Site icon Vistara News

Election Result 2023: ಛತ್ತೀಸ್‌ಗಢದಲ್ಲಿ ಸುಳ್ಳಾದ ಎಕ್ಸಿಟ್‌ ಪೋಲ್‌, ಗೆಲುವಿನತ್ತ ಬಿಜೆಪಿ ದಾಪುಗಾಲು

raman singh bhupesh baghel

ರಾಯ್ಪುರ: ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯ ಫಲಿತಾಂಶದ (Chhattisgarh Assembly Election Result 2023) ಸ್ಥೂಲ ಚಿತ್ರಣ ಇದೀಗ ದೊರೆತಿದ್ದು, ಬಿಜೆಪಿ ಸ್ಪಷ್ಟ ಗೆಲುವಿನತ್ತ ಸಾಗಿದೆ. ಇದು ಎಲ್ಲ ಮತಗಟ್ಟೆ ಸಮೀಕ್ಷೆಗಳನ್ನು (Exit poll) ಸುಳ್ಳಾಗಿಸಿದೆ.

ಮಧ್ಯಾಹ್ನ 12.50ರ ಹೊತ್ತಿಗೆ ಬಿಜೆಪಿ 54 ವಿಧಾನಸಭೆ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 34ರಲ್ಲಿ ಮುಂದಿತ್ತು. ಮುಂಜಾನೆಯ ಮೊದಲಿನ ಟ್ರೆಂಡ್‌ಗಳ ಪ್ರಕಾರ ಕಾಂಗ್ರೆಸ್‌ ನಲುವತ್ತಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಹೊಂದಿತ್ತು. ಎರಡು ಗಂಟೆಗಳ ಎಣಿಕೆಯ ಬಳಿಕ ಎರಡೂ ಪಕ್ಷಗಳೂ ಸಮಬಲ ಸಾಧಿಸಿದವು. 12 ಗಂಟೆಯ ಬಳಿಕ ಬಿಜೆಪಿ ಸ್ಪಷ್ಟ ಮುನ್ನಡೆ ಸಾಧಿಸಿತು.

ಛತ್ತೀಸ್‌ಗಢದ ವಿಧಾನಸಭೆಯ ಸದಸ್ಯ ಬಲ 90 ಆಗಿದ್ದು, 46 ಸ್ಥಾನಗಳನ್ನು ಗೆದ್ದರೆ ಸರ್ಕಾರ ರಚಿಸಬಹುದಾಗಿದೆ. ಛತ್ತೀಸ್‌ಗಢದಲ್ಲಿ ನವೆಂಬರ್ 7 ಮತ್ತು 17ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು.

ಉತ್ತರ ಭಾರತದ ಹಿಂದಿ ಬೆಲ್ಟ್‌ನ ಪ್ರಮುಖ ರಾಜ್ಯವಾಗಿರುವ ಛತ್ತೀಸ್‌ಗಢ ರಾಜ್ಯದಲ್ಲಿ ನಡೆಸಲಾದ ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್‌ಗೆ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂದೇ ಹೇಳಿದ್ದವು. ಕಾಂಗ್ರೆಸ್ ಪಕ್ಷವು (Congress Party) ಅಧಿಕಾರ ಉಳಿಸಿಕೊಂಡರೆ, ಭಾರತೀಯ ಜನತಾ ಪಾರ್ಟಿಗೆ (BJP Party) ನಿರಾಸೆ ಕಾದಿದೆ ಎಂಬುದು ಚುನಾವಣೋತ್ತರ ಸಮೀಕ್ಷೆಗಳ ಸಾರಾಂಶವಾಗಿತ್ತು. ಹಿಂದಿನ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 48 ಸ್ಥಾನಗಳನ್ನು ಹೊಂದಿದ್ದರೆ, ಬಿಜೆಪಿ 15 ಸ್ಥಾನಗಳನ್ನು ಹೊಂದಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಉತ್ತಮ ಅಂತರದಿಂದ ಸೋಲಿಸಿ 3 ಚುನಾವಣೆಗಳ ನಂತರ ಅಧಿಕಾರಕ್ಕೆ ಬಂದಿತ್ತು.

2023ರ ವಿಧಾನಸಭಾ ಚುನಾವಣೆಯಲ್ಲಿ, 18,833 ಮತಗಟ್ಟೆಗಳಲ್ಲಿ 81,41,624 ಪುರುಷರು, 81,72,171 ಮಹಿಳೆಯರು ಮತ್ತು 684 ತೃತೀಯ ಲಿಂಗಿಗಳು ಸೇರಿದಂತೆ 1,63,14,479 ಮತದಾರರು ಮತ ಚಲಾಯಿಸಿದ್ದರು. ಕಾಂಗ್ರೆಸ್‌ನ ಪ್ರಮುಖ ಅಭ್ಯರ್ಥಿಗಳಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh baghel), ಉಪಮುಖ್ಯಮಂತ್ರಿ ಟಿ.ಎಸ್.ಸಿಂಗ್ ದೇವ್ ಮತ್ತು ವಿಧಾನಸಭಾ ಸ್ಪೀಕರ್ ಚರಣ್ ದಾಸ್ ಮಹಂತ್ ಸೇರಿದ್ದಾರೆ. ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ರಮಣ್‌ ಸಿಂಗ್‌ (Raman Singh) ಅವರು ಪ್ರಮುಖ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಸಮೀಕ್ಷೆಗಳು ಹೇಳಿದ್ದೇನು?

ಎಬಿಪಿ ನ್ಯೂಸ್-ಸಿ ವೋಟರ್: ಬಿಜೆಪಿ 36-48, ಕಾಂಗ್ರೆಸ್​ 41-53, ಬಿಎಸ್​ಪಿ 0, ಇತರ 0-4
ದೈನಿಕ್ ಭಾಸ್ಕರ್: ಬಿಜೆಪಿ 35-45, ಕಾಂಗ್ರೆಸ್​ 46-55, ಬಿಎಸ್​ಪಿ 0, ಇತರ 0-10
ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ: ಬಿಜೆಪಿ 36-46, ಕಾಂಗ್ರೆಸ್​ 40-50, ಬಿಎಸ್​ಪಿ 0,ಇತರ 1-5
ಇಂಡಿಯಾ ಟಿವಿ- ಸಿಎನ್ಎಕ್ಸ್: ಬಿಜೆಪಿ 30-40,ಕಾಂಗ್ರೆಸ್​ 46-56,ಬಿಎಸ್​ಪಿ 0,ಇತರ 3-5
ಜನ್ ಕಿ ಬಾತ್: ಬಿಜೆಪಿ 34-45,ಕಾಂಗ್ರೆಸ್​ 42-53,ಬಿಎಸ್​ಪಿ 0,ಇತರ 3
ನ್ಯೂಸ್ 24-ಟುಡೇಸ್ ಚಾಣಕ್ಯ: ಬಿಜೆಪಿ 33.ಕಾಂಗ್ರೆಸ್​ 57, ಬಿಎಸ್​ಪಿ 0,ಇತರ 0
ರಿಪಬ್ಲಿಕ್ ಟಿವಿ- ಮ್ಯಾಟ್ರಿಜ್: ಬಿಜೆಪಿ 34-42, ಕಾಂಗ್ರೆಸ್​ 44-52,ಬಿಎಸ್​ಪಿ 0,ಇತರ 00-02
ಟೈಮ್ಸ್ ನೌ-ಇಟಿಜಿ: ಬಿಜೆಪಿ 32-40, ಕಾಂಗ್ರೆಸ್​ 48-56,ಬಿಎಸ್​ಪಿ 0,ಇತರ 2-4
ಟಿವಿ 9 ಭಾರತ್ ವರ್ಷ್ – ಪೋಲ್ಸ್ಟ್ರಾಟ್: ಬಿಜೆಪಿ 35-45,ಕಾಂಗ್ರೆಸ್​ 40-50,ಬಿಎಸ್​ಪಿ 0,ಇತರ 0-3

ಮೋದಿ ಗ್ಯಾರಂಟಿ: ರಮಣ್‌ ಸಿಂಗ್‌

“ಇದು ಮೋದಿಜಿಯವರ ಗ್ಯಾರಂಟಿʼʼ ಎಂದು ಛತ್ತೀಸ್‌ಗಢದ ಬಿಜೆಪಿಯ ಹಿರಿಯ ನಾಯಕ ರಮಣ್ ಸಿಂಗ್ ಹೇಳಿದ್ದಾರೆ. “ಜನರು ಮೋದಿಜಿಯವರ ಗ್ಯಾರಂಟಿಯನ್ನು ನಂಬಿದ್ದಾರೆ. ಅದನ್ನೇ ಟ್ರೆಂಡ್‌ಗಳು ತೋರಿಸುತ್ತಿವೆ. ಒಳಪ್ರವಾಹವನ್ನು ನಾವು ತಿಳಿದಿದ್ದೆವು. ಆದರೆ ಅದು ಇಷ್ಟು ದೊಡ್ಡದಾಗಿದೆ ಎಂದು ತಿಳಿದಿರಲಿಲ್ಲ. ಭೂಪೇಶ್ ಬಘೇಲ್ ಅವರನ್ನು ಛತ್ತೀಸ್‌ಗಢ ತಿರಸ್ಕರಿಸಿದೆ. ಭೂಪೇಶ್ ಬಘೇಲ್ ಅವರ ಭ್ರಷ್ಟಾಚಾರ, ಮದ್ಯ ಹಗರಣ, ಮಹದೇವ್ ಆ್ಯಪ್ ಹಗರಣವು ತಿರುಗೇಟು ನೀಡಿದೆ” ಎಂದು ರಮಣ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ ರಮಣ್‌ ಸಿಂಗ್‌, “ಅದು ಪಕ್ಷದ ನಿರ್ಧಾರ. ನಾನು ಎಂದಿಗೂ ಏನನ್ನೂ ಕೇಳಲಿಲ್ಲ. ನನಗೆ ನಿಯೋಜಿಸಲಾದ ಯಾವುದೇ ಕೆಲಸವನ್ನು ಸಮರ್ಪಣಾ ಭಾವದಿಂದ ಮಾಡಿದ್ದೇನೆ” ಎಂದಿದ್ದಾರೆ.

Exit mobile version