Site icon Vistara News

Election results 2024: ತಲೆಕೆಳಗಾದ ಭವಿಷ್ಯವಾಣಿ; ಲೈವ್‌ನಲ್ಲೇ ಗಳಗಳನೆ ಅತ್ತ ಎಕ್ಸಿಟ್‌ ಪೋಲ್‌ ಮುಖ್ಯಸ್ಥ!

Election Results 2024

ನವದೆಹಲಿ: ಲೋಕಸಭಾ ಚುನಾವಣೆ(Lok Sabha Election 2024) ಫಲಿತಾಂಶ(Election results 2024) ಬಹುತೇಕ ಹೊರಬಿದ್ದಿದ್ದು, ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟಗಳ ರಾಜಕೀಯ ಭವಿಷ್ಯ ಸ್ಪಷ್ಟವಾಗಿದೆ. ಇನ್ನು ಈ ಬಾರಿ ಚುನಾವಣಾ ಫಲಿತಾಂಶ ಎಲ್ಲಾ ಎಕ್ಸಿಟ್‌ ಪೋಲ್‌(Exit Poll 2024)ಗಳ ಭವಿಷ್ಯವಾಣಿಯನ್ನು ತಲೆಕೆಳಗಾಗಿಸಿದೆ. ಫಲಿತಾಂಶ ಹೊರ ಬೀಳುತ್ತಿದ್ದಂತೆ ಟಿವಿ ಮಾಧ್ಯಮವೊಂದರ ಲೈವ್‌ನಲ್ಲೇ ಆಕ್ಸಿಸ್‌ ಮೈ ಇಂಡಿಯಾ(Axis My India) ಮುಖ್ಯಸ್ಥ ಮತ್ತು ವ್ಯವಸ್ಥಾಪಕಾ ನಿರ್ದೇಶಕ ಪ್ರದೀಪ್‌ ಗುಪ್ತಾ ಕಣ್ಣೀರಿಟ್ಟಿದ್ದಾರೆ.

ಇಂಡಿಯಾ ಟುಡೇ ವಾಹಿನಿಯಲ್ಲಿ ನಡೆಯುತ್ತಿದ್ದ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರದೀಪ್‌ ಗುಪ್ತಾ, ತಮ್ಮ ಸಂಸ್ಥೆ ನೀಡಿದ್ದ ಎಕ್ಸಿಟ್‌ ಪೋಲ್‌ ವರದಿ ಸಂಪೂರ್ಣವಾಗಿ ಸುಳ್ಳಾಗಿರುವುದನ್ನು ನೆನೆದು ಭಾವುಕರಾದರು. ದುಃಖ ತಡೆಯಲಾಗದೇ ಅವರು ಕಣ್ಣೀರು ಹಾಕಿದ್ದಾರೆ. ಜೂ.1ರಂದು ದೇಶಾದ್ಯಂತ ಒಟ್ಟು 14 ಎಕ್ಸಿಟ್‌ ಪೋಲ್‌ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದ್ದವು. ಎಲ್ಲಾ ಎಕ್ಸಿಟ್‌ ಪೋಲ್‌ಗಳೂ ಈ ಬಾರಿ ಎನ್‌ಡಿಎ 365ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ವರದಿ ನೀಡಿದ್ದವು.

ಆಕ್ಸಿಸ್ ಮೈ ಇಂಡಿಯಾ ನಡೆಸಿರುವ ಸಮೀಕ್ಷೆಯ ಪ್ರಕಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಲಿದೆ. ಈ ಸಂಸ್ಥೆಯ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಒಟ್ಟು 543 ಸಂಸದೀಯ ಸ್ಥಾನಗಳಲ್ಲಿ ಎನ್‌ಡಿಎ 361 ರಿಂದ 401 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಭವಿಷ್ಯವಾಣಿ ನುಡಿದಿತ್ತು. ಇನ್ನು ಕಾಂಗ್ರೆಸ್‌ ನೇತೃತ್ವ ಇಂಡಿಯಾ 131-166 ಇತರರು 8-20 ಸ್ಥಾನಗಳನ್ನು ಗಳಿಸಲಿವೆ ಎಂದು ಆಕ್ಸಿಟ್‌ ಮೈ ಇಂಡಿಯಾ ಸಮೀಕ್ಷೆ ಅಂದಾಜಿಸಿತ್ತು.

ಬಿಜೆಪಿಯ ಬಲವಾದ ಚುನಾವಣಾ ಕಾರ್ಯತಂತ್ರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಮೂಲಕ ಎನ್​ಡಿಎಗೆ ಭರ್ಜರಿ ಗೆಲುವು ಸಿಗಲಿದೆ ಎಂದು ಸಮೀಕ್ಷೆಗಳು ಸೂಚಿಸಿದ್ದವು. ಬಿಜೆಪಿಯು ತನ್ನದೇ ಬಲದ ಮೇಲೆ ಸುಮಾರು 330 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿತ್ತು. ಕಳೆದ ಬಾರಿ ಅದು 303 ಸ್ಥಾನ ಗೆದ್ದಿತ್ತು.

ಮೂರು ದಿನಗಳ ನಂತರ ನೋಡಿದಾಗ, ಈ ಸಮೀಕ್ಷೆಗಳು ದೊಡ್ಡ ಅಂತರದಿಂದಲೇ ದಾರಿ ತಪ್ಪಿದ್ದವು ಎಂದು ಗೊತ್ತಾಗಿದೆ. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಎನ್‌ಡಿಎ 295 ಸ್ಥಾನಗಳ ಸಮೀಪ ಬಂದು ನಿಂತಿದೆ. ಇದು ಎಕ್ಸಿಟ್ ಪೋಲ್‌ಗಳು ಅಂದಾಜು ಮಾಡಿದ ಸರಾಸರಿಗಿಂತ 74 ಕಡಿಮೆ ಸ್ಥಾನ. ಬಿಜೆಪಿ 241ರ ಆಸುಪಾಸಿನಲ್ಲಿದೆ. ಸಮೀಕ್ಷೆಗಳು ಭವಿಷ್ಯ ನುಡಿದ ಅಂಕಿಅಂಶಕ್ಕಿಂತ ಇದು ತುಂಬಾ ಕಡಿಮೆಯಾಗಿದೆ. ಬಹುಮತಕ್ಕೆ 272 ಸ್ಥಾನ ಬೇಕು. ಬಿಜೆಪಿ ಅದನ್ನೂ ಗಳಿಸಿಲ್ಲ.

ಈ ಚುನಾವಣೆಯ ಫಲಿತಾಂಶದ ಗಮನ ಸೆಳೆಯುವ ಸಂಗತಿ ಎಂದರೆ ಉತ್ತರ ಪ್ರದೇಶದ ಕಥೆ. ಅಲ್ಲಿ ಬಿಜೆಪಿ ಕೇವಲ 33 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 2019ರಲ್ಲಿ ಅದು 62 ಸ್ಥಾನ ಗಳಿಸಿತ್ತು. ಈ ಬಾರಿ ಅರ್ಧಕ್ಕೆ ಇಳಿದಿದೆ. ಇದು ನಿರ್ಗಮನ ಸಮೀಕ್ಷೆಗಳು ಎಷ್ಟು ಪೊಳ್ಳಾಗಿವೆ ಎಂಬುದರ ಪ್ರತಿಬಿಂಬವಾಗಿದೆ. ಇಲ್ಲಿ ಸಮೀಕ್ಷೆಗಾರರು ಬಿಜೆಪಿಗೆ ಸರಾಸರಿ 68 ಸ್ಥಾನಗಳನ್ನು ನೀಡಿದ್ದರು. ಇಂಡಿಯಾ ಬ್ಲಾಕ್‌ಗೆ ಕೇವಲ 12 ಎಂದಿದ್ದವು. ಇದರಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪ್ರಮುಖ ಘಟಕಗಳು. ಸಮಾಜವಾದಿ ಪಕ್ಷ 36 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 7ರಲ್ಲಿ ಮುನ್ನಡೆ ಸಾಧಿಸಿವೆ. ಇವರ ಒಟ್ಟು ಸಂಖ್ಯೆ 43ಕ್ಕೆ ಏರಿದೆ.

ಇದನ್ನೂ ಓದಿ:AP Election results 2024 live: ಆಂಧ್ರ ಪ್ರದೇಶ ವಿಧಾನಸಭೆ: ಭರ್ಜರಿ ಗೆಲುವಿನತ್ತ ಟಿಡಿಪಿ

Exit mobile version