Site icon Vistara News

Election Commission of India: “64 ಕೋಟಿ ಜನರಿಂದ ಮತದಾನ; ವಿಶ್ವದಾಖಲೆ ಬರೆದ ಭಾರತ”- ಚು.ಆಯೋಗ ಶ್ಲಾಘನೆ

Election Commission of india

ನವದೆಹಲಿ: ಲೋಕಸಭಾ ಚುನಾವಣೆ(Lok Sabha Election 2024) ಫಲಿತಾಂಶಕ್ಕೆ ಇನ್ನೇನು ಒಂದು ದಿನ ಬಾಕಿ ಉಳಿದಿದೆ ಎನ್ನವಾಗಲೇ ಮುಖ್ಯ ಚುನಾವಣಾ ಆಯುಕ್ತರು(Election Commission of India) ಸುದ್ದಿಗೋಷ್ಠಿ ನಡೆಸಿ ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜೀವ್‌ ಕುಮಾರ್‌(Rajiv Kumar), ದೇಶದಲ್ಲಿ ಈ ಬಾರಿ 642 ಮಿಲಿಯನ್ ಅಂದರೆ 64 ಕೋಟಿಗೂ ಅಧಿಕ ಜನ ಮತದಾನ ಮಾಡುವ ಮೂಲಕ ಭಾರತ ವಿಶ್ವ ದಾಖಲೆ ಬರೆದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಈ ಬಾರಿ ಮತದಾನ ಪ್ರಮಾಣ ಬಹಳಷ್ಟು ಕಡಿಮೆ ಆಗಿದೆ ಎಂಬ ಅನೇಕರ ಕಳವಳಕ್ಕೆ ತೆರೆ ಎಳೆದಂತಾಗಿದೆ.

ವಿಶ್ವ ದಾಖಲೆ ಬರೆದ ಭಾರತ

ಈ ಬಾರಿ ದೇಶದಲ್ಲಿ 642 ಮಿಲಿಯನ್ ಅಂದರೆ 64 ಕೋಟಿಗೂ ಅಧಿಕ ಜನ ಮತದಾನ ಮಾಡುವ ಮೂಲಕ ಭಾರತ ವಿಶ್ವ ದಾಖಲೆ ಬರೆದಿದೆ ಎಂದಿರುವ ರಾಜೀವ್‌ ಕುಮಾರ್‌, ಈ ಸಂಖ್ಯೆ ವಿಶ್ವದ 29 ದೇಶಗಳ ಮತದಾರರಿಗಿಂತ ಐದು ಪಟ್ಟು ಹೆಚ್ಚು ಎಂದಿದ್ದಾರೆ. ಅಲ್ಲದೇ ಇದು ಎಲ್ಲಾ G7 ದೇಶಗಳ ಮತದಾರರಿಗಿಂತ 1.5 ಪಟ್ಟು ಮತ್ತು EU ನಲ್ಲಿ 27 ದೇಶಗಳ ಮತದಾರರಿಗಿಂತ 2.5 ಪಟ್ಟು ಹೆಚ್ಚು. ಇನ್ನು ದೇಶದಲ್ಲಿ 31 ಕೋಟಿ ಮಹಿಳಾ ಮತದಾರರಿದ್ದಾರೆ. ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿದ್ದಾರೆ. ಈ ಅಂಕಿ ಅಂಶವು ವಿಶ್ವದಲ್ಲೇ ಅತಿ ಹೆಚ್ಚು. ಈ ಮಹಿಳಾ ಮತದಾರರನ್ನು ನಾವು ಎದ್ದುನಿಂತು ಗೌರವಿಸಬೇಕು. ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ಮಾತುಗಳನ್ನು ಯಾವ ನಾಯಕರೂ ಹೇಳಬಾರದು ಎಂದು ನಾವು ಚುನಾವಣೆಯುದ್ದಕ್ಕೂ ಪ್ರಯತ್ನಿಸಿದ್ದೇವೆ. ಯಾರಾದರೂ ಮಾಡಿದ್ದರೆ, ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು

ಇನ್ನು 85 ವರ್ಷ ಮೇಲ್ಪಟ್ಟ ಮತದಾರರು ಮನೆಯಲ್ಲಿ ಕುಳಿತು ಮತದಾನ ಮಾಡಿದರು. ವಯಸ್ಸಾದ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಮಾಡಿದ್ದೆವು, ಆದರೆ ಜನರು ಬೂತ್‌ಗೆ ಬರಲು ಬಯಸುತ್ತಾರೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಯುವಜನತೆಯೂ ಇದರಿಂದ ಸ್ಫೂರ್ತಿ ಪಡೆಯಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

100 ಪತ್ರಿಕಾ ಪ್ರಕಟಣೆ ರಿಲೀಸ್‌

ನಾವು ಮಾರ್ಚ್ 16 ರಂದು ಭೇಟಿ ಮಾಡಿದ್ದೇವು, ಈಗ ಚುನಾವಣೆ ಮುಗಿಯುತ್ತಿದೆ. ಅದಕ್ಕಾಗಿಯೇ ನಾವು ಮತ್ತೆ ಭೇಟಿಯಾಗುತ್ತಿದ್ದೇವೆ. ಈ ಬಾರಿ ನಾವು ಮೊದಲ ಬಾರಿಗೆ 100 ಪತ್ರಿಕಾ ಪ್ರಕಟಣೆಗಳನ್ನು ಮಾಡಿದ್ದೇವೆ. ಇಷ್ಟು ಪ್ರೆಸ್ ನೋಟ್‌ಗಳನ್ನು ಬಿಡುಗಡೆ ಮಾಡಿರುವುದು ಇದೇ ಮೊದಲು. ಇನ್ನು ಸೋಷಿಯಲ್ ಮೀಡಿಯಾದಲ್ಲಿ ‘ಕಾಣೆಯಾದ ಮಹನೀಯರು ಹಿಂತಿರುಗಿದ್ದಾರೆ’ ಎಂಬ ಮೀಮ್‌ಗಳನ್ನು ನೀವು ನೋಡುತ್ತೀರಿ ಆದರೆ ನಾವು ಎಂದಿಗೂ ಕಾಣೆಯಾಗಿಲ್ಲ ಎಂದು ಸೂಚಿಸಲು ಬಯಸುತ್ತೇವೆ ಎಂದು ರಾಜೀವ್‌ ಹೇಳಿದ್ದಾರೆ.

ಇದನ್ನೂ ಓದಿ:Gold Rate Today: ಚಿನ್ನ ಕೊಳ್ಳಲು ಇದೇ ಸೂಕ್ತ ಸಮಯ; ಮತ್ತೆ ಬಂಗಾರದ ದರ ಇಳಿಕೆ

Exit mobile version