Site icon Vistara News

Naresh Goyal: ಜೆಟ್‌ ಏರ್‌ವೇಸ್‌ನ ನರೇಶ್ ಗೋಯಲ್‌ಗೆ ಸೇರಿದ 538 ಕೋಟಿ ರೂ. ಆಸ್ತಿ ಜಪ್ತಿ

Naresh Goyal

ED attaches assets worth Rs 538 crore of Jet Airways, Naresh Goyal family in PMLA case

ನವದೆಹಲಿ: ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಜೆಟ್‌ ಏರ್‌ವೇಸ್‌ (Jet Airways) ಸಂಸ್ಥಾಪಕ ನರೇಶ್‌ ಗೋಯಲ್‌ (Naresh Goyal), ಜೆಟ್‌ ಏರ್‌ವೇಸ್‌ ಹಾಗೂ ಗೋಯಲ್‌ ಅವರ ಸಂಬಂಧಿಕರಿಗೆ ಸೇರಿದ 538 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು (ED) ಜಪ್ತಿ ಮಾಡಿದೆ. ಈ ಕುರಿತು ಜಾರಿ ನಿರ್ದೇಶನಾಲಯವೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ.

ಜೆಟ್‌ ಏರ್‌ವೇಸ್‌, ನರೇಶ್‌ ಗೋಯಲ್‌, ಅವರ ಪತ್ನಿ ಅನಿತಾ ಗೋಯಲ್‌ ಹಾಗೂ ಪುತ್ರ ನಿವಾನ್‌ ಗೋಯಲ್‌ ಅವರಿಗೆ ಸೇರಿದ ವಸತಿ ಫ್ಲ್ಯಾಟ್‌ಗಳು, ಬಂಗಲೆಗಳು, ವಾಣಿಜ್ಯಿಕ ಕಟ್ಟಡಗಳು ಸೇರಿ 17 ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ದೇಶದ ಹಲವು ರಾಜ್ಯಗಳು, ಲಂಡನ್‌ ಹಾಗೂ ದುಬೈನಲ್ಲಿರುವ ಜೆಟ್‌ಏರ್‌ ಪ್ರೈವೇಟ್‌ ಲಿಮಿಟೆಡ್‌, ಜೆಟ್‌ ಎಂಟರ್‌ಪ್ರೈಸಸ್‌ ಪ್ರೈವೇಟ್‌ ಲಿಮಿಟೆಡ್‌ನ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ನರೇಶ್‌ ಗೋಯಲ್‌ ಅವರು ಕೆನರಾ ಬ್ಯಾಂಕ್‌ನಿಂದ ಸಾಲ ಪಡೆದು, ಕೋಟ್ಯಂತರ ರೂ. ವಂಚಿಸಿದ ಪ್ರಕರಣ ಎದುರಿಸುತ್ತಿದ್ದು, ಇವರ ವಿರುದ್ಧ ಇ.ಡಿ ಅಧಿಕಾರಿಗಳು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ನರೇಶ್‌ ಗೋಯಲ್‌ ಅವರನ್ನು ಬಂಧಿಸಲಾಗಿದ್ದು, ಅವರೀಗ ಮುಂಬೈ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಮಂಗಳವಾರವಷ್ಟೇ (ಅಕ್ಟೋಬರ್‌ 31) ಇ.ಡಿ ಅಧಿಕಾರಿಗಳು ನರೇಶ್‌ ಗೋಯಲ್‌ ವಿರುದ್ಧ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ಜೆಟ್‌ ಏರ್‌ವೇಸ್‌ಗೆ ನೀಡಿದ ಸಾಲದ ಹಣವನ್ನು ನರೇಶ್‌ ಗೋಯಲ್‌ ಸೇರಿ ಕಂಪನಿಯ ಹಲವು ನಿರ್ದೇಶಕರು, ಪ್ರಮೋಟರ್‌ಗಳು ವೈಯಕ್ತಿಕ ಕಾರಣಕ್ಕಾಗಿ ಬಳಸಿಕೊಂಡಿದ್ದಾರೆ. ಕೆನರಾ ಬ್ಯಾಂಕ್‌ಗೆ ಕೋಟ್ಯಂತರ ರೂ. ವಂಚನೆ ಮಾಡಲಾಗಿದೆ ಎಂದು 2022ರಲ್ಲಿ ಕೆನರಾ ಬ್ಯಾಂಕ್‌ ನರೇಶ್‌ ಗೋಯಲ್‌ ವಿರುದ್ಧ ಕೇಸ್‌ ದಾಖಲಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್‌ ದಾಖಲಿಸಿದ್ದು, ಇದರ ಆಧಾರದ ಮೇಲೆ ಇ.ಡಿ ತನಿಖೆ ನಡೆಸುತ್ತಿದೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version