ಮುಂಬಯಿ: ಮಹಾರಾಷ್ಟ್ರದ ೨೦ನೇ ಮುಖ್ಯಮಂತ್ರಿಯಾಗಿ ಶಿವಸೇನೆಯ ಬಂಡಾಯ ನಾಯಕ ಏಕನಾಥ ಶಿಂಧೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯಪಾಲ ಭಗತ್‌ಸಿಂಗ್ ಕೋಶ್ಯಾರಿ ಏಕನಾಥ ಶಿಂಧೆಯವರಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ನಾಯಕ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಕೆಲವೇ ಕೆಲವು ನಾಯಕರು,ಎಲ್ಲ ಶಾಸಕರು ಉಪಸ್ಥಿತರಿದ್ದರು. ಶಿವಸೇನೆಯ ಬಂಡಾಯ ಶಾಸಕರು ಬಂದಿರಲಿಲ್ಲ. ಶಿಂಧೆಯವರ ಕುಟುಂಬದ ಸದಸ್ಯರು ಸಂಭ್ರಮದಿಂದ ಭಾಗವಹಿಸಿದ್ದರು.
ಬಿಜೆಪಿಯ ನಾಯಕ ಫಡ್ನವಿಸ್ ಉಪಮುಖ್ಯಮಂತ್ರಿಯಾಗಿ ಸರ್ಕಾರದ ಭಾಗವಾಗಬೇಕೆಂದು ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಗುರುವಾರ ಸಂಜೆ ನವ ದೆಹಲಿಯಲ್ಲಿ ಹೇಳಿಕೆ ನೀಡಿದ್ದರಿಂದ ಅವರೂ ತರಾತುರಿಯಲ್ಲಿ ಪ್ರಮಾಣವಚನ ಸ್ವೀಕರಿಸುವಂತಾಯಿತು. ನಡ್ಡಾ ಹೇಳಿಕೆಯ ಬೆನ್ನಲ್ಲೇ ದೇವೇಂದ್ರ ಫಡ್ನವಿಸ್ ಸರ್ಕಾರದ ಭಾಗವಾಗಲು ನಿರ್ಧರಿಸಿದ್ದಾರೆ ಎಂದು ಗೃಹ ಸಚಿವ ಅಮತ್ ಶಾ ಕೂಡ ಹೇಳಿಕೆ ನೀಡಿದ್ದರು.
ಗುರುವಾರ ಮುಖ್ಯಮಂತ್ರಿಯಾಗಿ ಏಕನಾಥ ಶಿಂಧೆಯವರ ಹೆಸರು ಪ್ರಕಟಿಸಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ “ನಾನು ಹೊಸ ಸರ್ಕಾರದಲ್ಲಿ ಯಾವುದೇ ಹುದ್ದೆ ನಿಭಾಯಿಸುವುದಿಲ್ಲ. ಇದು ಬಿಜೆಪಿ ಸರ್ಕಾರಲ್ಲ, ಬದಲಿಗೆ ಶಿಂಧೆ ಸರ್ಕಾರವಾಗಿರುತ್ತದೆʼʼ ಎಂದಿದ್ದರು.
ಇದನ್ನೂ ಓದಿ| ಮಹಾ ಅಚ್ಚರಿ: ಮುಖ್ಯಮಂತ್ರಿ ಪಟ್ಟ ಏಕನಾಥ್ ಶಿಂಧೆಗೆ, ಸರ್ಕಾರದಲ್ಲಿ ನಾನಿರೋದಿಲ್ಲವೆಂದ ಫಡ್ನವೀಸ್