ಹೊಸದಿಲ್ಲಿ: ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಜಾರಿ ನಿರ್ದೇಶನಾಲಯದ ಸಮನ್ಸ್‌ಗೆ ಕ್ಯಾರೇ ಎನ್ನದೆ ಮಧ್ಯಪ್ರದೇಶದ ಚುನಾವಣಾ ರ್ಯಾಲಿಗೆ ತೆರಳಿದ್ದರೆ, ಇತ್ತ ಅವರ ಸಚಿವ ಸಂಪುಟದ ಸದಸ್ಯರ ಮನೆಗೆ ಇಡಿ ದಾಳಿ (ED Raid) ನಡೆಸಿದೆ.
ಗುರುವಾರ ಬೆಳಗ್ಗೆ ದಿಲ್ಲಿಯ ಸಚಿವ ರಾಜ್ ಕುಮಾರ್ ಆನಂದ್ ಅವರ ನಿವಾಸಕ್ಕೆ ಇಡಿ ದಾಳಿ ಮಾಡಿದೆ. ಸಿವಿಲ್ ಲೈನ್ಸ್ ಪ್ರದೇಶದಲ್ಲಿನ ಸಚಿವರ ನಿವಾಸ ಹೊರತುಪಡಿಸಿ, ಅವರಿಗೆ ಸಂಬಂಧಿಸಿದ 9 ಸ್ಥಳಗಳಲ್ಲಿ ಇಡಿ ದಾಳಿ ನಡೆಯುತ್ತಿದೆ. ದೆಹಲಿಯ ಮದ್ಯ ನೀತಿಗೆ ಸಂಬಂಧಿಸಿದಂತೆ ಮನಿ ಲಾಂಡರಿಂಗ್ ತನಿಖೆಯ ಕುರಿತು ಕೇಜ್ರಿವಾಲ್ ಅವರನ್ನು ಪ್ರಶ್ನಿಸಲಾಗಿದ್ದರೆ, ಕಸ್ಟಮ್ಸ್ ವಂಚನೆಗಾಗಿ ಆಮದು ಮಾಡಿಕೊಳ್ಳುವಲ್ಲಿ ಸುಳ್ಳು ಘೋಷಣೆಗಳ ಆರೋಪದ ಮೇಲೆ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಸಲ್ಲಿಸಿದ ಚಾರ್ಜ್ ಶೀಟ್ ಕಾರಣ ರಾಜ್ ಕುಮಾರ್ ಆನಂದ್ ಅವರ ಆವರಣದಲ್ಲಿ ದಾಳಿಗಳು ನಡೆದಿವೆ.
ಇದರಲ್ಲಿ ಅಂತಾರಾಷ್ಟ್ರೀಯ ಹವಾಲಾ ವಹಿವಾಟಿನ ಮೊತ್ತ ₹7 ಕೋಟಿಗೂ ಹೆಚ್ಚು ಎಂದು ಮೂಲಗಳು ತಿಳಿಸಿವೆ. ಈ ವರ್ಷದ ಆರಂಭದಲ್ಲಿ ಸಚಿವರಾಗಿದ್ದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ರಾಜೀನಾಮೆ ನೀಡಿದ ನಂತರ ಪಟೇಲ್ ನಗರದ ಶಾಸಕ, 57 ವರ್ಷದ ಕಾರ್ಮಿಕ ಸಚಿವ ರಾಜ್ ಕುಮಾರ್ ಆನಂದ್ ಅವರಿಗೆ ಶಿಕ್ಷಣ ಮತ್ತು ಆರೋಗ್ಯ ಸಚಿವಾಲಯಗಳನ್ನು ಹಂಚಲಾಯಿತು. ನಂತರ ಸೌರಭ್ ಭಾರದ್ವಾಜ್‌ಗೆ ಆರೋಗ್ಯ, ಅತಿಶಿಗೆ ಶಿಕ್ಷಣ ನೀಡಲಾಗಿತ್ತು.
ಗುರುವಾರ ಇಡಿ ನೀಡಿದ ಸಮನ್ಸ್ ಅನುಗುಣವಾಗಿ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಲಿಲ್ಲ. ಬದಲಿಗೆ ಮಧ್ಯಪ್ರದೇಶದಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ರೋಡ್ ಶೋ ನಡೆಸಲಿದ್ದಾರೆ. ಇಡಿ ಅಕ್ಟೋಬರ್ 30ರಂದು ಕೇಜ್ರಿವಾಲ್ ಅವರಿಗೆ ಸಮನ್ಸ್ ನೋಟಿಸ್ ಜಾರಿ ಮಾಡಿದ್ದು, ನವೆಂಬರ್ 2ರಂದು ಬೆಳಿಗ್ಗೆ 11 ಗಂಟೆಗೆ ಇಡಿ ಪ್ರಧಾನ ಕಚೇರಿಗೆ ಹಾಜರಾಗುವಂತೆ ಹೇಳಿತ್ತು. ಕೇಜ್ರಿವಾಲ್ ಅವರು ಅದಕ್ಕೆ ಹಾಜರಾಗುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಆಪ್ ಪಕ್ಷ ಯಾವುದೇ ಹೇಳಿಕೆ ನೀಡಿರಲಿಲ್ಲ. ಕೇಜ್ರಿವಾಲ್ ಅವರನ್ನು ಬಂಧಿಸುವ ಬಗ್ಗೆ ಮಾಹಿತಿ ಇದೆ ಎಂದು ಎಎಪಿ ನಾಯಕರು ಒಂದು ದಿನ ಮೊದಲು ಹೇಳಿದ್ದರು.
ಈ ನಡುವೆ ಅರವಿಂದ ಕೇಜ್ರಿವಾಲ್ ಅವರು ಸಮನ್ಸ್‌ನ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಕಟುವಾದ ಪತ್ರವೊಂದನ್ನು ಬರೆದಿದ್ದಾರೆ. ಇಡಿ ನೋಟಿಸ್ ಅನ್ನು ʼಅಕ್ರಮ’ ಮತ್ತು ʼರಾಜಕೀಯ ಪ್ರೇರಿತ’ ಎಂದು ಕರೆದಿದ್ದಾರೆ. “ಸಮನ್ಸ್ ನೋಟಿಸ್ ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತವಾಗಿದೆ. ಬಿಜೆಪಿಯ ಒತ್ತಾಯದ ಮೇರೆಗೆ ನೋಟಿಸ್ ಕಳುಹಿಸಲಾಗಿದೆ. ನಾಲ್ಕು ರಾಜ್ಯಗಳಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಲು ನನಗೆ ಸಾಧ್ಯವಾಗದಂತೆ ಖಚಿತಪಡಿಸಿಕೊಳ್ಳಲು ನೋಟಿಸ್ ಕಳುಹಿಸಲಾಗಿದೆ. ಇಡಿ ತಕ್ಷಣ ನೋಟಿಸ್ ಹಿಂಪಡೆಯಬೇಕು” ಎಂದು ಕೇಜ್ರಿವಾಲ್ ಹೇಳಿದ್ದರು.
ಇದನ್ನೂ ಓದಿ: Arvind Kejriwal: ಇಡಿ ಸಮನ್ಸ್ ಧಿಕ್ಕರಿಸಿ ಚುನಾವಣೆ ಪ್ರಚಾರಕ್ಕೆ ತೆರಳಿದ ಕೇಜ್ರಿವಾಲ್, ಇಡಿ ಮುಂದೇನು ಮಾಡಬಹುದು?