ನವದೆಹಲಿ: 2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳು(Election Results 2024) ಪ್ರಕಟವಾಗುತ್ತಿದ್ದು,400ಕ್ಕೂ ಅಧಿಕ ಸ್ಥಾನಗಳ ಮೂಲಕ ಪ್ರಚಂಡ ಗೆಲುವು ಸಾಧಿಸಿ ಸ್ವತಂತ್ರವಾಗಿ ಕೇಂದ್ರದಲ್ಲಿ ಸರ್ಕಾರ ರಚಿಸುವ ಬಿಜೆಪಿ (BJP) ಕನಸು ಈ ಬಾರಿ ಕನಸಾಗಿಯೇ ಉಳಿದಿದೆ. ಈಗ ಬಿಜೆಪಿ ತನ್ನ ಮಿತ್ರಪಕ್ಷಗಳನ್ನೇ ನೆಚ್ಚಿಕೊಳ್ಳಬೇಕಿದ್ದು, ಮುಖ್ಯವಾಗಿ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ತೆಲುಗುದೇಶಂ ಪಾರ್ಟಿ (TDP) ಹಾಗೂ ಬಿಹಾರದ ನಿತೀಶ್ ಕುಮಾರ್(Nitish Kumar) ಕಿಂಗ್ ಮೇಕರ್‌ಗಳಾಗಲಿದ್ದಾರೆ. ಇನ್ನು ನಿತೀಶ್ ಕುಮಾರ್ ಮತ್ತು ಚಂದ್ರ ಬಾಬು ನಾಯ್ಡು ಭರ್ಜರಿ ಆಫರ್ ನೀಡಿ ತನ್ನತ್ತ ಸೆಳೆದು ಕೇಂದ್ರದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಹವಣಿಸುತ್ತಿದೆ.
ಆದರೆ ಕಾಂಗ್ರೆಸ್ ಆಫರ್ ಅನ್ನು ನಿರಾಕರಿಸಿರುವ ಚಂದ್ರ ಬಾಬು ನಾಯ್ಡು ಈಗಾಗಲೇ ತಮ್ಮ ಬೆಂಬಲ ಏನಿದ್ದರೂ ಅದು ಎನ್‌ಡಿಎಗೆ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕೂಡ ಇದನ್ನೇ ಹೇಳಿದ್ದು, ಮೊದಲೇ ಹೇಳಿದಂತೆ ಬಿಜೆಪಿ ಜೊತೆಗೇ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದೆ. ಈ ಬಗ್ಗೆ ಪಕ್ಷದ ಮುಖಂಡರಾದ ನೀರಜ್ ಕುಮಾರ್ ಮತ್ತು ವಕ್ತಾರ ಕೆಸಿ ತ್ಯಾಗಿ ಹೇಳಿದ್ದಾರೆ.
ನಾವು ಮೊದಲೇ ಹೇಳಿದ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಎನ್‌ಡಿಎಗೆ ಮತ್ತೊಮ್ಮೆ ನಾವು ಬೆಂಬಲ ಕೊಡುತ್ತೇವೆ. ಎನ್‌ಡಿಎ ಜೊತೆಗೇ ಮುಂದುವರೆಯುತ್ತೇವೆ ಎಂದು ತ್ಯಾಗಿ ಹೇಳಿದ್ದಾರೆ. ನಿತೀಶ್ ಕುಮಾರ್ ಅವರಿಗೆ ಮೈತ್ರಿಕೂಟದ ನಿಜವಾದ ಅರ್ಥವನ್ನು ಅರ್ಥೈಸಿಕೊಂಡಿದ್ದಾರೆ. ಹೀಗಾಗಿ ನಾವು ಮೈತ್ರಿಕೂಟದ ಜೊತೆಗೆ ನಮ್ಮ ಮೈತ್ರಿಯನ್ನು ಮುಂದುವರೆಸುತ್ತೇವೆ ಎಂದು ನೀರಜ್ ಕುಮಾರ್ ತಿಳಿಸಿದ್ದಾರೆ. ಇನ್ನು ಜೆಡಿಯು ಜಮಾ ಖಾನ್ ಪ್ರತಿಕ್ರಿಯಿಸಿದ್ದು, ನಮ್ಮ ನಾಯಕರು ಏನು ನಿರ್ಧಾರ ಮಾಡುತ್ತಾರೋ ನಾವು ಹಾಗೇಯೇ ನಡೆದುಕೊಳ್ಳುತ್ತೇವೆ. ನಿತೀಶ್ ಕುಮಾರ್ ಸದಾ ಜನರ ಹಿತಾಸಕ್ತಿಯನ್ನು ಬಯಸುತ್ತಾರೆ. ಅವರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದಿದ್ದಾರೆ.
ಬಿಹಾರದ 40 ಸ್ಥಾನಗಳ ಪೈಕಿ ಜೆಡಿಯು 15ರಲ್ಲಿ ಮುನ್ನಡೆ ಸಾಧಿಸಿದ್ದರೆ, ಆಂಧ್ರಪ್ರದೇಶದ 25 ಲೋಕಸಭಾ ಸ್ಥಾನಗಳಲ್ಲಿ 16ರಲ್ಲಿ ಟಿಡಿಪಿ ಮುನ್ನಡೆ ಸಾಧಿಸಿದೆ. ಎರಡೂ ಪಕ್ಷಗಳು ಪ್ರಸ್ತುತ NDAಯಲ್ಲಿವೆ. ಆದರೆ ಇವರಿಬ್ಬರೂ ಹಿಂದೆ ಮಾಡಿದಂತೆ ಮೈತ್ರಿ ಬದಲಾಯಿಸಿದರೆ ಸನ್ನಿವೇಶ ಉಲ್ಟಾ ಹೊಡೆಯುತ್ತದೆ.
ಇಂಡಿಯಾ ಮೈತ್ರಿಕೂಟದ ಮುಖಂಡರು ಈಗಾಗಲೇ ಈ ಇಬ್ಬರೂ ನಾಯಕರನ್ನು ಸಂಪರ್ಕಿಸುವ ಕಾರ್ಯವನ್ನು ಶುರು ಮಾಡಿದ್ದಾರೆ. ಇಂಡಿ ನಾಯಕರೊಂದಿಗೂ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡಿರುವ ಈ ಇಬ್ಬರೂ ನಾಯಕರು, ಅಧಿಕಾರ ಹಂಚಿಕೆಯ ವಿಚಾರದಲ್ಲಿ ಉತ್ತಮ ಆಫರ್ ಬಂದರೆ ಅತ್ತ ಕಡೆ ಜಿಗಿಯುವ ಸಾಧ್ಯತೆ ಇದೆ ಎನ್ನಲಾಗಿತ್ತು.
ಇದನ್ನೂ ಓದಿ:Election results 2024: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಢವಢವ; ಮತ ಎಣಿಕೆಯಲ್ಲಿ ಪೈಪೋಟಿ ಒಡ್ಡಿದ ಇಂಡಿಯಾ ಬ್ಲಾಕ್