Site icon Vistara News

Election Results 2024: ಹ್ಯಾಟ್ರಿಕ್‌ ಸರದಾರ ಮೋದಿಗೆ ವಿಶ್ವನಾಯಕರಿಂದ ಅಭಿನಂದನೆ

Election Results 2024

ನವದೆಹಲಿ: ಲೋಕಸಭೆ ಚುನಾವಣೆ(Election Results 2024)ಯ ಫಲಿತಾಂಶ ಹೊರಬಿದ್ದಿದೆ. 290 ಸ್ಥಾನಗಳ ಮೂಲಕ ಬಿಜೆಪಿ ನೇತೃತ್ವ ಎನ್‌ಡಿಎ ಸರ್ಕಾರ ಮೂರನೇ ಬಾರಿ ಗದ್ದುಗೆ ಏರಲು ಸಜ್ಜಾಗಿದೆ. ಇನ್ನು ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರಿಗೆ ವಿಶ್ವದ ಹಲವು ನಾಯಕರಿಂದ ಅಭಿನಂದನೆ ಮಹಾಪೂರಗಳು ಹರಿದುಬಂದಿವೆ. ಮಾಲ್ಡೀವಿಯನ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮತ್ತು ಇಟಾಲಿಯನ್ ಅಧ್ಯಕ್ಷೆ ಜಾರ್ಜಿಯಾ ಮೆಲೋನಿ ಸೇರಿದಂತೆ ನೆರೆಯ ರಾಷ್ಟ್ರಗಳಾದ ಭೂತಾನ್‌, ನೇಪಾಳಗಳಿಂದ ನಾಯಕರು ಟ್ವೀಟ್‌ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ‘2024 ರ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಯಶಸ್ವಿಯಾಗಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಎನ್‌ಡಿಎ ಒಕ್ಕೂಟಕ್ಕೆ ಅಭಿನಂದನೆಗಳು. ಎರಡೂ ದೇಶಗಳ ಸಾಮಾನ್ಯ ಏಳಿಗೆಗಾಗಿ ಒಟ್ಟಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’ ಎಂದು ಹೇಳಿದ್ದಾರೆ.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕೂಡ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅವರು X ನಲ್ಲಿ ಪೋಸ್ಟ್ ಮಾಡಿ, ‘ಹೊಸ ಚುನಾವಣಾ ಗೆಲುವು ಮತ್ತು ಉತ್ತಮ ಕೆಲಸಕ್ಕಾಗಿ ಶುಭಾಶಯಗಳು. ಇಟಲಿ ಮತ್ತು ಭಾರತವನ್ನು ಒಂದುಗೂಡಿಸುವ ಸ್ನೇಹವನ್ನು ಬಲಪಡಿಸಲು ಮತ್ತು ನಮ್ಮ ರಾಷ್ಟ್ರಗಳು ಮತ್ತು ನಮ್ಮ ಜನರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂಬುದು ಖಚಿತ’ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಇನ್ನು ಭೂತಾನ್ ಪ್ರಧಾನಿ ತ್ಶೆರಿಂಗ್ ತೊಬ್ಗೇ ಕೂಡ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ದು, ಅವರು ‘ಭಾರತದೊಂದಿಗೆ ಸಂಬಂಧವನ್ನು ಬಲಪಡಿಸಲು ಉತ್ಸುಕರಾಗಿದ್ದೇವೆ. ವಿಶ್ವದ ಅತಿದೊಡ್ಡ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ನನ್ನ ಸ್ನೇಹಿತ ಪ್ರಧಾನಿ ಮೋದಿ ಮತ್ತು ಎನ್‌ಡಿಎಗೆ ಅಭಿನಂದನೆಗಳು. ಅವರು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ನಮ್ಮ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಕೂಡ ಮೋದಿ ಅವರನ್ನು ಅಭಿನಂದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಪ್ರಗತಿ ಮತ್ತು ಸಮೃದ್ಧಿಯಲ್ಲಿ ಭಾರತೀಯ ಜನರ ನಂಬಿಕೆಯನ್ನು ಎನ್‌ಡಿಎ ಗೆದ್ದು ತೋರಿಸಿದೆ. ಶ್ರೀಲಂಕಾ ತನ್ನ ಹತ್ತಿರದ ನೆರೆಯ ರಾಷ್ಟ್ರವಾಗಿದ್ದು, ಭಾರತದೊಂದಿಗೆ ತನ್ನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಎದುರು ನೋಡುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:Election Results 2024: ರಾಮ ಮಂದಿರ ಭದ್ರ, ಯುಪಿ ಅಭದ್ರ: ಉತ್ತರ ಪ್ರದೇಶದಲ್ಲಿ ಬಿಜೆಪಿ 64ರಿಂದ 36ಕ್ಕೆ ಕುಸಿಯಲು ಕಾರಣ ಇಲ್ಲಿದೆ

Exit mobile version