ಹೈದರಾಬಾದ್: ತೆಲಂಗಾಣದ ಹೈದರಾಬಾದ್ ಲೋಕಸಭೆ ಕ್ಷೇತ್ರದ ಚುನಾವಣೆ (Lok Sabha Election) ರಣಕಣವು ಈ ಬಾರಿ ಭಾರಿ ಕುತೂಹಲದಿಂದ ಕೂಡಿದೆ. ಎಐಎಂಐಎಂ ಪಕ್ಷದ ಅಸಾದುದ್ದೀನ್ ಓವೈಸಿ (Asaduddin Owaisi) ವಿರುದ್ಧ ಬಿಜೆಪಿಯಿಂದ ಹಿಂದು ಫೈರ್ ಬ್ರ್ಯಾಂಡ್ ಮಾಧವಿ ಲತಾ (Madhavi Latha) ಕಣಕ್ಕಿಳಿದಿದ್ದು, ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಹಲವು ವರ್ಷಗಳಿಂದ ಹೈದರಾಬಾದ್ ಲೋಕಸಭೆ ಕ್ಷೇತ್ರದಲ್ಲಿ ಅಸಾದುದ್ದೀನ್ ಓವೈಸಿ ಅವರೇ ಗೆಲುವು ಸಾಧಿಸಿದ್ದು, ಈ ಬಾರಿ ಮಾಧವಿ ಲತಾ ಅವರು ತೀವ್ರ ಪೈಪೋಟಿ (Election Results 2024) ನೀಡುತ್ತಿದ್ದಾರೆ.
ಪ್ರಖರ ಹಿಂದುತ್ವವಾದಿಯೂ ಆಗಿರುವ ಮಾಧವಿ ಲತಾ ಅವರು ಈಗ ಮುಸ್ಲಿಮರ ಮತಗಳನ್ನೂ ಸೆಳೆಯಲು ಪ್ರಯತ್ನಿಸಿದ್ದರು. ಇದಕ್ಕಾಗಿ ಅವರು ಹೈದರಾಬಾದ್‌ನಲ್ಲಿರುವ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು, ಮುಸ್ಲಿಂ ಗಲ್ಲಿಗಲ್ಲಿಗಳಲ್ಲಿ ಪ್ರಚಾರ ಕೈಗೊಂಡಿದ್ದರು. ಸದ್ಯ, ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದುಕೊಂಡಿರುವ ಮಾಧವಿ ಲತಾ ಅವರು ಗೆಲುವು ಸಾಧಿಸಿದರೆ ಇತಿಹಾಸ ಸೃಷ್ಟಿಸಲಿದ್ದಾರೆ. ಹಾಗಾಗಿ, ಹೈದರಾಬಾದ್ ಲೋಕಸಭೆ ಚುನಾವಣೆ ಕ್ಷೇತ್ರದ ಫಲಿತಾಂಶದ ಮೇಲೆ ಎಲ್ಲರ ಗಮನವಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿ ಅವರು 2.6 ಲಕ್ಷ ಮತಗಳಿಂದ ಗೆಲುವು ಸಾಧಿಸಿದ್ದರು.
221 ಕೋಟಿ ರೂ. ಆಸ್ತಿಯ ಒಡತಿ
ಕೊಂಪೆಲ್ಲಾ ಮಾಧವಿ ಲತಾ ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ 221.37 ಕೋಟಿ ರೂ. ಎಂಬುದಾಗಿ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಮಾಧವಿ ಲತಾ ಮತ್ತು ಅವರ ಪತಿ ಕೊಂಪೆಲ್ಲಾ ವಿಶ್ವನಾಥ್ ಇಬ್ಬರೂ ವ್ಯಾಪಾರಿಗಳು. ಅವರ ಮೂವರು ಅವಲಂಬಿತ ಮಕ್ಕಳು, 165.46 ಕೋಟಿ ರೂಪಾಯಿಗಳ ಚರ ಆಸ್ತಿಯನ್ನು ಹೊಂದಿದ್ದಾರೆ ಮತ್ತು ಮಾಧವಿ ಲತಾ ದಂಪತಿ 55.91 ಕೋಟಿ ರೂಪಾಯಿಗಳ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ. ತೆಲಂಗಾಣದ ಅವಳಿ ನಗರವಾದ ಸಿಕಂದರಾಬಾದ್‌ನಲ್ಲಿ ನೆಲೆಸಿರುವ 49 ವರ್ಷದ ಮಾಧವಿ ಲತಾ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡರು. ಮೊದಲ ಬಾರಿಗೆ ಚುನಾವಣೆಯ ಕಣಕ್ಕೆ ಇಳಿದಿದ್ದಾರೆ.
ಮುಸ್ಲಿಂ ಮಹಿಳೆಯರಿಗೆ ಕಂಟಕವಾಗಿದ್ದ ತ್ರಿವಳಿ ತಲಾಕ್ ವಿರುದ್ಧ ಮಾಧವಿ ಲತಾ ಅವರು ಹೋರಾಟ ನಡೆಸಿದ್ದರು. ಅದರಲ್ಲೂ, ಕೇಂದ್ರ ಸರ್ಕಾರವು ತ್ರಿವಳಿ ತಲಾಕ್‌ಅನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿದ ಬಳಿಕ ಅಸಾದುದ್ದೀನ್ ಓವೈಸಿ ಅವರು ಇದನ್ನು ಅಸಾಂವಿಧಾನಿಕ ಎಂದು ಕರೆದಿದ್ದರು. ಆಗ, ತ್ರಿವಳಿ ತಲಾಕ್ ಕುರಿತು ಜನರಿಗೆ ತಿಳಿವಳಿಕೆ, ಜಾಗೃತಿ ಮೂಡಿಸುವ ಕುರಿತು ಮಾಧವಿ ಲತಾ ಅವರು ಅಭಿಯಾನ ಆರಂಭಿಸಿದ್ದರು. ಆಗಲೇ ಅಸಾದುದ್ದೀನ್ ಓವೈಸಿ ಅವರಿಗೆ ಮಾಧವಿ ಲತಾ ಸೆಡ್ಡು ಹೊಡೆದಿದ್ದರು.
ಇದನ್ನೂ ಓದಿ: Election Result 2024: ವಾರಾಣಸಿಯಲ್ಲಿ ಮೋದಿಗೆ ಆಘಾತ; 6,223 ಮತಗಳ ಹಿನ್ನಡೆ