Site icon Vistara News

ED Raid: ಇಡಿ ಭರ್ಜರಿ ಬೇಟೆ; ಕಾಂಗ್ರೆಸ್‌ ಮುಖಂಡನ ಆಪ್ತ ಕಾರ್ಯದರ್ಶಿ ಮನೆಯಿಂದ 25 ಕೋಟಿ ರೂ. ವಶ

ED Raid

ED Raid

ರಾಂಚಿ: ಜಾರಿ ನಿರ್ದೇಶನಾಲಯ (Enforcement Directorate)ದ ಅಧಿಕಾರಿಗಳು ಸೋಮವಾರ ಜಾರ್ಖಂಡ್‌ನ ರಾಜಧಾನಿ ರಾಂಚಿಯ ಅನೇಕ ಸ್ಥಳಗಳಲ್ಲಿ ಸರಣಿ ದಾಳಿ ನಡೆಸಿ ಭರ್ಜರಿ ಬೇಟೆಯಾಡಿದ್ದಾರೆ (ED Raid). ಈ ವೇಳೆ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ, ಕಾಂಗ್ರೆಸ್‌ ಮುಖಂಡ ಅಲಂಗೀರ್ ಆಲಂ (Alamgir Alam) ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ (Sanjiv Lal) ಮನೆಯಲ್ಲಿ ಲೆಕ್ಕವಿಲ್ಲದ 25 ಕೋಟಿ ರೂ.ಗಿಂತ ಅಧಿಕ ಹಣವನ್ನು ವಶಕ್ಕೆ ಪಡೆಯಲಾಗಿದೆ.

2023ರಲ್ಲಿ ಕೆಲವು ಯೋಜನೆಗಳ ಅನುಷ್ಠಾನಕ್ಕಾಗಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಇಡಿ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಎಂಜಿನಿಯರ್ ವೀರೇಂದ್ರ ರಾಮ್ ಎಂಬವರು ಬಂಧಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿಯ ಮನೆಯ ಮೇಲೆಯೂ ದಾಳಿ ಮಾಡಿದೆ. ಸದ್ಯ ನೋಟಿನ ಕಂತೆ ನೋಡಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ದಾಳಿ ವೇಳೆ ನಕಲಿ ಪ್ಯಾನ್ ಕಾರ್ಡ್‌ಗಳ ಮೂಲಕ ಶೆಲ್ ಕಂಪನಿಗಳನ್ನು ರಚಿಸುವುದರಿಂದ ಹಿಡಿದು ಚರ ಮತ್ತು ಸ್ಥಿರಾಸ್ತಿಗಳ ಖರೀದಿಗಾಗಿ ಕೋಟಿ ರೂ.ಗಳ ನಗದು ವಿನಿಮಯ ನಡೆಸಿದ ಮಾಹಿತಿಯೂ ಸಿಕ್ಕಿದೆ ಎಂದು ಇಡಿ ಮೂಲಗಳು ತಿಳಿಸಿವೆ.

ಸದ್ಯ ನೋಟಿನ ರಾಶಿಯನ್ನು ತೋರಿಸುವ ವಿಡಿಯೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್‌ ಆಗಿದೆ. ಈ ದಾಳಿಯ ಬಗ್ಗೆ ಮಾತನಾಡಿದ ಜಾರ್ಖಂಡ್ ಬಿಜೆಪಿ ವಕ್ತಾರ ಪ್ರತುಲ್ ಶಾಹದೇವ್, ”ಜಾರ್ಖಂಡ್‌ನಲ್ಲಿ ಭ್ರಷ್ಟಾಚಾರ ಕೊನೆಗೊಳ್ಳುತ್ತಿಲ್ಲ. ಈ ಹಣಗಳನ್ನು ಇವರು (ಕಾಂಗ್ರೆಸ್‌) ಚುನಾವಣೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕುʼʼ ಎಂದು ಆಗ್ರಹಿಸಿದ್ದಾರೆ.

ಜಾರ್ಖಂಡ್‌ನ ಮತ್ತೋರ್ವ ಬಿಜೆಪಿ ಸಂಸದ ದೀಪಕ್ ಪ್ರಕಾಶ್ ಮಾತನಾಡಿ, “ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕಾಂಗ್ರೆಸ್ ಮತ್ತು ಆರ್‌ಜೆಡಿ ಜಾರ್ಖಂಡ್ ಅನ್ನು ‘ಲೂಟ್‌ಖಂಡ್‌ʼ ಆಗಿ ಪರಿವರ್ತಿಸುವ ಕೆಲಸವನ್ನು ಮಾಡುತ್ತಿವೆ. ಇಂದು ಮತ್ತೆ 25 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದ್ದು, ಅದು ಆಡಳಿತ ಪಕ್ಷದ ಸಚಿವರಿಗೆ ಸೇರಿದೆ. ಇದು ಜಾರ್ಖಂಡ್‌ನ ಜನರಿಗೆ ಮಾಡಿದ ಅವಮಾನ” ಎಂದು ವಾಗ್ದಾಳಿ ನಡೆಸಿದ್ದಾರೆ.

ವಿವಿಧ ಕಡೆ ದಾಳಿ

ರಾಂಚಿಯ ಸೈಲ್ ಸಿಟಿ ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ತನಿಖಾ ಸಂಸ್ಥೆ ಏಕಕಾಲದಲ್ಲಿ ದಾಳಿ ಕೈಗೊಂಡಿದೆ. ಇಡಿಯ ಒಂದು ತಂಡ ಸೋಮವಾರ ಬೆಳಗ್ಗೆ, ರಸ್ತೆ ನಿರ್ಮಾಣ ವಿಭಾಗದ ಇಂಜಿನಿಯರ್ ವಿಕಾಸ್ ಕುಮಾರ್ ಅವರ ಮನೆ ಮೇಲೂ ದಾಳಿ ನಡೆಸಿತ್ತು. ಇನ್ನೊಂದು ತಂಡ ಬರಿಯಾತು, ಮೊರಬದಿ ಮತ್ತು ಬೋಡಿಯಾ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

ಇದನ್ನೂ ಓದಿ: Shiv Sena : ಇಡಿ ದಾಳಿಗೆ ಒಳಗಾಗಿದ್ದ ಉದ್ಧವ್​ ಬಣದ ಶಾಸಕ, ಶಿಂಧೆ ಬಣಕ್ಕೆ ಸೇರ್ಪಡೆ

ಕಳೆದ ವರ್ಷ ಬಂಧಿತರಾದ ವೀರೇಂದ್ರ ರಾಮ್‌ ಅಕ್ಮವಾಗಿ 100 ಕೋಟಿ ರೂ. ಮೌಲ್ಯದ ಆಸ್ತಿ ಗಳಿಸಿದ ಆರೋಪ ಹೊತ್ತಿದ್ದಾರೆ. ಜತೆಗೆ ಜಾರ್ಖಂಡ್‌ನ ಕೆಲವು ರಾಜಕಾರಣಿಗಳೊಂದಿಗಿನ ವಹಿವಾಟಿನ ವಿವರಗಳನ್ನು ಅವರಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.

Exit mobile version