Site icon Vistara News

Election results 2024: ಜೈಲಿನಿಂದಲೇ ಕಣಕ್ಕಿಳಿದು ಜಯಭೇರಿ ಬಾರಿಸಿದ ಪ್ರತ್ಯೇಕತಾವಾದಿಗಳು; ಇವರ ಹಿನ್ನೆಲೆ ಏನು?

Election Results 2024

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ(Election results 2024) ಬಹುತೇಕ ಹೊರಬಿದ್ದಿದ್ದು, ಜನ ಸಾಮಾನ್ಯರಿಗೆ ಈಗಾಗಲೇ ಒಂದು ಸ್ಪಷ್ಟ ಚಿತ್ರಣ ಸಿಕ್ಕಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಜೈಲಿನಿಂದಲೇ ಸ್ಪರ್ಧಿಸಿ ಅಭೂತಪೂರ್ವ ರೀತಿಯಲ್ಲಿ ಗೆಲುವು ಸಾಧಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಜೈಲಿನಿಂದಲೇ ಕಣಕ್ಕಿಳಿದಿರುವ ಖಲಿಸ್ತಾನಿ ಪರ ಬೋಧಕ (Pro-Khalistani preacher) ಅಮೃತ್‌ಪಾಲ್‌ ಸಿಂಗ್ (Amrit pal Singh) 1.5ಲಕ್ಷ ಮತಗಳ ಅಂತರಗಳಿಂ ಪ್ರಚಂಡ ಗೆಲುವು ಸಾಧಿಸಿದರೆ ಅತ್ತ ಜಮ್ಮ-ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಲ್ಲಿ ಅಬ್ದುಲ್‌ ರಶೀದ್‌ ಅಲಿಯಾಸ್‌ ಎಂಜಿನಿಯರ್‌ ರಶೀದ್‌, ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಅವರನ್ನು ಸೋಲಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ. ವಿಶೇಷವೆಂದರೆ ಈ ಇಬ್ಬರೂ ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು.

ಯಾರು ಈ ಅಮೃತ್‌ ಪಾಲ್‌ ಸಿಂಗ್‌?

30 ವರ್ಷದ ಅಮೃತ್‌ಪಾಲ್‌ ಸಿಂಗ್ ಪ್ರತ್ಯೇಕ ರಾಷ್ಟ್ರಕ್ಕೆ ಹೋರಾಡ್ತಿದ್ದಾರೆ. ಈ ಅಮೃತ್‌ಪಾಲ್‌ ಸಿಂಗ್ ಖಲಿಸ್ತಾನಿ ನಾಯಕನಾಗಿದ್ದು, ಅಮೃತಸರದ ಜಲ್ಲುಪುರ್‌ ಖೈರಾ ಬಾಬಾ ಬಾಕಲ್‌ ಈತನ ಹುಟ್ಟೂರು. ಈತ ಖಲಿಸ್ತಾನಿ ಉಗ್ರ ಭಿಂದ್ರನ್‌ವಾಲೆಯ ಕಟ್ಟಾ ಅನುಯಾಯಿಯೂ ಆಗಿದ್ದಾನೆ. ಅಲ್ಲದೆ, ಪಂಜಾಬ್‌ ರಾಜ್ಯದಲ್ಲಿ 2ನೇ ಭಿಂದ್ರನ್‌ವಾಲೆ ಎಂಬ ಖ್ಯಾತಿಯನ್ನೂ ಪಡೆದಿದ್ದಾನೆ. 2012 ರಿಂದ 10 ವರ್ಷ ದುಬೈ ಟ್ರಾನ್ಸ್‌ಪೋರ್ಟ್‌ ಬ್ಯುಸಿನೆಸ್‌ನಲ್ಲಿ ಕೆಲಸ ಮಾಡಿದ್ದ ಎಂದೂ ತಿಳಿದುಬಂದಿದ್ದು, 2022 ರಲ್ಲಿ ಪಂಜಾಬ್‌ಗೆ ಹಿಂದಿರುಗಿದ್ದ. ಅಲ್ಲಿ ಆತನನ್ನು ಅರೆಸ್ಟ್‌ ಮಾಡಲಾಗಿತ್ತು. ಅಮೃತ್‌ಪಾಲ್ ಸಿಂಗ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (NSA-National Security Act) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿದ್ದಾನೆ. ಖಾದೂರ್ ಸಾಹಿಬ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಅಮೃತಪಾಲ್ ಸಿಂಗ್, ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಕುಲ್ಬೀರ್‌ ಸಿಂಗ್‌ ಜೀರಾ ವಿರುದ್ಧ ಪ್ರಚಂಡ ಗೆಲುವು ಸಾಧಿಸಿದ್ದಾರೆ.

ಓಮರ್‌ ಅಬ್ದುಲ್ಲಾಗೆ ಎಂಜಿನಿಯರ್‌ ರಶೀದ್‌ ಸೆಡ್ಡು

ಬಾರಾಮುಲ್ಲಾ ಕ್ಷೇತ್ರದಲ್ಲಿ ಐದು ಹಂತಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಎನ್‌ಸಿ ಪಕ್ಷ ಉಪಾಧ್ಯಕ್ಷ ಓಮರ್‌ ಅಬ್ದುಲ್ಲಾ ಭಾರೀ ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಓಮರ್‌ ಅಬ್ದುಲ್ಲಾ ಅವರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಂಜಿನಿಯರ್‌ ಅಬ್ದುಲ್‌ ರಶೀದ್‌ ತಿಹಾರ್‌ ಜೈಲಿನಿಂದಲೇ ಕಣಕ್ಕಿಳಿದಿದ್ದರು. ಅವರ ಪರವಾಗಿ ಅವರ ಪುತ್ರ ಅಬ್ರಾರ್‌ ರಶೀದ್‌ ಪ್ರಚಾರ ನಡೆಸಿದ್ದರು. ಇನ್ನು ರಶೀದ್‌ 1,49000, ಓಮರ್‌ ಅಬ್ದುಲ್ಲಾ 78,458 ಹಾಗೂ ಪೀಪಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಸಜ್ಜದ್‌ ಲೋನೆ 55,906 ಮತ ಗಳಿಸಿದ್ದಾರೆ. ಈತನ ವಿರುದ್ಧ ಭಯೋತ್ಪಾದಕರಿಗೆ ಹಣಕಾಸು ಸಹಾಯ ಮಾಡಿ ಆರೋಪದಲ್ಲಿ ತಿಹಾರ್‌ ಜೈಲಿನಲ್ಲಿದ್ದಾನೆ.

ಇಂದಿರಾ ಹಂತಕ ಬಿಯಾಂತ್‌ ಸಿಂಗ್‌ ಪುತ್ರನಿಗೆ ಮುನ್ನಡೆ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಿಯಾಂತ್‌ ಸಿಂಗ್‌ ಪುತ್ರನಾಗಿರುವ ಸರಬ್ಜಿತ್‌ ಸಿಂಗ್‌ ಕೂಡ ಈ ಬಾರಿ ತಮ್ಮ ಅದೃಷ್ಟ ಪರೀಕ್ಷೆಗಿಳಿದ್ದರು. ಪಂಜಾಬ್‌ನ ಫರೀದ್‌ ಕೋಟ್‌ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸರಬ್ಜಿತ್‌ ಸಿಂಗ್‌ ಈ ಬಾರಿ ಆಪ್‌ ಮುಖಂಡ ಕಮಲ್‌ಜಿತ್‌ ಅನ್ಮೋಲ್‌ ವಿರುದ್ಧ ಭಾರೀ ಮುನ್ನಡೆ ಸಾಧಿಸಿದ್ದಾರೆ. ಅವರು 2009, 2014 ಹಾಗೂ 2019 ರಲ್ಲೂ ಕಣಕ್ಕಿಳಿದಿದು ಸೋಲುಂಡಿದ್ದರು.

ಇದನ್ನೂ ಓದಿ:Odisha Assembly Result 2024: ಅಸೆಂಬ್ಲಿ ಎಲೆಕ್ಷನ್‌; ಮತ ಎಣಿಕೆ ಶುರು-ಒಡಿಶಾದಲ್ಲಿ ಮತ್ತೆ ಗದ್ದುಗೆ ಏರುತ್ತಾ ಬಿಜೆಡಿ?

Exit mobile version