ಶ್ರೀನಗರ: ದೇಶಾದ್ಯಂತ ಮುಸ್ಲಿಮರು ತ್ಯಾಗ, ಬಲಿದಾನದ ಸಂದೇಶ ಸಾರುವ ಬಕ್ರೀದ್ (Bakrid 2024) ಸಡಗರ-ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮಸೀದಿಗೆ ತೆರಳಿ, ನಮಾಜ್ ಮಾಡುವ ಮೂಲಕ, ತಮ್ಮ ಕೈಲಾದಷ್ಟು ದಾನ-ಧರ್ಮವನ್ನೂ ಮಾಡುವ ಮೂಲಕ ಹಬ್ಬವನ್ನು ಆಚರಿಸುತ್ತಿದ್ದಾರೆ. ಆದರೆ, ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಜಾಮಾ ಮಸೀದಿಯಲ್ಲಿ (Jama Masjid) ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮರು ನಮಾಜ್ (Eid Prayers) ಮಾಡಲು ಭದ್ರತಾ ಸಿಬ್ಬಂದಿಯು ಅವಕಾಶ ಮಾಡಿಕೊಟ್ಟಿಲ್ಲ ಎಂದು ತಿಳಿದುಬಂದಿದೆ.
“ಜಾಮಾ ಮಸೀದಿಯಲ್ಲಿ ಸತತ ಆರನೇ ವರ್ಷವೂ ಮುಸ್ಲಿಮರು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಭದ್ರತಾ ಸಿಬ್ಬಂದಿಯು ಅವಕಾಶ ಮಾಡಿಕೊಟ್ಟಿಲ್ಲ. ಸೋಮವಾರ (ಜೂನ್ 17) ಬೆಳಗ್ಗೆ ಜಾಮಾ ಮಸೀದಿಯಲ್ಲಿ ನಮಾಜ್ ಮಾಡಲಾಯಿತು. ಇದಾದ ನಂತರ 9 ಗಂಟೆಗೆ ಈದ್ ಪ್ರಾರ್ಥನೆ ಕಾರ್ಯಕ್ರಮ ಇತ್ತು. ಆದರೆ, ಭದ್ರತಾ ಸಿಬ್ಬಂದಿಯು ಮಸೀದಿಯ ಗೇಟ್‌ಗೆ ಬೀಗ ಹಾಕಿ, 9 ಗಂಟೆಯ ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲ ಎಂಬುದಾಗಿ ಹೇಳಿದರು” ಎಂದು ಮಸೀದಿಯಲ್ಲಿ ನಮಾಜ್ ಪ್ರಕ್ರಿಯೆ ನಡೆಸಿಕೊಡಬೇಕಿದ್ದ ಅಂಜುಮಾನ್ ಔಕಾಫ್ ಬೇಸರ ವ್ಯಕ್ತಪಡಿಸಿದ್ದಾರೆ.
ಬಾರಾಮುಲ್ಲಾದಲ್ಲಿ ಬಕ್ರೀದ್ ಆಚರಣೆ
Eid prayers offered peacefully throughout Baramulla.@JmuKmrPolice@KashmirPolice@DIGBaramulla@DCBaramulla@Amod_India pic.twitter.com/EqLp1nnpsX
— Baramulla Police (بارہمولہ پولیس) (@BaramullaPolice) June 17, 2024
“ಜಾಮಾ ಮಸೀದಿಯಲ್ಲಿ ನಿರಂತರವಾಗಿ ನಮಾಜ್ ಮಾಡಲು ನಿರ್ಬಂಧ ವಿಧಿಸಲಾಗುತ್ತಿದೆ. ಬಕ್ರೀದ್‌ನಂತಹ ಸಂದರ್ಭಗಳಲ್ಲಿ ಪ್ರಾರ್ಥನೆ ಸಲ್ಲಿಸುವುದು ಧಾರ್ಮಿಕ ಆಚರಣೆ, ಅಧ್ಯಾತ್ಮಿಕ ಪ್ರತಿಬಿಂಬ ಹಾಗೂ ಸಾಮರಸ್ಯದ ಸಂಕೇತವಾಗಿದೆ. ಹಾಗಾಗಿ, ನಿರಂತರವಾಗಿ ಪ್ರಾರ್ಥನೆಗೆ ನಿರ್ಬಂಧವನ್ನು ವಿಧಿಸುವುದು ಜಮ್ಮು-ಕಾಶ್ಮೀರದಲ್ಲಿ ಎಲ್ಲವೂ ಸುಸೂತ್ರವಾಗಿಲ್ಲ ಎಂಬುದಕ್ಕೆ ಕೈಗನ್ನಡಿಯಾಗಿದೆ. ಪದೇಪದೆ ನಿರ್ಬಂಧಗಳನ್ನು ಹೇರುವುದು, ಜನರ ಆಚರಣೆಗಳಿಗೆ ಅಡ್ಡಿ ಮಾಡುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ 2019ರಿಂದಲೂ ಬಕ್ರೀದ್ ಸೇರಿ ಯಾವುದೇ ಹಬ್ಬಗಳ ಸಂದರ್ಭದಲ್ಲಿ ಜಾಮಾ ಮಸೀದಿ ಹಾಗೂ ಈದ್ಗಾ ಮೈದಾನದಲ್ಲಿ ಮುಸ್ಲಿಮರು ನಮಾಜ್ ಮಾಡುವುದನ್ನು ನಿಷೇಧಿಸಲಾಗಿದೆ. ಶ್ರೀನಗರದಲ್ಲಿ ಉಗ್ರರ ಉಪಟಳ ಜಾಸ್ತಿ ಇರುವ ಕಾರಣ ಭದ್ರತಾ ದೃಷ್ಟಿಯಿಂದಾಗಿ ಭದ್ರತಾ ಸಿಬ್ಬಂದಿಯು ಸಾವಿರಾರು ಮುಸ್ಲಿಮರು ಬಕ್ರೀದ್ ದಿನ ನಮಾಜ್ ಮಾಡುವುದನ್ನು ನಿರ್ಬಂಧಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಪ್ರತಿ ವರ್ಷವೂ ನಮಾಜ್‌ಗೆ ತಡೆ ನೀಡುತ್ತಿರುವುದಕ್ಕೆ ಮುಸ್ಲಿಮರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ