Site icon Vistara News

EFTA: 4 ರಾಷ್ಟ್ರಗಳ ಒಕ್ಕೂಟದೊಂದಿಗೆ ಭಾರತದ ವ್ಯಾಪಾರ ಒಪ್ಪಂದ: ಇನ್ನು ಯಾವೆಲ್ಲ ವಸ್ತುಗಳು ನಮಗೆ ಅಗ್ಗವಾಗಿ ಸಿಗಲಿವೆ?

EFTA

EFTA

ನವದೆಹಲಿ: ಭಾರತ ಮತ್ತು ನಾಲ್ಕು ಯುರೋಪಿಯನ್ ರಾಷ್ಟ್ರಗಳ ಒಕ್ಕೂಟ ಇಎಫ್‌ಟಿಎ (European Free Trade Association) ಭಾನುವಾರ ವ್ಯಾಪಾರ ಮತ್ತು ಹೂಡಿಕೆಗಳನ್ನು ಹೆಚ್ಚಿಸಲು ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (Trade and Economic Partnership Agreement) ಸಹಿ ಹಾಕಿದವು. ಇದು ಆರ್ಥಿಕ ಸಹಕಾರದ ಹೊಸ ಯುಗಕ್ಕೆ ನಾಂದಿ ಹಾಡಲಿದೆ ಎಂದೇ ವಿಶ್ಲೇಷಿಲಾಗುತ್ತಿದೆ. ಈ ವ್ಯಾಪಾರ ಒಪ್ಪಂದದ ಪರಿಣಾಮವಾಗಿ ಭಾರತೀಯ ಗ್ರಾಹಕರು ಸ್ವಿಸ್‌ ಕೈ ಗಡಿಯಾರ, ಗಡಿಯಾರ, ಚಾಕೊಲೇಟ್‌, ಬಿಸ್ಕೆಟ್‌ಗಳಂತಹ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಭಾರತವು ಇಎಫ್‌ಟಿಎ ಒಕ್ಕೂಟದೊಂದಿಗಿನ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಈ ಸರಕುಗಳ ಮೇಲೆ ಕಸ್ಟಮ್ಸ್ ಸುಂಕವನ್ನು ಹಂತ ಹಂತವಾಗಿ ತೆಗೆದು ಹಾಕಲಿದೆ.

ಯಾವೆಲ್ಲ ದೇಶಗಳು?

ಐಸ್‌ಲ್ಯಾಂಡ್‌, ಲಿಚೆನ್ಸ್ಟೇನ್, ನಾರ್ವೆ ಮತ್ತು ಸ್ವಿಜರ್‌ಲ್ಯಾಂಡ್‌ ಒಳಗೊಂಡ ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್‌ ಒಪ್ಪಂದವು ಜಾರಿಗೆ ಬರಲು ಒಂದು ವರ್ಷ ತೆಗೆದುಕೊಳ್ಳಲಿದೆ. ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, “ನ್ಯಾಯಯುತ, ನ್ಯಾಯ ಸಮ್ಮತ ಮತ್ತು ಪರಸ್ಪರ ಪ್ರಯೋಜನಕಾರಿಯಾದ ಈ ಒಪ್ಪಂದವು ಎರಡೂ ಕಡೆಗಳಲ್ಲಿ ಬೃಹತ್ ವ್ಯಾಪಾರ ಸಾಧ್ಯತೆಯನ್ನು ತೆರೆಯಲಿದೆʼʼ ಎಂದು ಹೇಳಿದರು.

ವ್ಯಾಪಾರ, ಹೂಡಿಕೆ

ಈ ಒಪ್ಪಂದವು ಆಟೋ ಮೊಬೈಲ್, ಆಹಾರ ಸಂಸ್ಕರಣೆ, ರೈಲ್ವೆ ಮತ್ತು ಹಣಕಾಸು ವಲಯಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸಲಿದ್ದು, ಪರಿಣಾಮವಾಗಿ ಔಷಧ, ಉಡುಪು, ರಾಸಾಯನಿಕ ಮತ್ತು ಯಂತ್ರೋಪಕರಣಗಳ ರಫ್ತು ಹೆಚ್ಚಿಸಲು ಭಾರತಕ್ಕೆ ಸಹಾಯ ಮಾಡಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಯುರೋಪಿಯನ್‌ ಯೂನಿಯನ್‌, ಅಮೆರಿಕ, ಇಂಗ್ಲೆಂಡ್‌ ಮತ್ತು ಚೀನಾದ ನಂತರ ಭಾರತವು ಇಎಫ್‌ಟಿಎ ಐದನೇ ಅತಿ ದೊಡ್ಡ ವ್ಯಾಪಾರ ಪಾಲುದಾರನಾಗಿದ್ದು, 2023ರಲ್ಲಿ ಒಟ್ಟು ದ್ವಿಮುಖ ವ್ಯಾಪಾರವು 25 ಬಿಲಿಯನ್ ಡಾಲರ್ ತಲುಪಿದೆ.

ಟಿಇಪಿಎ ಅಡಿಯಲ್ಲಿ ಭಾರತವು ನಾಲ್ಕು ಯುರೋಪಿಯನ್ ರಾಷ್ಟ್ರಗಳ ಒಕ್ಕೂಟದಿಂದ 15 ವರ್ಷಗಳವರೆಗೆ 100 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆಯನ್ನು ಪಡೆಯಲಿದೆ. ಈ ಹೂಡಿಕೆಗಳ ಮೂಲಕ ಭಾರತದಲ್ಲಿ ಸುಮಾರು 10 ಲಕ್ಷ ನೇರ ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: UCO Bank: ಯುಕೋ ಬ್ಯಾಂಕ್‌ನಲ್ಲಿ 820 ಕೋಟಿ ರೂ. ಹಗರಣ; 67 ಕಡೆ ಸಿಬಿಐ ರೇಡ್‌

ಒಪ್ಪಂದದ ಪ್ರಕಾರ ಟ್ಯೂನಾ ಮತ್ತು ಸಾಲ್ಮನ್‌ನಂತಹ ಸಮುದ್ರಾಹಾರಗಳು, ಆಲಿವ್ ಮತ್ತು ಆವಕಾಡೊಗಳಂತಹ ಹಣ್ಣುಗಳು, ಕಾಫಿ ಕ್ಯಾಪ್ಸೂಲ್‌ಗಳು, ಕಾಡ್ ಲಿವರ್ ಮತ್ತು ಆಲಿವ್ ಎಣ್ಣೆಯಂತಹ ವಿವಿಧ ಎಣ್ಣೆಗಳು, ವಿವಿಧ ಸಿಹಿತಿಂಡಿಗಳು ಮತ್ತು ಚಾಕೊಲೇಟ್, ಬಿಸ್ಕೆಟ್‌ ಸೇರಿದಂತೆ ಸಂಸ್ಕರಿಸಿದ ಆಹಾರಗಳು, ಸ್ಮಾರ್ಟ್‌ ಫೋನ್‌, ಬೈಸಿಕಲ್ ಬಿಡಿ ಭಾಗಗಳು, ವೈದ್ಯಕೀಯ ಉಪಕರಣಗಳು, ಕೈ ಗಡಿಯಾರಗಳು, ಗಡಿಯಾರಗಳು, ಔಷಧಗಳು, ಜವುಳಿ, ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು ಮತ್ತು ಯಂತ್ರೋಪಕರಣಗಳು ಒಳಗೊಂಡಿರುವ ಇತರ ಉತ್ಪನ್ನಗಳು, ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲಾಗುವುದು ಎಂದು ಗ್ಲೋಬಲ್‌ ಟ್ರೇಡ್‌ ರಿಸರ್ಚ್‌ ಇನಿಶಿಯೇಟಿವ್‌ನ ಸ್ಥಾಪಕ ಅಜಯ್‌ ಶ್ರೀವಾಸ್ತವ ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version