ನವದೆಹಲಿ: ಮಧ್ಯಪ್ರದೇಶದ ಇಂದೋರ್ ಲೋಕಸಭೆ ಕ್ಷೇತ್ರದಲ್ಲಿ (Election Results 2024) ಬಿಜೆಪಿಯ ಶಂಕರ್ ಲಾಲ್ವಾನಿ (Shankar Lalwani) ಅವರು ಸುಮಾರು 10 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. “ದೇಶದ ಇತಿಹಾಸದಲ್ಲಿಯೇ ಗರಿಷ್ಠ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಕೀರ್ತಿ ಶಂಕರ್ ಲಾಲ್ವಾನಿ ಅವರದ್ದಾಗಿದೆ” ಎಂಬುದಾಗಿ ಬಿಜೆಪಿ ಹೇಳಿದೆ.
ಇಂದೋರ್ ಲೋಕಸಭೆ ಕ್ಷೇತ್ರದಲ್ಲಿ ಶಂಕರ್ ಲಾಲ್ವಾನಿ ಅವರು 12,26,751 ಮತಗಳನ್ನು ಪಡೆದಿದ್ದಾರೆ. ಇನ್ನು, ನೋಟಾಗೆ (ನನ್ ಆಫ್ ದಿ ಅಬೋವ್) 2,18,674 ಮತಗಳು ಲಭಿಸಿದ ಕಾರಣ 10,08,077 ಮತಗಳಿಂದ ಶಂಕರ್ ಲಾಲ್ವಾನಿ ಅವರು ಗೆಲುವು ಸಾಧಿಸಿದ್ದಾರೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ. ಬಿಎಸ್‌ಪಿಯ ಸಂಜಯ್ ಅವರು 52,659 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ.
ನೋಟಾಗೆ ಏಕೆ ಅಷ್ಟು ಮತ?
ಇಂದೋರ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಕ್ಷಯ್ ಕಾಂತಿ ಬಾಮ್ ಕಣಕ್ಕಿಳಿದಿದ್ದರು. ಬಳಿಕ ಕೊನೆಯ ಕ್ಷಣದಲ್ಲಿ ತಮ್ಮ ಉಮೇದುವಾರಿಗೆ ಹಿಂದಕ್ಕೆ ಪಡೆದಿದ್ದರು. ಇದರಿಂದ ಬೇರೆ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ತನ್ನ ಅಭ್ಯರ್ಥಿ ದ್ರೋಹ ಎಸಗಿದ್ದಾರೆ. ಹೀಗಾಗಿ ಬೇರೆ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಕೈ ಪಡೆ ಮಧ್ಯಪ್ರದೇಶ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ ಅಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಹೆಚ್ಚಿನ ಜನ ನೋಟಾಗೆ ಮತ ಹಾಕಿದ್ದರು.
ಹೀಗಾಗಿ ಕಾಂಗ್ರೆಸ್ ʼಪ್ರಜಾಪ್ರಭುತ್ವ ಉಳಿಸುವ’ ಮತ್ತು ‘ನೈತಿಕ ವಿಜಯ’ಕ್ಕಾಗಿ ಅದು ಹೋರಾಟ ನಡೆಸುವುದಾಗಿ ತಿಳಿಸಿ ʼನೋಟಾʼಕ್ಕೆ ಮತ ಚಲಾಯಿಸುವಂತೆ ವ್ಯಾಪಕ ಪ್ರಚಾರ ನಡೆಸಿತ್ತು. ಅಕ್ಷಯ್ ಕಾಂತಿ ಬಾಮ್ ಅವರ ಮೇಲೆ ಒತ್ತಡ ಹೇರಿ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಬಿಜೆಪಿ ಕುತಂತ್ರ ಮಾಡಿದೆ ಎನ್ನುವುದು ಕಾಂಗ್ರೆಸ್ ಆರೋಪ. ಅದಕ್ಕಾಗಿ ‘ನೋಟಾ’ದ ಪ್ರಚಾರ ನಡೆಸಿತ್ತು.
ಅಮಿತ್ ಶಾ ಕೂಡ ದಾಖಲೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್‌ನ ಗಾಂಧಿ ನಗರದಲ್ಲಿ 7.44 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿದ್ದಾರೆ. ಎದುರಾಳಿ ಅಭ್ಯರ್ಥಿ ಸ್ಪರ್ಧೆ ಮಾಡಿದರೂ, ಇವರು 7.44 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕರ್ನಾಟಕದಲ್ಲಿ ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 3.37 ಲಕ್ಷ ಮತಗಳ ಅಂತರದಿಂದ ಜಯಿಸಿರುವುದು ಕರ್ನಾಟಕದ ಮಟ್ಟಿಗೆ ದಾಖಲೆಯಾಗಿದೆ.
ಯಾರಿಗೆ ಎಷ್ಟು ಮತ?
ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ): 7,82,495
ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್): 4,45,067
ಕಾಗೇರಿ ಗೆಲುವಿನ ಅಂತರ: 3,37,428
2019ರ ದಾಖಲೆ ಏನಾಗಿತ್ತು?
ಭಾರತೀಯ ಜನತಾ ಪಕ್ಷದ ಸಿ.ಆರ್.ಪಾಟೀಲ್ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಗುಜರಾತ್‌ನ ನವಸಾರಿ ಕ್ಷೇತ್ರದಲ್ಲಿ 6.89 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು 2019ರ ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳಲ್ಲಿಯೇ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ ಅಭ್ಯರ್ಥಿ ಎನಿಸಿದ್ದರು. 2014ರಲ್ಲಿ ಬೀಡ್ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಪ್ರೀತಮ್ ಮುಂಡೆ ಅವರು 6.96 ಲಕ್ಷ ಮತಗಳ ಅಂತರದಲ್ಲಿ ಗೆದ್ದು ದಾಖಲೆ ಸೃಷ್ಟಿಸಿದ್ದರು.
ಇದನ್ನೂ ಓದಿ: Election Results 2024: 5 ಲಕ್ಷ ಮತಗಳಿಂದ ಗೆದ್ದು ಬೀಗಿದ ಅಮಿತ್ ಶಾ; ಬಿಜೆಪಿಗೆ ಮೊದಲ ಗೆಲುವು