ನವದೆಹಲಿ: ದೇಶಕ್ಕೆ ದೇಶವೇ ಕುತೂಹಲದಿಂದ ಕಾಯುತ್ತಿರುವ ಲೋಕಸಭೆ ಚುನಾವಣೆಯ ಮತಎಣಿಕೆ (Lok Sabha Election Results 2024) ಆರಂಭವಾಗಿದ್ದು, ಎನ್‌ಡಿಎ ಮೈತ್ರಿಕೂಟವು (NDA) ಆರಂಭದಲ್ಲಿಯೇ ಭರ್ಜರಿ ಮುನ್ನಡೆ ಸಾಧಿಸಿದೆ. ಎನ್‌ಡಿಎಯು 294ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮುನ್ನಡೆಯಲ್ಲಿಯೇ ಮ್ಯಾಜಿಕ್ ನಂಬರ್ (272) ದಾಟಿದೆ. ಅತ್ತ, ಇಂಡಿಯಾ ಒಕ್ಕೂಟವೂ (India Bloc) ಎನ್‌ಡಿಎಗೆ ಸ್ಪರ್ಧೆಯೊಡ್ಡುತ್ತಿದ್ದು, 212ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಾರಾಣಸಿಯಲ್ಲಿ ಹಿನ್ನಡೆಯಾಗಿದೆ.
ಹೌದು, ಉತ್ತರ ಪ್ರದೇಶದ ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 6,223 ಮತಗಳ ಹಿನ್ನಡೆಯಾಗಿದೆ. ಕಾಂಗ್ರೆಸ್‌ನ ಅಜಯ್ ರಾಯ್ ಅವರು ಆರಂಭಿಕ ಹಂತದ ಮತಎಣಿಕೆಯಲ್ಲಿ 11,480 ಮತಗಳನ್ನು ಪಡೆದರೆ, ನರೇಂದ್ರ ಮೋದಿ ಅವರು 5,257 ಮತಗಳನ್ನಷ್ಟೇ ಪಡೆದು ಹಿನ್ನಡೆ ಅನುಭವಿಸಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ನರೇಂದ್ರ ಮೋದಿ ಅವರು ವಾರಾಣಸಿಯಲ್ಲಿ ಅಮೋಘ ಲೀಡ್ ಪಡೆದು ಗೆಲುವು ಸಾಧಿಸಿದ್ದರು. ಈಗ ಆರಂಭಿಕ ಹಂತದಲ್ಲಿಯೇ ಅವರಿಗೆ ಹಿನ್ನಡೆಯಾಗಿದೆ.
ನರೇಂದ್ರ ಮೋದಿ ಅವರ ಅಲೆ, ಕಳೆದ 10 ವರ್ಷಗಳ ಅಭಿವೃದ್ಧಿ ಕೆಲಸಗಳು, ರಾಮಮಂದಿರ, 370ನೇ ವಿಧಿ ರದ್ದು ಸೇರಿ ಹಲವು ಪ್ರಮುಖ ತೀರ್ಮಾನಗಳನ್ನು ಮುಂದಿಟ್ಟುಕೊಂಡು ಬಿಜೆಪಿಯು ಚುನಾವಣೆ ಎದುರಿಸಿದೆ. ಅದರಲ್ಲೂ, ಮೋದಿ ಅವರು 200ಕ್ಕೂ ಅಧಿಕ ಸಮಾವೇಶಗಳ ಮೂಲಕ ದೇಶದ ಮೂಲೆ ಮೂಲೆಯಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿ ನಾಯಕರು, ಕಾರ್ಯಕರ್ತರು ಕೂಡ ಇದಕ್ಕೆ ಶ್ರಮಿಸಿದ್ದಾರೆ. ಹಾಗಾಗಿ, ಬಿಜೆಪಿಯು ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯು ಕನಸು ಕಾಣುತ್ತಿದೆ.
ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬ ಕಾರಣಕ್ಕಾಗಿಯೇ ಕಾಂಗ್ರೆಸ್ ಮುಂದಾಳತ್ವದಲ್ಲಿ ಇಂಡಿಯಾ ಒಕ್ಕೂಟವನ್ನು ರಚಿಸಿ, ಪ್ರತಿಪಕ್ಷಗಳು ಒಗ್ಗೂಡಿ ಚುನಾವಣೆ ಎದುರಿಸಿವೆ. ಮತಗಟ್ಟೆ ಸಮೀಕ್ಷೆಗಳ ವರದಿಗಳ ಆಚೆಯೂ ಅಚ್ಚರಿಯ ಫಲಿತಾಂಶವನ್ನು ಇಂಡಿಯಾ ಒಕ್ಕೂಟದ ಪಕ್ಷಗಳು ನಿರೀಕ್ಷಿಸುತ್ತಿವೆ. ಹಾಗೊಂದು ವೇಳೆ, ಮತಗಟ್ಟೆ ಸಮೀಕ್ಷೆಗಳು ಉಲ್ಟಾ ಹೊಡೆದರೆ, ಇಂಡಿಯಾ ಮೈತ್ರಿಕೂಟವು ಮುನ್ನಡೆ ಸಾಧಿಸಲಿದೆ. ಆದರೆ, ಆರಂಭಿಕ ಹಂತದ ಮತಎಣಿಕೆ ಪ್ರಕಾರ, ಎನ್‌ಡಿಎ ಬಾರಿ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್ ಇಲ್ಲಿ ವೀಕ್ಷಿಸಿ