Site icon Vistara News

Election Commission: ಎಎಪಿಯ ಪ್ರಚಾರ ಗೀತೆಗೆ ಬದಲಾವಣೆ ಸೂಚಿಸಿದ ಚುನಾವಣಾ ಆಯೋಗ; ಕಾರಣವೇನು?

Election Commission

Election Commission

ನವದೆಹಲಿ: ಲೋಕಸಭಾ ಚುನಾವಣೆಯ ಪ್ರಚಾರದ ಹಾಡಿನ ವಿಷಯವನ್ನು ಬದಲಾಯಿಸುವಂತೆ ಭಾರತದ ಚುನಾವಣಾ ಆಯೋಗ (Election Commission)ವು ಆಮ್ ಆದ್ಮಿ ಪಕ್ಷ (Aam Aadmi Party)ಕ್ಕೆ ಸೂಚಿಸಿದೆ. ಪಕ್ಷದ ಪ್ರಚಾರ ಗೀತೆಯು ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ ನಿಯಮಗಳು 1994ರ ಅಡಿಯಲ್ಲಿ ಸೂಚಿಸಲಾದ ಜಾಹೀರಾತು ಸಂಹಿತೆಗಳು ಮತ್ತು ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೆ ಅನುಗುಣವಾಗಿರಬೇಕು ಎಂದು ಚುನಾವಣಾ ಆಯೋಗ ಹೇಳಿದೆ.

ಅಗತ್ಯ ಬದಲಾವಣೆಗಳನ್ನು ಮಾಡಿದ ನಂತರ ಪ್ರಚಾರದ ಹಾಡನ್ನು ಮತ್ತೆ ಸಲ್ಲಿಸುವಂತೆ ಚುನಾವಣಾ ಆಯೋಗವು ದೆಹಲಿಯ ಆಡಳಿತ ಪಕ್ಷವಾದ ಆಪ್‌ಗೆ ತಿಳಿಸಿದೆ. ಚುನಾವಣಾ ಆಯೋಗದ ಮಾರ್ಗಸೂಚಿಗಳು ಮತ್ತು ಜಾಹೀರಾತು ಸಂಹಿತೆಗಳ ನಿಬಂಧನೆಗಳನ್ನು ಉಲ್ಲಂಘಿಸುವ ಈ ಪ್ರಚಾರ ಹಾಡಿನ ವಿಷಯವು ನ್ಯಾಯಾಂಗದ ಮೇಲೆ ಅನುಮಾನವನ್ನು ಉಂಟು ಮಾಡುತ್ತದೆ ಎಂದು ಚುನಾವಣಾ ಆಯೋಗ ತನ್ನ ನೋಟಿಸ್‌ನಲ್ಲಿ ತಿಳಿಸಿದೆ.

ʼಹಾಡಿನ ನಿಷೇಧಕ್ಕೆ ಸಂಚುʼ

ಆಪ್‌ನ ಜಾಹೀರಾತಿನಲ್ಲಿರುವ ‘ಜೈಲ್ ಕೆ ಜವಾಬ್ ಮೇ ಹಮ್ ವೋಟ್ ಡೆಂಗೆ’ ಎಂಬ ವಾಕ್ಯವನ್ನು ಚುನಾವಣಾ ಆಯೋಗ ಬದಲಾಯಿಸುವಂತೆ ಸೂಚಿಸಿದೆ. ಈತನ್ಮಧ್ಯೆ ಎಎಪಿಯ ಪ್ರಚಾರ ಗೀತೆಯನ್ನು ಚುನಾವಣಾ ಆಯೋಗ ನಿಷೇಧಿಸಿದೆ ಎಂದು ಹಿರಿಯ ನಾಯಕಿ, ಸಚಿವೆ ಅತಿಶಿ ಆರೋಪಿಸಿದ್ದಾರೆ. ಅಲ್ಲದೆ ಚುನಾವಣಾ ಆಯೋಗದ ಕ್ರಮವು ಎಎಪಿ ವಿರುದ್ಧ ಬಿಜೆಪಿ ಎಸೆದ ರಾಜಕೀಯ ಅಸ್ತ್ರ ಎಂದು ಅವರು ಹೇಳಿದ್ದಾರೆ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಚುನಾವಣಾ ಆಯೋಗ ಪಕ್ಷವೊಂದರ ಪ್ರಚಾರ ಗೀತೆಯನ್ನು ನಿಷೇಧಿಸಿದೆ ಎಂದು ದೂರಿದ್ದಾರೆ.

“ಬಿಜೆಪಿಯ ಮತ್ತೊಂದು ರಾಜಕೀಯ ಅಸ್ತ್ರವಾದ ಚುನಾವಣಾ ಆಯೋಗವು ಎಎಪಿಯ ಪ್ರಚಾರ ಗೀತೆಯನ್ನು ನಿಷೇಧಿಸಿದೆ. ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು ರಾಜಕೀಯ ಪಕ್ಷದ ಚುನಾವಣಾ ಹಾಡಿಗೆ ನಿಷೇಧ ಹೇರಿದೆʼʼ ಎಂದು ಅತಿಶಿ ಹೇಳಿದ್ದಾರೆ. ಬಿಜೆಪಿಯ ನಾಯಕರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದರೆ ಚುನಾವಣಾ ಆಯೋಗ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ʼʼಆಪ್‌ನ ಪ್ರಚಾರದ ಹಾಡು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ನಿರ್ದೇಶಕರನ್ನು ಕೆಟ್ಟದಾಗಿ ಬಿಂಬಿಸಿದೆ ಎಂದು ಚುನಾವಣಾ ಆಯೋಗ ಹೇಳಿದೆʼʼ ಎಂದು ಅವರು ಹೇಳಿದ್ದಾರೆ. “ರಾಜಕೀಯ ನಾಯಕರು ಬಿಜೆಪಿಗೆ ಸೇರಿದ ಕೂಡಲೇ ಇ.ಡಿ, ಸಿಬಿಐ ಅವರ ಪ್ರಕರಣ ಮುಚ್ಚಿ ಹಾಕುತ್ತದೆ. ಇದಕ್ಕೆ ಚುನಾವಣಾ ಆಯೋಗವು ಆಕ್ಷೇಪಿಸುವುದಿಲ್ಲ. ಆದರೆ ನಮ್ಮ ಪ್ರಚಾರ ಹಾಡಿನಲ್ಲಿ ನಾವು ಅದನ್ನು ಉಲ್ಲೇಖಿಸಿದಾಗ ಚುನಾವಣಾ ಆಯೋಗವು ಮೂಗು ತೂರಿಸುತ್ತದೆ” ಎಂದು ಅವರು ಆರೋಪ ಹೊರಿಸಿದ್ದಾರೆ.

ಇದನ್ನೂ ಓದಿ: Arvind Kejriwal: ದೆಹಲಿ ಹೈಕೋರ್ಟ್‌ನಿಂದ ಸಿಕ್ಕಿಲ್ಲ ರಿಲೀಫ್‌; ಸುಪ್ರೀಂ ಕೋರ್ಟ್‌ ಕದ ತಟ್ಟಿದ ಅರವಿಂದ್ ಕೇಜ್ರಿವಾಲ್

ವಾಕಥಾನ್‌

ಈ ಮಧ್ಯೆ ಬಂಧಿತ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಬೆಂಬಲ ಸೂಚಿಸಿ ಆಪ್‌ನಿಂದ ಇಂದು (ಏಪ್ರಿಲ್‌ 28) ʼವಾಕ್‌ ಫಾರ್‌ ಕೇಜ್ರಿವಾಲ್‌ʼ ವಾಕಥಾನ್‌ ನಡೆಯಿತು. ಎಎಪಿಯ ಯುವ ಘಟಕ ಮತ್ತು ಲೋಕಸಭಾ ಅಭ್ಯರ್ಥಿಗಳು ಜಂಟಿಯಾಗಿ ವಾಕಥಾನ್‌ ಆಯೋಜಿಸಿತ್ತು. ದಕ್ಷಿಣ ದೆಹಲಿಯಿಂದ ನವದೆಹಲಿವರೆಗೆ ಈ ವಾಕಥಾನ್‌ ಆಯೋಜಿಸಲಾಯಿತು.

Exit mobile version