇಗೆ ಸಾಕಾರಗೊಳಿಸುತ್ತದೆ ಎಂಬುದು ಈಗ ಕುತೂಹಲ ಕೆರಳಿಸಿದೆ.

ಆರ್ಥಿಕ ಸಮೀಕ್ಷೆಯ ಹೈಲೈಟ್ಸ್‌….

ಇದನ್ನೂ ಓದಿ: Economic Survey 2023-24: ದೇಶದ ಆರ್ಥಿಕತೆ, ಜಿಡಿಪಿ, ಹೂಡಿಕೆ; ಆರ್ಥಿಕ ಸಮೀಕ್ಷೆಯ ಪ್ರಮುಖಾಂಶಗಳು ಇಲ್ಲಿವೆ

Exit mobile version