ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ(Election results 2024) ಹೊರಬಿದ್ದು, ಮತ್ತೊಮ್ಮೆ ನರೇಂದ್ರ ಮೋದಿ(Narendra Modi) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಸಜ್ಜಾಗಿದೆ. ಇನ್ನು ಈ ಬಾರಿ ಒಟ್ಟು 280 ನೂತನ ಸಂಸದರು ಲೋಕಸಭೆಗ ಮೊದಲ ಬಾರಿಗೆ ಕಾಲಿಡುತ್ತಿದ್ದಾರೆ. ಇವರಲ್ಲಿ ಮಾಜಿ ಮುಖ್ಯಮಂತ್ರಿಗಳು, ಸಿನಿಮಾ ತಾರೆಯರು, ಕಾರ್ಯಕರ್ತರು ಹಾಗೂ ಮಾಜಿ ಹೈಕೋರ್ಟ್ ನ್ಯಾಯಮೂರ್ತಿಗಳೂ ಸೇರಿದ್ದಾರೆ.
ಇನ್ನು ಈ ಬಾರಿ ಉತ್ತರಪ್ರದೇಶದಿಂದ ಒಟ್ಟು 80 ಕ್ಷೇತ್ರಗಳಲ್ಲಿ ಬರೋಬ್ಬರಿ 45 ನೂತನ ಸಂಸದರು ಲೋಕಸಭೆಗೆ ಕಾಲಿಡುತ್ತಿದ್ದಾರೆ. ಅವರಲ್ಲಿ ಮೀರತ್‌ನಿಂದ ಚುನಾಯಿತರಾಗಿರುವ ಜನಪ್ರಿಯ ರಾಮಾಯಣ ಧಾರವಾಹಿಯ ನಟ ಅರುಣ್ ಗೋವಿಲ್, ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರನ್ನು ಸೋಲಿಸಿದ ಕಾಂಗ್ರೆಸ್ ನಾಯಕ ಕಿಶೋರಿ ಲಾಲ್ ಶರ್ಮಾ ಮತ್ತು ದಲಿತ ಹಕ್ಕುಗಳ ಕಾರ್ಯಕರ್ತ ಚಂದ್ರಶೇಖರ್ ಆಜಾದ್ ಆಜಾದ್ ಸಮಾಜ ಪಕ್ಷದ ನಗೀನಾ ಸೇರಿದ್ದಾರೆ.
ಈ ಬಾರಿ ಬಿಜೆಪಿಯು ಚುನಾವಣಾ ಹಿಮ್ಮುಖವನ್ನು ಎದುರಿಸಿದ ಮಹಾರಾಷ್ಟ್ರದಲ್ಲಿ ಶಾಲಾ ಶಿಕ್ಷಕ ಭಾಸ್ಕರ್ ಭಾಗೆ ಸೇರಿದಂತೆ 33 ನೂತನ ಸಂಸದರು ಲೋಕಸಭೆಗೆ ಚುನಾಯಿತರಾಗಿದ್ದಾರೆ. ಭಾಸ್ಕರ್ ಭಾಗೆ ಅವರು ಶರದ್ ಪವಾರ್ ಅವರ ಎನ್‌ಸಿಪಿಯಿಂದ ಬುಡಕಟ್ಟು ಸ್ಥಾನವಾದ ದಿಂಡೋರಿಯಲ್ಲಿ ಕಣಕ್ಕಿಳಿದಿದ್ದರು. ಅವರು ಬಿಜೆಪಿ ನಾಯಕಿ ಭಾರತಿ ಪವಾರ್ ಅವರನ್ನು ಸೋಲಿಸಿದ್ದರು. ಮಹಾರಾಷ್ಟ್ರದಿಂದ ಮೊದಲ ಅವಧಿಯ ಸದಸ್ಯರ ಪೈಕಿ ಮುಂಬೈ ಉತ್ತರದಿಂದ ಚುನಾಯಿತರಾದ ಬಿಜೆಪಿಯ ಪಿಯೂಷ್ ಗೋಯಲ್, ಅಮರಾವತಿಯಲ್ಲಿ ಬಿಜೆಪಿಯ ನವನೀತ್ ರಾಣಾ ಅವರನ್ನು ಸೋಲಿಸಿದ ಕಾಂಗ್ರೆಸ್ ನಾಯಕ ಬಲ್ವಂತ್ ವಾಂಖೆಡೆ, ಅಕೋಲಾದಿಂದ ಮಾಜಿ ಕೇಂದ್ರ ಸಚಿವ ಸಂಜಯ್ ಧೋತ್ರೆ ಅವರ ಪುತ್ರ ಬಿಜೆಪಿಯ ಅನುಪ್ ಧೋತ್ರೆ, ಸಾಂಗಲಿಯಿಂದ ವಿಶಾಲ್ ಪಾಟೀಲ್ ಸೇರಿದ್ದಾರೆ.
ಚುನಾಯಿತರಾದ ಮಾಜಿ ಮುಖ್ಯಮಂತ್ರಿಗಳು
ಇನ್ನು ಈ ಬಾರಿ ವಿವಿಧ ರಾಜ್ಯಗಳಿಂದ ಮಾಜಿ ಮುಖ್ಯಮಂತ್ರಿಗಳೂ ಕಣಕ್ಕಿಳಿದು ತಮ್ಮ ರಾಜಕೀಯ ಭವಿಷ್ಯ ಪರೀಕ್ಷಿಸಿದ್ದರು. ಈ ಬಾರಿ ಮಾಜಿ ಮುಖ್ಯಮಂತ್ರಿಗಳಾದ ನಾರಾಯಣ ರಾಣೆ (ರತ್ನಗಿರಿ-ಸಿಂಧುದುರ್ಗ), ತ್ರಿವೇಂದ್ರ ಸಿಂಗ್ ರಾವತ್ (ಹರಿದ್ವಾರ), ಮನೋಹರ್ ಲಾಲ್ (ಕರ್ನಾಲ್), ಬಿಪ್ಲಬ್ ಕುಮಾರ್ ದೇಬ್ (ತ್ರಿಪುರ ಪಶ್ಚಿಮ), ಜಿತನ್ ರಾಮ್ ಮಾಂಝಿ (ಗಯಾ), ಬಸವರಾಜ ಬೊಮ್ಮಾಯಿ (ಹಾವೇರಿ), ಜಗದೀಶ್ ಶೆಟ್ಟರ್ (ಬೆಳಗಾವಿ) , ಚರಂಜಿತ್ ಸಿಂಗ್ ಚನ್ನಿ (ಜಲಂಧರ್) ಲೋಕಸಭೆಗೆ ಮೊದಲ ಬಾರಿಗೆ ಚುನಾಯಿತರಾಗಿದ್ದಾರೆ.
ಇನ್ನು ಈ ಬಾರಿ ಇಬ್ಬರು ಸಿನಿಮಾ ತಾರೆಯರು ರಾಜಕೀಯ ಅದೃಷ್ಟ ಪರೀಕ್ಷೆಯಲ್ಲಿ ಗೆಲುವು ಸಾಧಿಸಿ ಸಂಸತ್‌ನ ಕೆಳಮನೆಗೆ ಕಾಲಿಡುತ್ತಿದ್ದಾರೆ. ಕೇರಳದ ತ್ರಿಶೂರ್‌ನಿಂದ ಸುರೇಶ್ ಗೋಪಿ ಮತ್ತು ಹಿಮಾಚಲಪ್ರದೇಶದ ಮಂಡಿಯಿಂದ ಕಂಗನಾ ರಣಾವತ್ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸುತ್ತಿರುವ ಸಿನಿಮಾ ತಾರೆಯರು.
ರಾಜ್ಯಸಭಾ ಸದಸ್ಯರಾದ ಅನಿಲ್ ದೇಸಾಯಿ (ಶಿವಸೇನೆ ಯುಬಿಟಿ), ಭೂಪೇಂದ್ರ ಯಾದವ್, ಧರ್ಮೇಂದ್ರ ಪ್ರಧಾನ್, ಮನ್ಸುಖ್ ಮಾಂಡವಿಯಾ ಮತ್ತು ಪರ್ಷೋತ್ತಮ್ ರೂಪಾಲಾ ಕೂಡ ಲೋಕಸಭೆಗೆ ಚೊಚ್ಚಲ ಪ್ರವೇಶ ಮಾಡಿದ್ದಾರೆ. ಇನ್ನು ಈ ಬಾರಿ ಹಿಂದಿನ ರಾಜಮನೆತನದ ಛತ್ರಪತಿ ಶಾಹು (ಕೊಲ್ಹಾಪುರ), ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ಮೈಸೂರು), ಮತ್ತು ಕೃತಿ ದೇವಿ ದೆಬ್ಬರ್ಮನ್ (ತ್ರಿಪುರ ಪೂರ್ವ)ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶಿಸಲಿದ್ದಾರೆ. ಬಂಗಾಳದ ತಾಲ್ಮುಕ್ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಕೋಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಅವರು ಮೊದಲ ಬಾರಿಗೆ ಸಂಸದರಾಗಿದ್ದಾರೆ.
ಇದನ್ನೂ ಓದಿ:Norway Tour: ಜಗತ್ತಿನ ಕೊನೆಯ ದೇಶ ಇದು! ಇಲ್ಲಿ 6 ತಿಂಗಳು ಹಗಲು, 6 ತಿಂಗಳು ರಾತ್ರಿ!