Site icon Vistara News

ED Raid: ʼಜಲ್ ಜೀವನ್ ಮಿಷನ್’ ಅಕ್ರಮ; ರಾಜಸ್ಥಾನದ 25 ಸ್ಥಳಗಳಲ್ಲಿ ಇಡಿ ದಾಳಿ

ED

ಜೈಪುರ: ವಿಧಾನಸಭೆ ಚುನಾವಣೆಯ (Rajasthan Assembly election) ಕಾವು ಏರುತ್ತಿರುವ ರಾಜಸ್ಥಾನ (Rajasthan) ರಾಜ್ಯದ 25 ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು Enforcement directorate) ಇಂದು ದಾಳಿ (ED Raid) ನಡೆಸಿದ್ದಾರೆ. ಕೇಂದ್ರದ ‘ಜಲ್ ಜೀವನ್ ಮಿಷನ್’ಗೆ (Jal Jeevan mission scam) ಹಣ ವರ್ಗಾವಣೆ ಅಕ್ರಮದ ತನಿಖೆಯ ಭಾಗವಾಗಿ 25 ಸ್ಥಳಗಳಲ್ಲಿ ಶೋಧ ನಡೆದಿದೆ.

ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನ ರಾಜ್ಯದ ಕೆಲವು ಇಂಜಿನಿಯರ್‌ಗಳು, ಗುತ್ತಿಗೆದಾರರು ಮತ್ತು ರಾಜ್ಯ ಸರ್ಕಾರದ ಮಾಜಿ ಅಧಿಕಾರಿಗಳ ಮೇಲೆ ದಾಳಿ ನಡೆದಿದ್ದು, ಈ ಪ್ರಕರಣದಲ್ಲಿ ಇವರಿಗೆ ಸಂಬಂಧವಿದೆ ಎಂದು ಶಂಕಿಸಲಾಗಿದೆ. ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೋಧ್ ಅಗರ್ವಾಲ್ ಅವರ ಮನೆ ಸೇರಿದಂತೆ ಜೈಪುರ ಮತ್ತು ದೌಸಾದಲ್ಲಿ ಇಡಿ ದಾಳಿ ನಡೆಸಿತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಶೋಧಗಳನ್ನು ನಡೆಸಲಾಗುತ್ತಿದೆ.

ಸೆಪ್ಟೆಂಬರ್ 1ರಂದು ಇಡಿ ಅಧಿಕಾರಿಗಳು ರಾಜಸ್ಥಾನದ ಹಲವು ನಗರಗಳಲ್ಲಿ ಇದೇ ರೀತಿಯ ದಾಳಿಗಳನ್ನು ನಡೆಸಿದ್ದರು. ರಾಜಸ್ಥಾನ ಪೊಲೀಸರು ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಆಧರಿಸಿ ಇಡಿ ದಾಳಿ ನಡೆದಿದೆ. ಬಿಜೆಪಿ ರಾಜ್ಯಸಭಾ ಸಂಸದ ಕಿರೋಡಿ ಲಾಲ್ ಮೀನಾ ಈ ವರ್ಷ ಜೂನ್‌ನಲ್ಲಿ ರಾಜ್ಯದಲ್ಲಿ ಕೇಂದ್ರ ಸರ್ಕಾರದ ʼಜಲ್ ಜೀವನ್ ಮಿಷನ್’ ಅನುಷ್ಠಾನದಲ್ಲಿ ₹ 20,000 ಕೋಟಿ ಹಗರಣ ನಡೆದಿದೆ ಎಂದು ಆರೋಪಿಸಿದ್ದರು. ಯೋಜನೆಯಲ್ಲಿ ನಕಲಿ ಅನುಭವ ಪ್ರಮಾಣ ಪತ್ರದ ಆಧಾರದ ಮೇಲೆ ಎರಡು ಸಂಸ್ಥೆಗಳಿಗೆ ₹900 ಕೋಟಿ ಮೊತ್ತದ ಟೆಂಡರ್ ನೀಡಲಾಗಿದೆ ಎನ್ನಲಾಗಿದೆ.

ʼಜಲ್ ಜೀವನ್ ಮಿಷನ್’ ಮನೆಯ ಟ್ಯಾಪ್ ಸಂಪರ್ಕಗಳ ಮೂಲಕ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಹೊಂದಿದೆ. ಕಳೆದ ತಿಂಗಳು, ರಾಜಧಾನಿ ಜೈಪುರ ಮತ್ತು ಸಿಕರ್‌ನಲ್ಲಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರ ಅವರ ನಿವಾಸಗಳ ಮೇಲೆ ಇಡಿ ದಾಳಿ ನಡೆಸಿತ್ತು. ಇದಲ್ಲದೆ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಅವರನ್ನು ವಿಚಾರಣೆಗೆ ಕರೆಸಲಾಯಿತು.

ಚುನಾವಣೆಯ ಸಮಯದಲ್ಲಿ ಈ ಕ್ರಮದ ಉದ್ದೇಶವನ್ನು ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ ಟೀಕಿಸಿದೆ. ರಾಜಸ್ಥಾನ ವಿಧಾನಸಭೆಯ ಎಲ್ಲಾ 200 ಸ್ಥಾನಗಳಿಗೆ ನವೆಂಬರ್ 25ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.

Exit mobile version