ನವದೆಹಲಿ: ಸುಪ್ರೀಂ ಕೋರ್ಟ್ (Supreme Court) ಆದೇಶದಂತೆ ಭಾರತದ ಚುನಾವಣಾ ಆಯೋಗ (Election Commission of India) ಎಸ್ಬಿಐ (SBI)ಯಿಂದ ಪಡೆದ ಚುನಾವಣಾ ಬಾಂಡ್ (Electoral Bond)ಗಳ ಮಾಹಿತಿಯನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಸುಪ್ರೀಂ ಕೋರ್ಟ್ ಮಾರ್ಚ್ 15ರ ಒಳಗಡೆ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕೆಂದು ಚುನಾವಣಾ ಆಯೋಗಕ್ಕೆ ಗಡುವು ನೀಡಿತ್ತು. ಇದೀಗ ಚುನಾವಣಾ ಆಯೋಗ ಒಂದು ದಿನದ ಮೊದಲೇ ಮಾಹಿತಿಯನ್ನು ಪ್ರಕಟಿಸಿದೆ.
ನ್ಯಾಯಾಲಯದ ಸೂಚನೆಯಂತೆ ಚುನಾವಣಾ ಬಾಂಡ್ಗಳ ವಿವರಗಳನ್ನು ಎರಡು ವಿಭಾಗಗಳಲ್ಲಿ ಹಂಚಿಕೊಳ್ಳಲಾಗಿದೆ. ಮೊದಲ ಭಾಗದಲ್ಲಿ ಬಾಂಡ್ಗಳ ಖರೀದಿದಾರರ ಹೆಸರು ಮತ್ತು ಮುಖಬೆಲೆಯನ್ನು ತೋರಿಸಲಾಗಿದೆ. ಇನ್ನೊಂದರಲ್ಲಿ ರಾಜಕೀಯ ಪಕ್ಷಗಳು ಮತ್ತು ಅವುಗಳು ನಗದು ಮಾಡಿದ ಬಾಂಡ್ಗಳ ಬೆಲೆಯನ್ನು ಪ್ರಕಟಿಸಲಾಗಿದೆ.
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಟಾಪ್ 10 ದಾನಿಗಳು
ಫ್ಯೂಚರ್ ಗೇಮಿಂಗ್ & ಹೋಟೆಲ್ ಸರ್ವೀಸಸ್ ಪಿಆರ್ – 1,368 ಕೋಟಿ ರೂ.
ಮೇಘಾ ಎಂಜಿನಿಯರಿಂಗ್ & ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ – 966 ಕೋಟಿ ರೂ.
ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ – 410 ಕೋಟಿ ರೂ.
ವೇದಾಂತ ಲಿಮಿಟೆಡ್ – 400 ಕೋಟಿ ರೂ.
ಹಲ್ದಿಯಾ ಎನರ್ಜಿ ಲಿಮಿಟೆಡ್ – 377 ಕೋಟಿ ರೂ.
ಭಾರ್ತಿ ಗ್ರೂಪ್ – 247 ಕೋಟಿ ರೂ.
ಎಸ್ಸೆಲ್ ಮೈನಿಂಗ್ & ಇಂಡಸ್ಟ್ರೀಸ್ ಲಿಮಿಟೆಡ್ – 224 ಕೋಟಿ ರೂ.
ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್ಮಿಷನ್ ಕಂಪೆನಿ ಲಿಮಿಟೆಡ್ – 220 ಕೋಟಿ ರೂ.
ಕೆವೆಂಟರ್ ಫುಡ್ಪಾರ್ಕ್ ಇನ್ಫ್ರಾ ಲಿಮಿಟೆಡ್ – 195 ಕೋಟಿ ರೂ.
ಮದನ್ ಲಾಲ್ ಲಿಮಿಟೆಡ್ – 185 ಕೋಟಿ ರೂ.
ಯಾರಿಗೆ ಎಷ್ಟು?
ಈ ಪೈಕಿ ಬಿಜೆಪಿ ಸಿಂಹಪಾಲು ಪಡೆದುಕೊಂಡಿದೆ. ಬಿಜೆಪಿಯ ಪಾಲು 47.5%ಕ್ಕಿಂತ ಹೆಚ್ಚು (6,060.5 ಕೋಟಿ ರೂ.). ತೃಣಮೂಲ ಕಾಂಗ್ರೆಸ್ 1,609.50 ಕೋಟಿ ರೂ.(12.6%) ಪಡೆದರೆ, ಕಾಂಗ್ರೆಸ್ಗೆ 1,421.9 ಕೋಟಿ ರೂ. (11.1%) ಲಭಿಸಿದೆ. ಭಾರತ್ ರಾಷ್ಟ್ರ ಸಮಿತಿ (9.5%), ಬಿಜು ಜನತಾದಳ (6.1%) ಮತ್ತು ದ್ರಾವಿಡ ಮುನ್ನೇತ್ರ ಕಳಗಂ (5%) 500 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಚುನಾವಣಾ ಬಾಂಡ್ಗಳನ್ನು ನಗದೀಕರಿಸಿದ ಇತರ ಪಕ್ಷಗಳು.
ಫೆಬ್ರವರಿ 15ರಂದು ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಲ್ಲಿ, ಐದು ನ್ಯಾಯಾಧೀಶರ ಸಂವಿಧಾನ ಪೀಠವು ಅನಾಮಧೇಯ ರಾಜಕೀಯ ಧನಸಹಾಯವನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು. ಇದನ್ನು “ಅಸಂವಿಧಾನಿಕ” ಎಂದು ಕರೆದಿತ್ತು ಮತ್ತು ದಾನಿಗಳು ಮತ್ತು ಸ್ವೀಕರಿಸುವವರ ಮೊತ್ತವನ್ನು ಬಹಿರಂಗಪಡಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು.
ಅಫಿಡವಿಟ್ ಸಲ್ಲಿಸಿದ್ದ ಎಸ್ಬಿಐ
ಸುಪ್ರೀಂ ಕೋರ್ಟ್ ಯೋಜನೆಯನ್ನು ರದ್ದುಗೊಳಿಸುವ ಮೊದಲು 2019ರ ಏಪ್ರಿಲ್ ಮತ್ತು 2024ರ ಫೆಬ್ರವರಿ 15ರ ನಡುವೆ ಒಟ್ಟು 22,217 ಚುನಾವಣಾ ಬಾಂಡ್ಗಳನ್ನು ವಿತರಿಸಲಾಗಿದೆ ಎಂದು ಎಸ್ಬಿಐ ಮಾರ್ಚ್ 13ರಂದು ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿತ್ತು. ಜತೆಗೆ ಪೆನ್ಡ್ರೈವ್ನಲ್ಲಿ ಚುನಾವಣಾ ಸಂಸ್ಥೆಗೆ ಡೇಟಾವನ್ನು ಸಲ್ಲಿಸಲಾಗಿದೆ ಎಂದು ಹೇಳಿತ್ತು.
ಇದನ್ನೂ ಓದಿ: Electoral Bond : ಆಯೋಗಕ್ಕೆ ಚುನಾವಣಾ ಬಾಂಡ್ಗಳ ವಿವರ ಸಲ್ಲಿಸಿದ ಎಸ್ಬಿಐ