ಪಾಟ್ನಾ: 2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳು(Election Results 2024) ಪ್ರಕಟವಾಗುತ್ತಿದ್ದು,400ಕ್ಕೂ ಅಧಿಕ ಸ್ಥಾನಗಳ ಮೂಲಕ ಪ್ರಚಂಡ ಗೆಲುವು ಸಾಧಿಸಿ ಸ್ವತಂತ್ರವಾಗಿ ಕೇಂದ್ರದಲ್ಲಿ ಸರ್ಕಾರ ರಚಿಸುವ ಬಿಜೆಪಿ (BJP) ಕನಸು ಈ ಬಾರಿ ಕನಸಾಗಿಯೇ ಉಳಿದಿದೆ. ಈಗ ಬಿಜೆಪಿ ತನ್ನ ಮಿತ್ರಪಕ್ಷಗಳನ್ನೇ ನೆಚ್ಚಿಕೊಳ್ಳಬೇಕಿದ್ದು, ಮುಖ್ಯವಾಗಿ ಬಿಹಾರದ ನಿತೀಶ್ ಕುಮಾರ್(Nitish Kumar) ಕಿಂಗ್ ಮೇಕರ್ ಆಗಿದ್ದಾರೆ. ಹೀಗಾಗಿ ಇಂದು ದೆಹಲಿಯಲ್ಲಿ ಬಿಜೆಇ ನೇತೃತ್ವದ ಎನ್‌ಡಿಎ ಮಹತ್ವದ ಸಭೆ ಕರೆದಿದ್ದು, ನಿತೀಶ್ ಕುಮಾರ್ ಕೂಡ ಆ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸುವ ಕಾರಣ ಅವರ ಬೇಡಿಕೆಗಳೇನು? ಎಂಬುದನ್ನು ಕಾದು ನೋಡಬೇಕಾಗಿದೆ.
ಬಿಹಾರದಲ್ಲಿ 40 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಗೆಲ್ಲುವಲ್ಲಿ ಜೆಡಿಯು ಯಶಸ್ವಿ ಆಗಿದ್ದು, ಇಂದು ಬೆಳಗ್ಗೆ ನಿತೀಶ್ ಕುಮಾರ್ ದೆಹಲಿಗೆ ತೆರಳಲಿದ್ದಾರೆ. ವಾರಾಂತ್ಯದಲ್ಲಿ ದೆಹಲಿಗೆ ಭೇಟಿ ನೀಡಿದ್ದ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಉನ್ನತ ನಾಯಕರನ್ನು ಭೇಟಿ ಮಾಡಿದ್ದರು. ಇದೀಗ ನಿತೀಶ್‌ಗೆ ಕಾಂಗ್ರೆಸ್‌ನಿಂದಲೂ ಬಿಗ್ ಆಫರ್ ಬಂದಿದ್ದು, ಮತ್ತೆ ಎನ್‌ಡಿಎಯಿಂದ ಹೊರ ನಡೆಯುತ್ತಾರೋ ಎಂಬ ಭೀತಿ ಬಿಜೆಪಿಗೆ ಇದ್ದೇ ಇದೆ. ಆದರೆ ನಿನ್ನ ಜೆಡಿಯು ನಾಯಕರು ನಿತೀಶ್ ಕುಮಾರ್ ಎನ್‌ಡಿಎ ಜೊತೆಗೇ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ನಾವು ಮೊದಲೇ ಹೇಳಿದ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಎನ್‌ಡಿಎಗೆ ಮತ್ತೊಮ್ಮೆ ನಾವು ಬೆಂಬಲ ಕೊಡುತ್ತೇವೆ. ಎನ್‌ಡಿಎ ಜೊತೆಗೇ ಮುಂದುವರೆಯುತ್ತೇವೆ ಎಂದು ತ್ಯಾಗಿ ಹೇಳಿದ್ದಾರೆ. ನಿತೀಶ್ ಕುಮಾರ್ ಅವರಿಗೆ ಮೈತ್ರಿಕೂಟದ ನಿಜವಾದ ಅರ್ಥವನ್ನು ಅರ್ಥೈಸಿಕೊಂಡಿದ್ದಾರೆ. ಹೀಗಾಗಿ ನಾವು ಮೈತ್ರಿಕೂಟದ ಜೊತೆಗೆ ನಮ್ಮ ಮೈತ್ರಿಯನ್ನು ಮುಂದುವರೆಸುತ್ತೇವೆ ಎಂದು ನೀರಜ್ ಕುಮಾರ್ ತಿಳಿಸಿದ್ದಾರೆ. ಇನ್ನು ಜೆಡಿಯು ಜಮಾ ಖಾನ್ ಪ್ರತಿಕ್ರಿಯಿಸಿದ್ದು, ನಮ್ಮ ನಾಯಕರು ಏನು ನಿರ್ಧಾರ ಮಾಡುತ್ತಾರೋ ನಾವು ಹಾಗೇಯೇ ನಡೆದುಕೊಳ್ಳುತ್ತೇವೆ. ನಿತೀಶ್ ಕುಮಾರ್ ಸದಾ ಜನರ ಹಿತಾಸಕ್ತಿಯನ್ನು ಬಯಸುತ್ತಾರೆ. ಅವರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದಿದ್ದಾರೆ.
ಇಂದೇ ನಡೆಯಲಿದೆ ಕೇಂದ್ರ ಸಚಿವ ಸಂಪುಟ ಸಭೆ
ಲೋಕಸಭೆ ಚುನಾವಣೆ ಫಲಿತಾಂಶಗಳ ಅವಲೋಕನಕ್ಕಾಗಿ ಕೇಂದ್ರ ಸಚಿವ ಸಂಪುಟವು ಇಂದು ಬೆಳಗ್ಗೆ ಸಭೆ ಸೇರಲಿದ್ದು, ಪ್ರಸ್ತುತ ಲೋಕಸಭೆಯನ್ನು ವಿಸರ್ಜನೆ ಮಾಡಲು ಶಿಫಾರಸು ಮಾಡಬಹುದು. ಸಾರ್ವತ್ರಿಕ ಚುನಾವಣೆ ಫಲಿತಾಂಶ ಪ್ರಕಟವಾದ ಒಂದು ದಿನದ ನಂತರ ಬೆಳಗ್ಗೆ 11.30ಕ್ಕೆ ಆರಂಭವಾಗಲಿರುವ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ. ಮೋದಿ ಅವರು ತಮ್ಮ ಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ಸಭೆಯನ್ನು ಕರೆದಿದ್ದಾರೆ ಮತ್ತು ಜೂನ್ 16 ಕ್ಕೆ ಅವಧಿ ಮುಗಿಯುವ 17 ನೇ ಲೋಕಸಭೆಯನ್ನು ವಿಸರ್ಜನೆ ಮಾಡಲು ಶಿಫಾರಸು ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇಂಡಿಯಾ ಒಕ್ಕೂಟದ ಮಹತ್ವದ ಸಭೆ
ಲೋಕಸಭೆ ಚುನಾವಣೆಯಲ್ಲಿ ಅನುಕೂಲಕರ ಫಲಿತಾಂಶ ಬಂದ ನಂತರ ಮುಂದಿನ ಕಾರ್ಯತಂತ್ರ ರೂಪಿಸಲು ಇಂಡಿಯಾ ಬಣದ ನಾಯಕರು ಬುಧವಾರ ದೆಹಲಿಯಲ್ಲಿ ಸಭೆ ಸೇರಲಿದ್ದಾರೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ರಾಜಕೀಯ ಬದಲಾವಣೆಗೆ ವಾತಾವರಣವು ಅನುಕೂಲಕರವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:Election Results 2024: 25 ವರ್ಷದ ಶಾಂಭವಿ ಚೌಧರಿ ದೇಶದ ಅತ್ಯಂತ ಕಿರಿಯ ಸಂಸದೆ