ನವದೆಹಲಿ: ಚುನಾವಣೆ ಆಯೋಗವು (Election Commission Of India) ಲೋಕಸಭೆ ಚುನಾವಣೆ ಜತೆಗೆ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯ (Assembly Elections) ದಿನಾಂಕಗಳನ್ನು ಶನಿವಾರ ಘೋಷಿಸಿದೆ. ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ (Jammu and Kashmir assembly)ಗೆ ಚುನಾವಣೆ ನಡೆಸುವ ಬಗ್ಗೆಯೂ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (Rajiv Kumar) ಪ್ರಸ್ತಾವಿಸಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ಕಣಿವೆ ರಾಜ್ಯದಲ್ಲಿ ಮತದಾನ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
“ಲೋಕಸಭಾ ಚುನಾವಣೆಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಸಲು ಚುನಾವಣಾ ಆಯೋಗ ಬದ್ಧವಾಗಿದೆ” ಎಂದು ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯ ಜತೆಗೆ ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ದಿನಾಂಕವನ್ನೂ ಘೋಷಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು.
ಸಾರ್ವತ್ರಿಕ ಚುನಾವಣೆಯೊಂದಿಗೆ ವಿಧಾನಸಭಾ ಚುನಾವಣೆಗಳನ್ನು ಏಕೆ ನಡೆಸುತ್ತಿಲ್ಲ ಎಂದು ಕೇಳಿದಾಗ ಉತ್ತರಿಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, ʼʼಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿ ಅಭ್ಯರ್ಥಿಗೆ ಭದ್ರತಾ ಪಡೆಗಳನ್ನು ಒದಗಿಸಬೇಕಾಗುತ್ತದೆ. ಇದು ದೇಶಾದ್ಯಂತ ಚುನಾವಣೆಗಳು ನಡೆಯುತ್ತಿರುವ ಸಮಯದಲ್ಲಿ ಸಾಧ್ಯವಿಲ್ಲ. ಹೀಗಾಗಿ ಲೋಕಸಭಾ ಚುನಾವಣೆ ಮುಗಿದ ಬಳಿಕ ಇಲ್ಲಿ ಮತದಾನ ನಡೆಸಲಾಗುತ್ತದೆʼʼ ಎಂದು ಹೇಳಿದ್ದಾರೆ.
“ಜಮ್ಮು ಮತ್ತು ಕಾಶ್ಮೀರ ಮರು ಸಂಘಟನೆ ಕಾಯ್ದೆಯನ್ನು (Jammu and Kashmir Reorganisation Act) 2019ರಲ್ಲಿ ಅಂಗೀಕರಿಸಲಾಯಿತು. ಅದರಂತೆ ಇಲ್ಲಿ 107 ಸ್ಥಾನಗಳಿವೆ. ಈ ಪೈಕಿ 24 ಸ್ಥಾನಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿವೆ” ಎಂದು ರಾಜೀವ್ ಕುಮಾರ್ ತಿಳಿಸಿದ್ದಾರೆ.
“ಜಮ್ಮು ಮತ್ತು ಕಾಶ್ಮೀರದ ಎಲ್ಲ ಪಕ್ಷಗಳು ವಿಧಾನಸಭಾ ಚುನಾವಣೆಯನ್ನು ಲೋಕಸಭಾ ಚುನಾವಣೆಯೊಂದಿಗೆ ನಡೆಸಬೇಕು ಎಂದು ಹೇಳಿವೆ. ಆದರೆ ಇದು ಸಾಧ್ಯವಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 10-12 ಅಭ್ಯರ್ಥಿಗಳು ಇರುತ್ತಾರೆ. ಅಂದರೆ 1,000ಕ್ಕೂ ಹೆಚ್ಚು ಅಭ್ಯರ್ಥಿಗಳು. ಪ್ರತಿ ಅಭ್ಯರ್ಥಿಗೆ ಭದ್ರತಾ ಪಡೆಗಳನ್ನು ಒದಗಿಸಬೇಕು. ಈ ಸಮಯದಲ್ಲಿ ಅದು ಸಾಧ್ಯವಾಗಲಾರದು” ಎಂದು ರಾಜೀವ್ ಕುಮಾರ್ ವಿವರಿಸಿದ್ದಾರೆ. ಒಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ 2024ರ ಸೆಪ್ಟೆಂಬರ್ 30ರೊಳಗೆ ಜಮ್ಮು ಮತ್ತು ಕಾಶ್ಮೀರದ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: Assembly Elections: 4 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ; ಇಲ್ಲಿದೆ ವಿವರ
ಲೋಕಸಭಾ ಚುನಾವಣೆ ಯಾವಾಗ?
ಜಮ್ಮು ಮತ್ತು ಕಾಶ್ಮೀರದ ಲೋಕಸಭಾ ಚುನಾವಣೆ 5 ಹಂತಗಳಲ್ಲಿ ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13 ಮತ್ತು ಮೇ 20ರಂದು ನಡೆಯಲಿದೆ. ಲಡಾಖ್‌ನಲ್ಲಿ ಮೇ 20ರಂದು ಚುನಾವಣೆ ನಡೆಯಲಿದೆ. ಉಧಂಪುರ ಮತ್ತು ಜಮ್ಮುವಿನಲ್ಲಿ ಏಪ್ರಿಲ್ 19 ಮತ್ತು 26ರಂದು, ಅನಂತ್‌ನಾಗ್-ರಾಜೌರಿಯಲ್ಲಿ ಮೇ 7ರಂದು, ಶ್ರೀನಗರದಲ್ಲಿ ಮೇ 13ರಂದು ಮತ್ತು ಬಾರಾಮುಲ್ಲಾದಲ್ಲಿ ಮೇ 20ರಂದು ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆಯಾಗಿ ಫಲಿತಾಂಶ ಘೋಷಣೆಯಾಗಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ