ರಾಯ್ಪುರ: ನಿರೀಕ್ಷೆಗೂ ಮೀರಿ, ಎಲ್ಲ ಮತಗಟ್ಟೆ ಸಮೀಕ್ಷೆಗಳನ್ನೂ ತಲೆ ಕೆಳಗಾಗಿಸಿ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ (Assembly Election Result 2023) ಬಿಜೆಪಿ ಗೆದ್ದಿದೆ. ವಿಧಾನಸಭೆಯ 90 ಸ್ಥಾನಗಳಲ್ಲಿ 53ನ್ನು ತನ್ನ ಪಾಲಾಗಿಸಿಕೊಂಡಿದ್ದು, 35 ಸೀಟುಗಳನ್ನು ಮಾತ್ರ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ.
ಹೆಚ್ಚಿನ ಎಲ್ಲ ಮತಗಟ್ಟೆ ಸಮೀಕ್ಷೆಗಳೂ ಆಡಳಿತಾರೂಢ ಕಾಂಗ್ರೆಸ್ ಮತ್ತೆ ಬರಲಿದೆ ಎಂದೇ ಹೇಳಿದ್ದರೆ, ಫಲಿತಾಂಶ ಮಾತ್ರ ಅವೆಲ್ಲವುಗಳನ್ನೂ ಸುಳ್ಳಾಗಿಸಿದೆ. ಚುನಾವಣಾ ವಿಶ್ಲೇಷಕರು ಕೂಡ ಈ ಫಲಿತಾಂಶವನ್ನು ʼಡಿಕೋಡ್ʼ ಮಾಡಲು ಹೆಣಗಾಡುತ್ತಿದ್ದಾರೆ. ಬಿಜೆಪಿ ಗೆಲುವಿಗೆ ಕೆಲವು ಕಾರಣಗಳನ್ನು ನೀಡಲಾಗುತ್ತಿದೆ.
1) ಬುಡಕಟ್ಟು ಸಮುದಾಯದ ಒಲವು
ಮುಖ್ಯವಾಗಿ, ಮೋದಿ ಸರ್ಕಾರ ಬುಡಕಟ್ಟು ಸಮುದಾಯದ (Scheduled Tribe) ಅಭಿವೃದ್ಧಿಗಾಗಿ ತೆಗೆದುಕೊಂಡ ಕ್ರಮಗಳೇ ಅವರ ಒಲವು ಗಳಿಸಲು ನೆರವಾಗಿವೆ. ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ (ನ.15ರಂದು) ಪ್ರಧಾನಿ ಮೋದಿ, ʼವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳʼ (particularly vulnerable tribal groups – PVTG) ಅಭಿವೃದ್ಧಿಗಾಗಿ ನೂತನ ಕಾರ್ಯಕ್ರಮವೊಂದನ್ನು ಘೋಷಿಸಿದ್ದರು. ಈ ಯೋಜನೆಯು 24,000 ಕೋಟಿ ರೂ. ವೆಚ್ಚದಲ್ಲಿ ಅಂಚಿನಲ್ಲಿರುವ ಬುಡಕಟ್ಟು ಸಮುದಾಯಗಳವರಿಗೆ ತಲುಪುವಂಥ ರಸ್ತೆ, ಟೆಲಿಕಾಂ ಸಂಪರ್ಕ, ಶಿಕ್ಷಣ, ಆರೋಗಹ್ಯ ಸೇವೆ, ಪೌಷ್ಟಿಕತೆಯ ಮತ್ತಿತ ಸೌಲಭ್ಯಗಳನ್ನು ತಲುಪಿಸುವ ಕಾರ್ಯಕ್ರಮವಾಗಿದೆ. ಇದನ್ನು ಅವರು ಬುಡಕಟ್ಟು ಸಮುದಾಯಗಳ ನಾಯಕರಾದ ಬಿರ್ಸಾ- ಮುಂಡಾ ಜನ್ಮಸ್ಥಾನವಾದ ಜಾರ್ಖಂಡ್‌ನ ಉಲಿಹಾಟುವಿನಲ್ಲಿ ಉದ್ಘಾಟಿಸಲಿದ್ದಾರೆ. ಇದು ಹಾಗೂ ಇಂಥ ಹಲವಾರು ಯೋಜನೆಗಳು ಕೇಂದ್ರ ಸರ್ಕಾರದ ಬುಟ್ಟಿಯಲ್ಲಿದ್ದು, ಈ ಬಾರಿ ಅದು ವಿಶೇಷವಾಗಿ ಗುಡ್ಡಗಾಡು ಹಾಗೂ ಬುಡಕಟ್ಟು ಸಮುದಾಯಗಳ ಮತಗಳನ್ನು ಗುರಿಯಾಗಿಸಿಕೊಂಡಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾದ 47 ಸೀಟುಗಳಲ್ಲಿ 31ನ್ನು ಗೆದ್ದುಕೊಂಡಿತ್ತು. ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನಗಳಲ್ಲಿ ಈ ಗೆಲುವಿನ ಹೆಚ್ಚಿನ ಪ್ರಮಾಣ ಬಂದಿತ್ತು. ಛತ್ತೀಸ್‌ಗಢದಲ್ಲಿ 11 ಲೋಕಸಭೆ ಸ್ಥಾನಗಳಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಈ 11ರಲ್ಲಿ 9ನ್ನು ಬಿಜೆಪಿ ಗೆದ್ದುಕೊಂಡಿತ್ತು. ಬುಡಕಟ್ಟು ಸಮುದಾಯಗಳ ಹೃದಯ ಗೆದ್ದಿರುವ ಬಿಜೆಪಿ, ಅದನ್ನು ಉಳಿಸಿಕೊಂಡಿದೆ ಎಂದು ತರ್ಕಿಸಬಹುದು.
ವರದಿಗಳ ಪ್ರಕಾರ ಮೇಲಿನ ಈ ಮೂರು ರಾಜ್ಯಗಳಲ್ಲಿ ದೇಶದ 31 ಶೇಕಡಾ ಎಸ್‌ಟಿಗಳಿದ್ದಾರೆ. ಛತ್ತೀಸ್‌ಗಢದಲ್ಲಿ ಒಟ್ಟಾರೆ ಜನಸಂಖ್ಯೆಯ 30.6 ಶೇಕಡದಷ್ಟು ಎಸ್‌ಟಿಗಳು. ಮಧ್ಯಪ್ರದೇಶದಲ್ಲಿ 21.1 ಹಾಗೂ ರಾಜಸ್ಥಾನದಲ್ಲಿ 13.5 ಶೇಕಡ ಇದ್ದಾರೆ. ಛತ್ತೀಸ್‌ಗಢದಲ್ಲಿ 2003, 2008 ಹಾಗೂ 2013ರ ವಿಧಾನಸಭೆ ಚುನಾವಣೆಗಳನ್ನು ಬಿಜೆಪಿಯೇ ಸತತವಾಗಿ ಗೆದ್ದಿತ್ತು. ಆದರೆ ಒಂದೆರಡು ಶೇಕಡಾ ಮತಗಳ ಅಂತರದಲ್ಲಿ ಈ ಗೆಲವು ಬಂದಿತ್ತು. ಈ ಬಾರಿ ಗೆಲುವಿನ ಮತಗಳ ಅಂತರ 4 ಶೇಕಡಕ್ಕಿಂತಲೂ ಹೆಚ್ಚಿದೆ.
2) ಹಗರಣ, ಆಡಳಿತ ವಿರೋಧಿ ಅಲೆ?
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಆಡಳಿತದ ಬಗ್ಗೆ ಛತ್ತೀಸ್‌ಗಢದ ಜನತೆ ಭ್ರಮನಿರಸನಗೊಂಡಿದ್ದಾರೆ ಎಂದು ವಿಶ್ಲೇಷಕರು ತರ್ಕಿಸಿದ್ದಾರೆ. ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಸರಣಿ ಹಗರಣಗಳನ್ನು ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತಲೇ ಬಂದಿತ್ತು. ಬಹುಕೋಟಿ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಹಗರಣ ಮುಖ್ಯವಾದುದು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬೆಂಬಲ ನೀಡಲು ಪ್ರಾರಂಭಿಸಲಾದ ಕೇಂದ್ರ ಪ್ರಾಯೋಜಿತ ಉಚಿತ ಧಾನ್ಯಗಳ ಯೋಜನೆಯಲ್ಲಿ 5,000 ಕೋಟಿ ರೂಪಾಯಿಗಳ ಹಗರಣವಾಗಿದೆ.
ಜಾರಿ ನಿರ್ದೇಶನಾಲಯವು 2,161 ಕೋಟಿ ರೂಪಾಯಿಗಳ ಮದ್ಯ ಹಗರಣವನ್ನು ಸಹ ತನಿಖೆ ನಡೆಸುತ್ತಿದೆ. ಇದರಲ್ಲಿ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಬಂಧಿಸಲಾಗಿದೆ. ಅವರ ಜಾಮೀನು ಅರ್ಜಿಗಳನ್ನು ಕಳೆದ ವಾರ ಛತ್ತೀಸ್‌ಗಢ ಹೈಕೋರ್ಟ್ ತಿರಸ್ಕರಿಸಿದೆ. ಇಬ್ಬರು ಕಾಂಗ್ರೆಸ್ ಶಾಸಕರು ಮತ್ತು ಐಎಎಸ್ ಅಧಿಕಾರಿ ಆರೋಪಿಯಾಗಿರುವ ಕಲ್ಲಿದ್ದಲು ಹಗರಣದ ಆರೋಪವನ್ನೂ ಹಾಲಿ ಸರ್ಕಾರ ಎದುರಿಸುತ್ತಿದೆ. ಜೊತೆಗೆ ಬಹುಕೋಟಿ ಮಹದೇವ್ ಬೆಟ್ಟಿಂಗ್ ಆಪ್ ಹಗರಣದಲ್ಲಿ ಮುಖ್ಯಮಂತ್ರಿ ಬಘೇಲ್ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಇವು ಸರ್ಕಾರದ ವರ್ಚಸ್ಸಿಗೆ ದೊಡ್ಡ ಮಟ್ಟದ ಹಾನಿ ಉಂಟುಮಾಡಿದ್ದವು.
3) ಮೋದಿ ಕಿ ಗ್ಯಾರಂಟಿ
ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಟೀಕಿಸಿದ್ದ ಬಿಜೆಪಿ, ಛತ್ತೀಸ್‌ಗಢದಲ್ಲೂ ಇತರ ರಾಜ್ಯಗಳಂತೆ ಹಲವು ಗ್ಯಾರಂಟಿಗಳ ಭರವಸೆಯನ್ನು ಮತದಾರರಿಗೆ ನೀಡಿತ್ತು. ʼಮೋದಿ ಕಿ ಗ್ಯಾರಂಟಿʼ ಶೀರ್ಷಿಕೆಯ ಪ್ರಣಾಳಿಕೆಯಲ್ಲಿ ಮನೆಮನೆಗೆ ₹500ಗೆ ಎಲ್‌ಪಿಜಿ ಸಿಲಿಂಡರ್‌ಗಳು, ಎರಡು ವರ್ಷಗಳಲ್ಲಿ ಒಂದು ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗಗಳು, ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ ₹12,000 ಆರ್ಥಿಕ ನೆರವು, ಭೂರಹಿತ ಕೃಷಿ ಕಾರ್ಮಿಕರಿಗೆ ₹10,000 ವಾರ್ಷಿಕ ನೆರವು, ಪ್ರತಿ ಕ್ವಿಂಟಾಲ್‌ಗೆ ₹3,100 ಬೆಂಬಲ ಬೆಲೆಯಲ್ಲಿ ಭತ್ತದ ಖರೀದಿ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿತ್ತು.
ಇದನ್ನೂ ಓದಿ: Assembly Election Results 2023 Live: 3 ರಾಜ್ಯಗಳಲ್ಲಿ ಬಿಜೆಪಿ ಸಂಭ್ರಮಾಚರಣೆ; ತೆಲಂಗಾಣದಲ್ಲಿ ಕಾಂಗ್ರೆಸ್ ಹರ್ಷಾಚರಣೆ