ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಸಂಸತ್‌ನಲ್ಲಿ 2023-24ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು (Economic Survey 2023-24) ಪ್ರಕಟಿಸಿದ್ದಾರೆ. ಬಜೆಟ್ ಮಂಡನೆಗೂ (Union Budget 2024_ ಒಂದು ದಿನ ಮಂಡನೆಯಾಗುವ ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕತ ಸ್ಥಿತಿಗತಿಗೆ ಕನ್ನಡಿಯಾಗಿರುವ ಕಾರಣ ಪ್ರಾಮುಖ್ಯತೆ ಪಡೆದಿದೆ. ಇನ್ನು, ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತದ ಆರ್ಥಿಕತೆಯು ಸದೃಢವಾಗಿದ್ದು, 2024-25ನೇ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿಯು ಶೇ.6.5ರಿಂದ ಶೇ.7ಕ್ಕೆ ಏರಿಕೆಯಾಗುವ ಅಂದಾಜಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.
“ಭಾರತದ ಆರ್ಥಿಕತೆಯು ಸಮತೋಲನದಿಂದ ಕೂಡಿದೆ. ಮುಂದಿನ ದಿನಗಳಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಜಾಗತಿಕವಾಗಿ ರಾಜಕೀಯ ಬೆಳವಣಿಗೆ, ಕೊರೊನಾ ಬಿಕ್ಕಟ್ಟಿನ ನಂತರದ ಸವಾಲುಗಳ ಮಧ್ಯೆಯೂ ಭಾರತದ ಆರ್ಥಿಕತೆಯು ಸದೃಢವಾಗಿದೆ. ಹೂಡಿಕೆ, ವ್ಯಾಪಾರ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ” ಎಂಬುದಾಗಿ ಆರ್ಥಿಕ ಸಮೀಕ್ಷೆ ತಿಳಿಸಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿಗೆ ಮಾಹಿತಿ ನೀಡಿದರು.
#WATCH | Economic Survey 2023-2024 tabled in Lok Sabha by Union Finance Minister Nirmala Sitharaman. pic.twitter.com/XxBVhgW4Lq
— ANI (@ANI) July 22, 2024
ಉದ್ಯೋಗದ ಕುರಿತು ಆರ್ಥಿಕ ಸಮೀಕ್ಷೆಯ ಮಾಹಿತಿಯನ್ನು ಸಚಿವೆ ಹಂಚಿಕೊಂಡರು. “ಕಾಲೇಜಿನಿಂದ ಹೊರಬರುತ್ತಲೇ ಭಾರತದಲ್ಲಿ ಸರಾಸರಿ ಇಬ್ಬರಲ್ಲಿ ಒಬ್ಬರು ಉದ್ಯೋಗ ಕೈಗೊಳ್ಳುವಷ್ಟು ಕೌಶಲಗಳನ್ನು ಹೊಂದಿರುವುದಿಲ್ಲ. ಇದರ ಕುರಿತು ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ. ಇನ್ನು, ಸೇವಾ ವಲಯದಲ್ಲಿ ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದ ಉದ್ಯೋಗ ಸೃಷ್ಟಿಯಾಗುತ್ತಿದೆ. ನಿರ್ಮಾಣ, ಉತ್ಪಾದನೆ ಸೇರಿ ಹಲವು ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿಯಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆ” ಎಂದು ತಿಳಿಸಿದರು.
ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಇಳಿಕೆ
ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮಾಣ ತುಸು ಕಡಿಮೆಯಾಗಿದೆ ಎಂಬುದಾಗಿ ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. “2023ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಹೊಸ ಬಂಡವಾಳ ಹೂಡಿಕೆ ಪ್ರಮಾಣವು 47.6 ಶತಕೋಟಿ ಡಾಲರ್ ಇತ್ತು. ಆದರೆ, ಇದು 2024ನೇ ಹಣಕಾಸು ವರ್ಷದಲ್ಲಿ 45.8 ಶತಕೋಟಿ ಡಾಲರ್‌ಗೆ ಇಳಿಕೆಯಾಗಿದೆ. ಜಾಗತಿಕ ಬೆಳವಣಿಗೆಗಳು ಇದಕ್ಕೆ ಕಾರಣವಾಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೂಡಿಕೆ ಹರಿದುಬರುವ ನಿರೀಕ್ಷೆ ಇದೆ” ಎಂದು ನಿರ್ಮಲಾ ಸೀತಾರಾಮನ್ ಅವರು ಸಮೀಕ್ಷೆಯನ್ನು ಮಂಡಿಸುವ ವೇಳೆ ತಿಳಿಸಿದರು.
ಇದನ್ನೂ ಓದಿ: NEET UG 2024: ಅಧಿವೇಶನದಲ್ಲಿ ‘ನೀಟ್’ ಪ್ರಸ್ತಾಪಿಸಿದ ರಾಹುಲ್ ಗಾಂಧಿ; ಪ್ರತ್ಯುತ್ತರ ಕೊಟ್ಟ ಕೇಂದ್ರ ಸಚಿವ