Site icon Vistara News

Election Results 2023: ಲೋಕಸಭೆ 65 ಸ್ಥಾನಗಳ ಮೇಲೆ ಇದೀಗ ಬಿಜೆಪಿ ಹಿಡಿತ! ಮೋದಿ ಹಾದಿ ಸುಲಭ!

election five states

ಹೊಸದಿಲ್ಲಿ: ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಮತ ಎಣಿಕೆ (Election Results 2023) ನಡೆಯುತ್ತಿದ್ದಂತೆ, ಎರಡು ದೊಡ್ಡ ರಾಜ್ಯಗಳಾದ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಫಲಿತಾಂಶ ಬಿಜೆಪಿ ಪರ ಬಂದಿರುವುದು ಸ್ಪಷ್ಟವಾಗಿದೆ. ಇದರ ಜತೆ ಛತ್ತೀಸ್‌ಗಢದಲ್ಲೂ ಬಿಜೆಪಿ ಪಾರಮ್ಯ ಸಾಧಿಸುತ್ತಿದೆ. ರಾಜಸ್ಥಾನ (Rajasthan election result) ಹಾಗೂ ಮಧ್ಯಪ್ರದೇಶಗಳು (Madhya Pradesh election result) ಬಿಜೆಪಿ ಕಡೆ ಒಲವು ತೋರಿಸುತ್ತಿರುವಂತೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ (Parliament Election 2024) ಈ ರಾಜ್ಯಗಳ ಪ್ರದರ್ಶನದ ಸ್ಥೂಲ ಚಿತ್ರಣವೂ ಲಭ್ಯವಾಗುವಂತಾಗಿದೆ.

ರಾಜಸ್ಥಾನದಲ್ಲಿ ಹಾಗೂ ಮಧ್ಯಪ್ರದೇಶದಲ್ಲಿ ಎಕ್ಸಿಟ್‌ ಪೋಲ್‌ ನಿರೀಕ್ಷೆಗಳಂತೆಯೇ ಬಿಜೆಪಿ ಮುನ್ನಡೆ ಸಾಧಿಸಿದೆ. ಸದ್ಯ ರಾಜಸ್ಥಾನದಲ್ಲಿ ಬಿಜೆಪಿ 106 ಸ್ಥಾನಗಳೊಂದಿಗೆ ಮುನ್ನಡೆ ಹಾಗೂ ಮಧ್ಯಪ್ರದೇಶದಲ್ಲಿ 150 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿದೆ. ಈ ಎರಡೂ ರಾಜ್ಯಗಳನ್ನು ಬಿಜೆಪಿ ಬಗಲಿಗೆ ಹಾಕಿಕೊಳ್ಳುವುದು ಖಚಿತವಾಗಿದೆ. ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಂಡರೆ, ರಾಜಸ್ಥಾನದಲ್ಲಿ ಕಾಂಗ್ರೆಸ್‌ನಿಂದ ಕಿತ್ತುಕೊಳ್ಳಲಿದೆ.

ಈ ಎರಡೂ ರಾಜ್ಯಗಳ ಫಲಿತಾಂಶ ಪ್ರಭಾವ ಬೀರಲಿರುವುದು ಮುಂದಿನ ವರ್ಷ ಆಗಮಿಸುತ್ತಿರುವ ಲೋಕಸಭೆ ಚುನಾವಣೆಯ ಪ್ರದರ್ಶನದ ಮೇಲೆ. ಸಾಮಾನ್ಯವಾಗಿ ಲೋಕಸಭೆ ಚುನಾವಣೆಗಳಲ್ಲಿ ರಾಜ್ಯಗಳ ಮತದಾರರು, ರಾಜ್ಯದಲ್ಲಿ ಯಾವ ಸರ್ಕಾರ ಅಸ್ತಿತ್ವದಲ್ಲದೆಯೋ ಆ ಪಕ್ಷದ ಪರವಾಗಿ ಮತ ಚಲಾಯಿಸುವುದು ರೂಢಿಯಾಗಿದೆ. ಈ ನಿಟ್ಟಿನಿಂದ ನೋಡಿದರೆ, ಈ ಎರಡೂ ರಾಜ್ಯಗಳಲ್ಲಿ ಗರಿಷ್ಠ ಮತದಾರರು ಬಿಜೆಪಿಗೆ ಮತ ಹಾಕುವ ಸಾಧ್ಯತೆ ಇದೆ.

ಮಧ್ಯಪ್ರದೇಶದಲ್ಲಿ 29 ಲೋಕಸಭೆ ಸ್ಥಾನಗಳು ಹಾಗೂ ರಾಜಸ್ಥಾನದಲ್ಲಿ 25 ಲೋಕಸಭೆ ಸ್ಥಾನಗಳು ಇವೆ. ಒಟ್ಟಾಗಿ 54 ಸ್ಥಾನಗಳಾಗುತ್ತವೆ. ಈ ಅಷ್ಟೂ ಸ್ಥಾನಗಳಲ್ಲಿ ಬಿಜೆಪಿ ಕ್ಲೀನ್‌ ಸ್ವೀಪ್‌ ಮಾಡುವ ಸಾಧ್ಯತೆ ಇದೆ. ಕಳೆದ ಸಲ ಲೋಕಸಭೆ ಚುನಾವಣೆ ನಡೆದಾಗ, ಈ ಎರಡೂ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರದಲ್ಲಿ ಇರಲಿಲ್ಲ. ಆದರೂ ಇವೆರಡೂ ಕಡೆಗಳಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 54ರಲ್ಲಿ 53 ಸ್ಥಾನ ಗೆದ್ದಿತ್ತು. ಮಧ್ಯಪ್ರದೇಶದಲ್ಲಿ ಒಂದೇ ಒಂದು ಸ್ಥಾನವನ್ನು ಮಾತ್ರ ಕಾಂಗ್ರೆಸ್‌ಗೆ ಬಿಟ್ಟು 28 ಸೀಟ್‌ಗಳನ್ನು ಗೆದ್ದಿತ್ತು. ರಾಜಸ್ಥಾನದಲ್ಲಿ 25ರಲ್ಲಿ 24 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಉಳಿದ ಒಂದು ಸ್ಥಾನ ಕೂಡ ಬಿಜೆಪಿ ಮಿತ್ರ ಪಕ್ಷದ ಪಾಲಾಗಿತ್ತು. ಈ ಬಾರಿ ರಾಜ್ಯ ಸರ್ಕಾರವೂ ಬಿಜೆಪಿಯದೇ ಆದರೆ ಮತ್ತೊಮ್ಮೆ ಅಷ್ಟೂ ಸ್ಥಾನಗಳನ್ನು ಗೆದ್ದುಕೊಳ್ಳುವುದು ಸುಲಭವಾಗುತ್ತದೆ.

ಮಧ್ಯಪ್ರದೇಶದಲ್ಲಿ 15 ವರ್ಷಕ್ಕೂ ಹೆಚ್ಚು ಅವಧಿಗೆ ಅಧಿಕಾರದಲ್ಲಿದ್ದ ಭಾರತೀಯ ಜನತಾ ಪಾರ್ಟಿಗೆ ಈ ಬಾರಿ ಆಡಳಿತ ವಿರೋಧಿ ಅಲೆ ತಟ್ಟಿತ್ತು. ಆದರೆ ಬಿಜೆಪಿಯ ವಿರುದ್ಧ ಮತದಾರರು ತಿರಸ್ಕಾರವನ್ನು ತೋರಿಲ್ಲ. ಕೊನೆ ಗಳಿಗೆಯಲ್ಲಿ ಸಿಎಂ ಪ್ರಕಟಿಸಿದ ಉಚಿತ ಕೊಡುಗೆಗಳು ಮತದಾರರನ್ನು ಬಿಜೆಪಿಯತ್ತ ಎಳೆದು ತಂದಿರುವ ಸಾಧ್ಯತೆ ಇದೆ. ರಾಜಸ್ಥಾನದಲ್ಲಿ ಕಾಂಗ್ರೆಸ್‌ನ ವಿರುದ್ಧ ಸಾಕಷ್ಟು ಆಡಳಿತ ವಿರೋಧಿ ಅಲೆ ಇತ್ತು. ಸಿಎಂ ಅಶೋಕ್ ಗೆಹ್ಲೋಟ್ ಮರಳಿ ಅಧಿಕಾರ ಪಡೆಯುವುದಕ್ಕಾಗಿ ಸಾಕಷ್ಟು ಕೊಡುಗೆ ಘೋಷಣೆ ಮಾಡಿದ್ದರೂ, ಅದನ್ನು ಬಹುಮತವಾಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗಿಲ್ಲ.

modi in telangana

ಹಿಂದಿ ಬೆಲ್ಟ್‌ನ ಈ ಎರಡು ಪ್ರಮುಖ ರಾಜ್ಯಗಳ 54 ಸ್ಥಾನಗಳನ್ನು ಗೆದ್ದುಕೊಳ್ಳುವುದು ಬಿಜೆಪಿಗೆ ಲೋಕಸಭೆಯಲ್ಲಿ ಲಾಟರಿ ಹೊಡೆದಂತೆಯೇ. ಈ ಎರಡೂ ರಾಜ್ಯಗಳಲ್ಲಿ ಈ ಬಾರಿಯ ಪ್ರಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಭಾರಿ ಪ್ರಮಾಣದಲ್ಲಿ ರ‍್ಯಾಲಿಗಳನ್ನು ನಡೆಸಿ ಪ್ರಚಾರ ಮಾಡಿದ್ದರು.

ಈ ನಡುವೆ, ಛತ್ತೀಸ್‌ಗಢದಲ್ಲಿ ಕೂಡ ಬಿಜೆಪಿ ಮುನ್ನಡೆ ಸಾಧಿಸಿದೆ. ಈ ಎರಡೂ ರಾಜ್ಯಗಳ ಮುನ್ನಡೆ ನಿರೀಕ್ಷಿತವಾಗಿದ್ದರೆ, ಛತ್ತೀಸ್‌ಗಢದ ಮುನ್ನಡೆ ಅನಿರೀಕ್ಷಿತವಾಗಿದೆ. ಇಲ್ಲಿ 11 ಲೋಕಸಭೆ ಸ್ಥಾನಗಳಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ 11ರಲ್ಲಿ 9 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಈಗ ಪಕ್ಷ ಅಧಿಕಾರದಲ್ಲಿ ಇರುವುದರಿಂದ 11ರಲ್ಲಿ 11 ಸ್ಥಾನಗಳನ್ನು ಕೂಡ ಬಗಲಿಗೆ ಹಾಕಿಕೊಳ್ಳಲು ಬಿಜೆಪಿ ಎಲ್ಲ ಪ್ರಯತ್ನ ನಡೆಸುವುದು ನಿಶ್ಚಿತ. ಸದ್ಯದ ಟ್ರೆಂಡ್‌ಗಳ ಪ್ರಕಾರ ಛತ್ತೀಸ್‌ಗಢದಲ್ಲಿ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ಸನ್ನೂ ಹಿಂದಿಕ್ಕಿ ಮುನ್ನಡೆದಿದೆ. ಇಲ್ಲಿನ ಫಲಿತಾಂಶ ಎಕ್ಸಿಟ್‌ ಪೋಲ್‌ಗಳನ್ನು ಸುಳ್ಳಾಗಿಸಲಿದೆ. ಇಲ್ಲಿನ 11 ಸ್ಥಾನಗಳನ್ನೂ ಪರಿಗಣಿಸಿದರೆ ಬಿಜೆಪಿ ಈ ಸಲದ ವಿಧಾನಸಭೆ ಚುನಾವಣೆಯಲ್ಲಿ 65 ಲೋಕಸಭೆ ಸ್ಥಾನಗಳನ್ನೂ ಬುಟ್ಟಿಗೆ ಕೆಡವಿಕೊಂಡಂತಾಗುತ್ತದೆ.

ಇದನ್ನೂ ಓದಿ: Election Results 2023: ಚುನಾವಣೆ ಗೆಲುವು; ಬಿಜೆಪಿ ಕಚೇರಿಯಲ್ಲಿ ಮೋದಿ ಸ್ವಾಗತಕ್ಕೆ ಸಿದ್ಧತೆ; ಸಂಭ್ರಮ

Exit mobile version