Site icon Vistara News

24 ಗಂಟೆ ಕಳೆದರೂ ಮುಗಿಯದ ರಾಹುಲ್ ವಿಚಾರಣೆ, ನಿಲ್ಲದ ಕಾಂಗ್ರೆಸ್‌ ಬೀದಿ ಕಾಳಗ

rahul

ನವ ದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಹಗರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಮೂರು ದಿನಗಳಾದರೂ ತನ್ನ ಗ್ರಿಲ್ಲಿಂಗ್‌ನ್ನು ನಿಲ್ಲಿಸುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಮೂರು ದಿನಗಳಲ್ಲಿ ಒಟ್ಟು 24 ಗಂಟೆಗೂ ಅಧಿಕ ಸಮಯ ರಾಹುಲ್‌ ಗಾಂಧಿ ವಿಚಾರಣೆಗೆ ಒಳಗಾಗಿದ್ದಾರೆ. ಇ.ಡಿ. ಅಧಿಕಾರಿಗಳು ಅವರಿಗೆ ೧೦೦ರಷ್ಟು ಪ್ರಶ್ನೆಗಳನ್ನು ಕೇಳಿ ಲಿಖಿತ ಉತ್ತರವನ್ನು ಪಡೆದಿದ್ದಾರೆ ಎನ್ನಲಾಗಿದೆ. ಆದರೆ, ಕೆಲವು ಉತ್ತರಗಳು ಸಮರ್ಪಕವಾಗಿಲ್ಲ, ಹಾರಿಕೆಯ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಈ ವಿಚಾರಣೆ ಎಷ್ಟು ದಿನ ಮುಂದುವರಿಯುತ್ತದೆ ಎನ್ನುವ ಬಗ್ಗೆ ಕುತೂಹಲವಿದೆ. ಈ ನಡುವೆ ರಾಹುಲ್‌ ಗಾಂಧಿ ವಿಚಾರಣೆ ವಿರುದ್ಧ ಕಾಂಗ್ರೆಸ್‌ ನಡೆಸುತ್ತಿರುವ ಬೀದಿ ಪ್ರತಿಭಟನೆ ಮೂರನೇ ದಿನವೂ ಮುಂದುವರಿಯಿತು.

ಮೂರನೇ ದಿನದ ವಿಚಾರಣೆ
ಬುಧವಾರ ಬೆಳಗ್ಗೆ ರಾಹುಲ್‌ ಗಾಂಧಿ ಅವರು ಸಹೋದರಿ ಪ್ರಿಯಾಂಕಾ ಗಾಂಧಿ ಅವರ ಮನೆಗೆ ತೆರಳಿ ಅಲ್ಲಿಂದ ಅವರ ಜತೆಗೇ ಬೆಳಗ್ಗೆ 11.30ರ ಹೊತ್ತಿಗೆ ಇ.ಡಿ ಕಚೇರಿಗೆ ಆಗಮಿಸಿದರು. ಅಲ್ಲಿಂದ ನಿರಂತರ ವಿಚಾರಣೆಗೆ ಒಳಗಾದ ರಾಹುಲ್‌ ಮಧ್ಯೆ ಒಂದು ಬ್ರೇಕ್‌ ತೆಗೆದುಕೊಂಡಿದ್ದಾರೆ. ಬುಧವಾರವೂ ರಾತ್ರಿ 9.30ರವರೆಗೆ ವಿಚಾರಣೆ ಮುಂದುವರಿಯುವ ನಿರೀಕ್ಷೆ ಇದೆ. ಒಂದೊಮ್ಮೆ ಇನ್ನಷ್ಟು ವಿಚಾರಣೆಯ ಅಗತ್ಯವಿದ್ದರೆ ಅವರನ್ನು ಗುರುವಾರವೂ ಕರೆಸಿಕೊಳ್ಳುವ ಸಾಧ್ಯತೆ ಇದೆ.

ಬಂಧನ ಸಾಧ್ಯತೆ ಇದೆಯೇ?
ರಾಹುಲ್‌ ಗಾಂಧಿ ಅವರು ಇ.ಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿಲ್ಲ. ಹೀಗಾಗಿ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವ ಸಾಧ್ಯತೆ ಇದೆಯೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಇದೆ. ಆದರೆ, ರಾಹುಲ್‌ ವಿಚಾರಣೆಗೆ ಸಂಬಂಧಿಸಿ ಕಾಂಗ್ರೆಸ್‌ ನಡೆಸುತ್ತಿರುವ ಬೀದಿ ಹೋರಾಟ ಮತ್ತು ವಿಚಾರಣೆಗೆ ಇನ್ನೂ ಸಮಯಾವಕಾಶ ಇರುವುದರಿಂದ ಬಂಧನಕ್ಕೆ ಅವಸರ ಮಾಡಲಾರದು ಎಂಬ ಅಭಿಪ್ರಾಯವಿದೆ. ಜತೆಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ವಿಚಾರಣೆ ಇನ್ನೂ ನಡೆದಿಲ್ಲ. ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್‌ ಭನ್ಸಾಲ್‌ ಅವರನ್ನು ಇ.ಡಿ ವಿಚಾರಣೆ ನಡೆಸಿದೆ. ಸೋನಿಯಾ ಗಾಂಧಿ ಅವರ ವಿಚಾರಣೆಗೆ ಜೂನ್‌ 23ರ ದಿನ ನಿಗದಿಯಾಗಿದೆ. ಈ ಹೊತ್ತಿನಲ್ಲಿ ರಾಹುಲ್‌ ಬಂಧನದ ಅವಶ್ಯಕತೆ ಕಾಣಿಸುತ್ತಿಲ್ಲ ಎಂದು ತಜ್ಞರು ಹೇಳಿದ್ದಾರೆ.

ದಿಲ್ಲಿಯಲ್ಲಿ ಬೀದಿ ಕಾಳಗ
ರಾಹುಲ್‌ ಗಾಂಧಿ ಅವರನ್ನು ಇ.ಡಿ ವಿಚಾರಣೆಗೆ ಒಳಪಡಿಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ದಿಲ್ಲಿಯಲ್ಲಿ ಬುಧವಾರ ವಸ್ತುಶಃ ಬೀದಿ ಕಾಳಗವನ್ನೇ ನಡೆಸಿದೆ. ಕಾಂಗ್ರೆಸ್‌ ಕಚೇರಿ, ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಮತ್ತು ಎಪಿಜೆ ಅಬ್ದುಲ್‌ ಕಲಾಂ ರೋಡ್‌ನಲ್ಲಿರುವ ಇ.ಡಿ ಕಚೇರಿಯ ಮುಂದೆ ತೀವ್ರ ಪ್ರತಿಭಟನೆ ನಡೆದಿದೆ.

ಕಾಂಗ್ರೆಸ್‌ ಕಚೇರಿಯ ಮುಂಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕರ್ತರು ಬೆಳಗ್ಗಿನಿಂದಲೇ ಜಮಾಯಿಸಿದ್ದರು. ಅವರನ್ನು ತಡೆಯಲು ಪೊಲೀಸರು ಸರ್ವ ಪ್ರಯತ್ನಗಳನ್ನು ನಡೆಸಿದರೂ ಸಾಧ್ಯವಾಗಿಲ್ಲ. ಒಂದು ಹಂತದಲ್ಲಿ ಕಾರ್ಯಕರ್ತರನ್ನು ಬೆನ್ನಟ್ಟುತ್ತಾ ಪೊಲೀಸರು ಕಾಂಗ್ರೆಸ್‌ ಪ್ರಧಾನ ಕಚೇರಿಯನ್ನೂ ಪ್ರವೇಶಿಸಿದರು ಎಂದು ಆರೋಪಿಸಲಾಯಿತು. ಕೆಲವೊಂದು ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ಎತ್ತಿಕೊಂಡು ಹೋಗುವ ದೃಶ್ಯಗಳು ಕಂಡುಬಂದಿವೆ. ಈ ನಡುವೆ, ದಿಲ್ಲಿ ಪೊಲೀಸರು ಬಿಜೆಪಿಯ ಖಾಸಗಿ ಸೇನೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಆರೋಪಿಸಿದರು.

ಇ.ಡಿ ಕಚೇರಿಯ ಪರಿಸರದಲ್ಲಿ ಸೆಕ್ಷನ್‌ 144ರ ಅಡಿಯಲ್ಲಿ ನಿರ್ಬಂಧ ವಿಧಿಸಲಾಗಿದ್ದರೂ ಅದನ್ನು ಮೀರಿ ಕಾರ್ಯಕರ್ತರು ಕಚೇರಿ ಕಡೆಗೆ ಧಾವಿಸಿದರು. ಅವರನ್ನು ಹಿಮ್ಮೆಟ್ಟಿಸಲು ಪೊಲೀಸರು ಹರಸಾಹಸ ನಡೆಸಿದರು. ಇತ್ತ ಗುವಾಹಟಿಯಲ್ಲಿ ಎಸಿಪಿಯೊಬ್ಬರ ಮೇಲೆ ಕಾಂಗ್ರೆಸ್‌ ಪ್ರತಿಭಟನಾಕಾರರು ಹಲ್ಲೆ ಮಾಡಿದ ಆರೋಪವೂ ಕೇಳಿಬಂತು.
ಒಟ್ಟಾರೆಯಾಗಿ ಇ.ಡಿ ನಡೆಸುತ್ತಿರುವ ವಿಚಾರಣೆ ಮತ್ತು ದಿಲ್ಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಪ್ರತಿಭಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ. ಇದು ಯಾವಾಗ ಮುಗಿಯಲಿದೆ ಎನ್ನುವುದು ಇ.ಡಿ ಅಧಿಕಾರಿಗಳ ತೀರ್ಮಾನವನ್ನು ಅವಲಂಬಿಸಿದೆ.

ಇದನ್ನೂ ಓದಿ: ಕಾಂಗ್ರೆಸ್‌ ಪ್ರತಿಭಟನೆ ತಾರಕಕ್ಕೆ; ಇ ಡಿ ಕಚೇರಿ ಹೊರಗೆ ಟೈರ್‌ ಸುಟ್ಟ ಕಾರ್ಯಕರ್ತರು

Exit mobile version