Site icon Vistara News

Election Commission: ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಅಡ್ಡಿಪಡಿಸುವ ಪ್ರಯತ್ನ; ಖರ್ಗೆ ಪತ್ರಕ್ಕೆ EC ತಿರುಗೇಟು

Election Commission

ನವದೆಹಲಿ: ಮತದಾನ ಪ್ರಮಾಣ ವರದಿ ಬಿಡುಗಡೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪತ್ರ ಬರೆದಿದ್ದ ಎಐಸಿಸಿ ಅಧ್ಯಕ್ಷ(AICC President) ಮಲ್ಲಿಕಾರ್ಜುನ ಖರ್ಗೆ (Mallikarjun Kharge)ಗೆ ಭಾರತೀಯ ಚುನಾವಣಾ ಆಯೋಗ(Election Commission) ಪ್ರತಿಕ್ರಿಯಿಸಿದ್ದು, ನ್ಯಾಯ ಸಮ್ಮತ ಚುನಾವಣೆ ಕೈಗೊಳ್ಳಲು ಅಡೆತಡೆ ಸೃಷ್ಟಿಸಲು ನಡೆಸುತ್ತಿರುವ ಪ್ರಯತ್ನ ಎಂದು ಟಾಂಗ್‌ ಕೊಟ್ಟಿದೆ. ಖರ್ಗೆ ಪತ್ರಕ್ಕೆ ಪತ್ರದ ಮೂಲಕ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರು ಚುನಾವಣಾ ಆಯೋಗದ ಬಗ್ಗೆ ಸಲ್ಲದ ಆರೋಪ ಮಾಡುವ ಮೂಲಕ ಸಾರ್ವಜನಿಕವಾಗಿ ತಪ್ಪು ಮಾಹಿತಿ ನೀಡಿ, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಕೈಗೊಳ್ಳಲು ಅಡೆತಡೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಕಿಡಿಕಾರಿದೆ.

ಖರ್ಗೆ ಪತ್ರ ಬರೆದಿದ್ದೇಕೆ?

ಲೋಕಸಭೆ ಚುನಾವಣೆಯ ಮೊದಲ 2 ಹಂತದಲ್ಲಿ ನಡೆದ ಮತದಾನ ಪ್ರಮಾಣದ ಬಗ್ಗೆ ತಡವಾಗಿ ಮಾಹಿತಿ ನೀಡಿರುವ ಆಯೋಗಕ್ಕೆ ಪತ್ರ ಬರೆದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮತದಾನ ಮುಗಿದು ಒಂದು ವಾರದ ಬಳಿಕ ಮೊದಲ ಹಂತದಲ್ಲಿ ಶೇ. 5.5ರಷ್ಟು, ಎರಡನೇ ಹಂತದಲ್ಲಿ ಶೇ. 5.74ರಷ್ಟು ಮತ ಪ್ರಮಾಣ ಹೆಚ್ಚಳ ಮಾಡಿ ದತ್ತಾಂಶ ಬಿಡುಗಡೆ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದು ಆಯೋಗದ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡುತ್ತಿದೆ ಎಂದು ಹೇಳಿದ್ದರು.

EC ಪ್ರತಿಕ್ರಿಯೆ ಏನು?

ಮಲ್ಲಿಕಾರ್ಜುನ ಖರ್ಗೆ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೇಂದ್ರ ಚುನಾವಣಾ ಆಯೋಗ, ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಖರ್ಗೆಯವರು ಇಂತಹ ಗೊಂದಲಗಳನ್ನು ಜನರಲ್ಲಿ ಹುಟ್ಟು ಹಾಕೋದು ಸರಿಯಲ್ಲ. ಅವರು ಬರೆದಿರುವ ಪತ್ರ ರಾಜಕೀಯ ಪ್ರೇರಿತವಾಗಿದೆ. ಸಾರ್ವಜನಿಕವಾಗಿ ಸಂಶಯ ವ್ಯಕ್ತಪಡಿಸುವ ಮೂಲಕ ದೇಶದಲ್ಲಿ ಅರಾಜಕ ಪರಿಸ್ಥಿತಿ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಇಂತಹ ನಿರಾಧಾರ ಹೇಳಿಕೆಗಳಿಂದ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಅಡ್ಡಿ ಆತಂಕ ಉಂಟು ಮಾಡಿದ್ದಾರೆ ಎಂದು ಕಿಡಿ ಕಾರಿದೆ.

ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತ ಪ್ರಮಾಣದ ದತ್ತಾಂಶಗಳ ಬಗ್ಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ವೋಟರ್‌ ಟರ್ನ್‌ ಔಟ್‌ ಆಪ್‌ನಲ್ಲಿ ಸಾರ್ವಜನಿಕವಾಗಿ ಈ ಮಾಹಿತಿ ಲಭ್ಯವಿದೆ. ಪ್ರತಿ ಬೂತ್‌ ಏಜೆಂಟ್‌ಗಳಿಗೆ ಮತದಾನ ಪ್ರಮಾಣದ ಬಗ್ಗೆ ಪೂರ್ಣ ವಿವರ ನೀಡಲು ಸೂಚಿಸಲಾಗಿರುತ್ತದೆ. ಇದೇ ಅಂಶಗಳನ್ನು ಮುಂದಿಟ್ಟುಕೊಂಡು ಮತ ಎಣಿಕೆ ಮಾಡಲಾಗುತ್ತದೆ. ಇಲ್ಲಿ ಸಂಶಯ ಪಡುವಂತಹ ಯಾವುದೇ ಕಾರ್ಯ ನಡೆಯುವುದಿಲ್ಲ. ಪದೇ ಪದೆ ದತ್ತಾಂಶಗಳನ್ನು ಬದಲಿಸಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ:Cyber crime: ದೇಶಾದ್ಯಂತ 28,000ಕ್ಕೂ ಹೆಚ್ಚು ಮೊಬೈಲ್‌ ಫೋನ್‌ಗಳು ಬ್ಲಾಕ್‌!

ಇನ್ನು ಈ ಬಗ್ಗೆ ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌ ಪ್ರತಿಕ್ರಿಯಿಸಿದ್ದು, ಚುನಾವಣಾ ಆಯೋಗದೊಂದಿಗೆ ಇಂಡಿಯಾ ಮಿತ್ರಪಕ್ಷಗಳ ನಿಗದಿತ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಪತ್ರ ಮತ್ತು ಪ್ರತಿಕ್ರಿಯೆಯನ್ನು ಪಕ್ಷವು ಪ್ರಸ್ತಾಪಿಸಲಿದೆ ಎಂದು ಹೇಳಿದ್ದಾರೆ.

Exit mobile version