ನವದೆಹಲಿ: ಚುನಾವಣಾ ಬಾಂಡ್(Election Bond)ಗಳನ್ನು ಬಳಸಿಕೊಂಡು ಅಕ್ರಮ ಹಣ ವರ್ಗಾವಣೆ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡದಿಂದ (SIT) ತನಿಖೆಗೆ ಒತ್ತಾಯಿಸಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ (Supreme Court) ತಿರಸ್ಕರಿಸಿದೆ. ಚುನಾವಣಾ ಬಾಂಡ್ ಎಂಬುದು ಅತಿದೊಡ್ಡ ಹಗರಣವಾಗಿದ್ದು, ಇದರ ತನಿಖೆಯನ್ನು SITಗೆ ವಹಿಸುಂತೆ ಆಗ್ರಹಿಸಿ ಎರಡು ಸರ್ಕಾರೇತರ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು(PIL) ಹೂಡಿದ್ದವು.
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಅರ್ಜಿಯನ್ನು ತಿರಸ್ಕರಿಸಿದ್ದು, ಈ ಹಿಂದೆಯೇ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದೆ. ಫೆಬ್ರವರಿ 15 ರಂದು, ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು “ಅಸಂವಿಧಾನಿಕ” ಎಂದು ತೀರ್ಪು ನೀಡಿತ್ತು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಅನಾಮಧೇಯ ಚುನಾವಣಾ ಬಾಂಡ್ ಯೋಜನೆಯು ಆರ್ಟಿಕಲ್ 19 (1) (ಎ) ಅಡಿಯಲ್ಲಿ ಮಾಹಿತಿ ಹಕ್ಕು ಉಲ್ಲಂಘನೆ ಎಂದು ಹೇಳಿತ್ತು.
ಚುನಾವಣಾ ಬಾಂಡ್ ಯೋಜನೆಯು ಸಂವಿಧಾನದ 19 (1) (A) ವಿಧಿ ಅಡಿಯಲ್ಲಿ ನೀಡಲಾದ ಮಾಹಿತಿ ಹಕ್ಕು ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಇದರಿಂದ ಕೊಡು-ಕೊಳ್ಳುವ ವ್ಯವಹಾರಕ್ಕೆ ( ಉದಾಹರಣೆ: ನೀನೊಂದು ಸಹಾಯ ಮಾಡಿದರೆ, ಅದಕ್ಕೆ ಬದಲಾಗಿ ಬೇರೆ ರೀತಿಯಲ್ಲಿ ನಾನು ಸಹಾಯ ಮಾಡುವುದು) ಪುಷ್ಟಿ ನೀಡುತ್ತದೆ. ಹಾಗೆಯೇ, ಕಂಪನಿಗಳ ಕಾಯ್ದೆಗೆ ತಿದ್ದುಪಡಿ ತಂದಿರುವುದು ಅಸಾಂವಿಧಾನಿಕವಾಗಿದೆ. ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆಯ ಮೂಲ ತಿಳಿಯುವ ಹಕ್ಕು ದೇಶದ ನಾಗರಿಕರಿಗೆ ಇದೆ” ಎಂದು ನ್ಯಾಯಾಲಯ ತಿಳಿಸಿತು.
ಏನಿದು ಚುನಾವಣಾ ಬಾಂಡ್?
ಚುನಾವಣಾ ಬಾಂಡ್ ಯೋಜನೆಯನ್ನು 2017ರಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಅಧಿವೇಶನದಲ್ಲಿ ಮೊದಲು ಪ್ರಸ್ತಾಪಿಸಿದರು. ಹಣಕಾಸು ಕಾಯ್ದೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಗಳಿಗೆ ತಿದ್ದುಪಡಿ ತಂದು 2018ರ ಜನವರಿಯಲ್ಲಿ ಚುನಾವಣಾ ಬಾಂಡ್ ಯೋಜನೆ ಜಾರಿ ಕುರಿತು ಅಧಿಸೂಚನೆ ಹೊರಡಿಸಲಾಯಿತು. ಆ ಮೂಲಕ ಚುನಾವಣಾ ಬಾಂಡ್ ಯೋಜನೆ ಜಾರಿಗೊಳಿಸಲಾಯಿತು.
ಬಿಜೆಪಿಗೆ ಹೆಚ್ಚು ದೇಣಿಗೆ
ಚುನಾವಣಾ ಬಾಂಡ್ ಯೋಜನೆ ಜಾರಿಯಾದ ಬಳಿಕ ಬಿಜೆಪಿಗೆ ಹೆಚ್ಚುಗೆ ದೇಣಿಗೆ ಸಂದಾಯವಾಗಿದೆ. ಆಡಳಿತಾರೂಢ ಪಕ್ಷವಾದ ಕಾರಣ ಹೆಚ್ಚು ದೇಣಿಗೆ ಸಂಗ್ರಹಿಸಿದೆ. 2022-23ನೇ ಸಾಲಿನಲ್ಲಿ ಬಿಜೆಪಿಗೆ ಚುನಾವಣಾ ಬಾಂಡ್‌ಗಳ ಮೂಲಕವೇ ಸುಮಾರು 1,300 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ. ಇದು ಕಾಂಗ್ರೆಸ್‌ಗಿಂತ ಎಂಟು ಪಟ್ಟು ಹೆಚ್ಚಿನ ಮೊತ್ತವಾಗಿದೆ.
ಚುನಾವಣಾ ಬಾಂಡ್ ಯೋಜನೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಕಳೆದ ವರ್ಷದ ನವೆಂಬರ್ 2ರಂದು ತೀರ್ಪು ಕಾಯ್ದಿರಿಸಿತ್ತು. ಈಗ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದ್ದು, ಯೋಜನೆಯ ಸಾಂವಿಧಾನಿಕ ಮಾನ್ಯತೆಯನ್ನು ಅಲ್ಲಗಳೆದಿದೆ.
ಇದನ್ನೂ ಓದಿ: NEET UG 2024: ಪ್ರಶ್ನೆ ಪತ್ರಿಕೆ ಸೋರಿಕೆ ಕೇವಲ ಎರಡು ನಗರಗಳಿಗೆ ಸೀಮಿತ; ಮರು ಪರೀಕ್ಷೆ ಅಗತ್ಯವಿಲ್ಲ-ಸುಪ್ರೀಂಕೋರ್ಟ್