Site icon Vistara News

ಮುಂದುವರಿದ ರಾಹುಲ್‌ ವಿಚಾರಣೆ, ಸರಿಯಾದ ಉತ್ತರ ಕೊಡದಿದ್ದರೆ ಅರೆಸ್ಟ್‌?

Rahul Gandhi ED

ನವ ದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಹಗರಣದಲ್ಲಿ ಅನುಷ್ಠಾನ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಂಗಳವಾರ ಎರಡನೇ ದಿನವೂ ಇ.ಡಿ ಅಧಿಕಾರಿಗಳ ಮುಂದೆ ಹಾಜರಾದರು. ಸೋಮವಾರ ಕಾಂಗ್ರೆಸ್‌ ನಾಯಕರ ಭಾರಿ ಹೈಡ್ರಾಮಾದ ಬಳಿಕ ಒಂಬತ್ತು ಗಂಟೆ ಕಾಲ ವಿಚಾರಣೆ ಎದುರಿಸಿದ್ದ ಕಾಂಗ್ರೆಸ್‌ ನಾಯಕ ಮಂಗಳವಾರವೂ ಅದೇ ಮಾದರಿಯಲ್ಲಿ ಗ್ರಿಲ್‌ಗೆ ಒಳಗಾದರು. ಈ ನಡುವೆ ರಾಹುಲ್‌ ಅವರು ಇ.ಡಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುತ್ತಿಲ್ಲ ಎಂಬ ಮಾಹಿತಿ ಇದ್ದು, ಇದು ನಿಜವೇ ಆಗಿದ್ದರೆ ಅಧಿಕಾರಿಗಳು ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳೂ ಇವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮಂಗಳವಾರ ಬೆಳಗ್ಗೆ 11.05ಕ್ಕೆ ಸೋದರಿ ಹಾಗೂ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರೊಂದಿಗೆ ಅಕ್ಬರ್‌ ರಸ್ತೆಯ ಇ.ಡಿ ಕಚೇರಿಗೆ ಆಗಮಿಸಿದ ರಾಹುಲ್‌ ಮಧ್ಯಾಹ್ನ 3.30ಕ್ಕೆ ಬ್ರೇಕ್‌ ಪಡೆದರು. ಬಳಿಕ 4 ಗಂಟೆಗೆ ಮರಳಿ ಬಂದ ಅವರ ವಿಚಾರಣೆ ಮುಂದುವರಿಯುತ್ತಿದೆ.

ಸೋಮವಾರದ ಒಂಬತ್ತು ಗಂಟೆಗಳ ವಿಚಾರಣೆ ವೇಳೆ ಅಧಿಕಾರಿಗಳು ಸುಮಾರು 25 ಪ್ರಶ್ನೆಗಳನ್ನು ರಾಹುಲ್‌ ಮುಂದೆ ಇಟ್ಟಿದ್ದರು. ಆದರೆ, ಇವುಗಳ ಪೈಕಿ ಹೆಚ್ಚಿನವುಗಳಿಗೆ ರಾಹುಲ್‌ ಸಮರ್ಪಕವಾದ ಉತ್ತರ ನೀಡಿಲ್ಲ ಎನ್ನಲಾಗುತ್ತಿದೆ. ಮಂಗಳವಾರದ ವಿಚಾರಣೆ ವೇಳೆಯೂ ಸರಿಯಾದ ಸಹಕಾರ ಸಿಗದೆ ಇದ್ದರೆ ಅಧಿಕಾರಿಗಳು ವಶಕ್ಕೆ ತೆಗೆದುಕೊಳ್ಳುವ ಅವಕಾಶವನ್ನು ಪರಿಶೀಲಿಸಲಿದ್ದಾರೆ ಎನ್ನಲಾಗಿದೆ. ಈ ಪ್ರಕರಣದ ಪ್ರಧಾನ ದೂರುದಾರರಾಗಿರುವ ಬಿಜೆಪಿ ಮಾಜಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಅವರು ಈ ಸಾಧ್ಯತೆಯೇ ಹೆಚ್ಚು ಎಂದಿದ್ದಾರೆ.

ಮುಂದುವರಿದ ಹೈಡ್ರಾಮಾ
ಈ ನಡುವೆ ಕಾಂಗ್ರೆಸ್‌ ನಾಯಕರ ಪ್ರತಿಭಟನೆ, ಮೆರವಣಿಗೆ ಯತ್ನಗಳು ಮಂಗಳವಾರವೂ ಮುಂದುವರಿದವು. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್‌, ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಆದರೆ, ಅಕ್ಬರ್‌ ರೋಡ್‌ ಕಡೆಗೆ ಹೋಗದಂತೆ ಸೆಕ್ಷನ್‌ 144ರ ಅಡಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಈ ನಡುವೆ ಮೊದಲ ದಿನ ಜರ್ಜರಿತರಾಗಿದ್ದ ಕೆ.ಸಿ. ವೇಣುಗೋಪಾಲ್‌ ಮಂಗಳವಾರವೂ ಎಳೆದಾಡಿಕೊಂಡು ಅಸ್ವಸ್ಥರಾದರು. ಕರ್ನಾಟಕದ ಏಕೈಕ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ಅವರನ್ನೂ ಬಂಧಿಸಲಾಗಿದೆ.

ಇದನ್ನೂ ಓದಿ| 2ನೇ ದಿನವೂ ಮುಂದುವರಿದ ರಾಹುಲ್‌ ಗಾಂಧಿ ಇ ಡಿ ವಿಚಾರಣೆ; ಧರಣಿ ಕುಳಿತ ಕಾಂಗ್ರೆಸ್ಸಿಗರು

Exit mobile version