ನವದೆಹಲಿ: ಶಿಕ್ಷಣವು ಲಾಭ ಗಳಿಸುವ ವ್ಯಾಪಾರವಲ್ಲ ಮತ್ತು ಬೋಧನಾ ಶುಲ್ಕವೂ ಯಾವಾಗಲೂ ಕೈಗೆಟುಕುವ ರೀತಿಯಲ್ಲಿರಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಸೋಮವಾರ ಹೇಳಿದೆ. ಆಂಧ್ರ ಪ್ರದೇಶ ಸರ್ಕಾರವು ವಾರ್ಷಿಕ ಬೋಧನಾ ಶುಲ್ಕವನ್ನು 24 ಲಕ್ಷ ರೂಪಾಯಿಗೇರಿಸಿದ ನಿರ್ಧಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಆಂಧ್ರಪ್ರದೇಶವು ಈ ಹಿಂದೆ ಚಾಲ್ತಿಯಲ್ಲಿದ್ದ ಮೊತ್ತಕ್ಕಿಂತ ಏಳು ಪಟ್ಟು ಹೆಚ್ಚು ಬೋಧನಾ ಶುಲ್ಕವನ್ನು ಏರಿಕೆ ಮಾಡಿತ್ತು.
ಜಸ್ಟೀಸ್ ಎಂ ಆರ್ ಶಾ ಹಾಗೂ ಸುಧಾಂಶು ಧುಲಿಯಾ ಅವರಿದ್ದ ಪೀಠವು ಈ ವಿಷಯದಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ. ಎಂಬಿಬಿಎಸ್ ಕೋರ್ಸುಗಳ ಬೋಧನಾ ಶುಲ್ಕವನ್ನು ಏರಿಕೆ ಮಾಡಿದ್ದ ಸರ್ಕಾರದ ಆದೇಶವನ್ನು ಆಂಧ್ರ ಪ್ರದೇಶ ಹೈಕೋರ್ಟ್ ರದ್ದುಪಡಿಸಿತ್ತು. ಆ ಆದೇಶವನ್ನು ಆಂಧ್ರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.
ಬೋಧನಾ ಶುಲ್ಕ ಹೆಚ್ಚಳ ರದ್ದು ಮಾಡಿರುವ ಮತ್ತು 2017 ಸೆಪ್ಟೆಂಬರ್ 6ರಂದು ನೀಡಿರುವ ಆದೇಶವನ್ನು ತಿರಸ್ಕರಿಸಿರುವ ಹೈಕೋರ್ಟ್ ತೀರ್ಪಿನಲ್ಲಿ ಯಾವುದೇ ದೋಷಗಳಿಲ್ಲ. ವರ್ಷಕ್ಕೆ ಬೋಧನಾ ಶುಲ್ಕವನ್ನು 24 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಅಂದರೆ, ಈ ಹಿಂದಿನದ್ದಕ್ಕೆ ಹೋಲಿಸಿದರೆ 7 ಪಟ್ಟು ಹೆಚ್ಚು. ಇದು ನ್ಯಾಯಸಮ್ಮತವಲ್ಲ. ಶಿಕ್ಷಣ ಎನ್ನುವುದು ಲಾಭ ಮಾಡಿಕೊಳ್ಳುವ ವ್ಯಾಪಾರವಲ್ಲ. ಹಾಗಾಗಿ ಬೋಧನಾ ಶುಲ್ಕವೂ ಯಾವಾಗಲೂ ಕೈಗೆಟುಕುವ ರೀತಿಯಲ್ಲಿರಬೇಕು ಎಂದು ಪೀಠ ಹೇಳಿದೆ.
ಇದನ್ನೂ ಓದಿ | ಸರ್ಕಾರಿ ಶಾಲೆಗೆ ಪೋಷಕರಿಂದ ₹100 ವಂತಿಗೆ ಸುತ್ತೋಲೆ ವಾಪಸ್; ಶಿಕ್ಷಣ ತಜ್ಞರು, ಪ್ರತಿಪಕ್ಷಗಳ ವಿರೋಧಕ್ಕೆ ಮಣಿದ ಸರ್ಕಾರ