Site icon Vistara News

Electoral Bonds: ಚುನಾವಣಾ ಬಾಂಡ್‌ನ ವಿವರಗಳನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

Electoral Bonds

Electoral Bonds

ನವದೆಹಲಿ: ಚುನಾವಣಾ ಬಾಂಡ್‌ (Electoral Bonds)ಗೆ ಸಂಬಂಧಪಟ್ಟಂತೆ ಮಹತ್ವದ ಎಲ್ಲ ವಿವರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of Indiaಗುರುವಾರ ಚುನಾವಣಾ ಆಯೋಗ (Election Commission)ಕ್ಕೆ ಸಲ್ಲಿಸಿದೆ. ಚುನಾವಣಾ ಬಾಂಡ್ ಖರೀದಿಸಿದವರ ಹೆಸರು, ಮುಖಬೆಲೆ ಮತ್ತು ಬಾಂಡ್‌ನ ನಿರ್ದಿಷ್ಟ ಸಂಖ್ಯೆ, ಬಾಂಡ್ ಅನ್ನು ನಗದೀಕರಿಸಿದ ಪಕ್ಷದ ಹೆಸರು, ರಾಜಕೀಯ ಪಕ್ಷಗಳ ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳು, ಮುಖಬೆಲೆ ಮತ್ತು ನಗದೀಕರಿಸಿದ ಬಾಂಡ್‌ಗಳ ಸಂಖ್ಯೆ ಸಹಿತ ವಿವರವಾದ ಮಾಹಿತಿ ಇದರಲ್ಲಿದೆ.

ಎಲ್ಲಿ ಲಭ್ಯ?

ಚುನಾವಣಾ ಬಾಂಡ್‌ನ ವಿವರಗಳು www.eci.gov.in/candidate-politicalparty ವೆಬ್‌ಸೈಟ್‌ನಲ್ಲಿ ಲಭ್ಯ. ʼʼಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಎಸ್‌ಬಿಐ ಇಂದು (ಮಾರ್ಚ್ 21) ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ಡೇಟಾವನ್ನು ಚುನಾವಣಾ ಆಯೋಗಕ್ಕೆ ಒದಗಿಸಿದೆ. ಎಸ್‌ಬಿಐನಿಂದ ಪಡೆದ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆʼʼ ಎಂದು ಚುನಾವಣಾ ಆಯೋಗ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದೆ.

ಚುನಾವಣಾ ಬಾಂಡ್‌ಗಳ ಎಲ್ಲ ವಿವರಗಳನ್ನು ಚುನಾವಣಾ ಆಯೋಗಕ್ಕೆ (ಇಸಿಐ) ನೀಡಲಾಗಿದೆ ಮತ್ತು “ಯಾವುದನ್ನೂ ತಡೆಹಿಡಿಯಲಾಗಿಲ್ಲ” ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸ್ವಾಧೀನದಲ್ಲಿರುವ ಮತ್ತು ವಶದಲ್ಲಿರುವ ಚುನಾವಣಾ ಬಾಂಡ್‌ಗಳ ಎಲ್ಲ ವಿವರಗಳನ್ನು ಭಾರತದ ಚುನಾವಣಾ ಆಯೋಗಕ್ಕೆ ಒದಗಿಸಿದೆ / ಬಹಿರಂಗಪಡಿಸಿದೆ” ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು

ಫೆಬ್ರವರಿ 15ರಂದು ನೀಡಿದ ಐತಿಹಾಸಿಕ ತೀರ್ಪಿನಲ್ಲಿ, ಐದು ನ್ಯಾಯಾಧೀಶರ ಸಂವಿಧಾನ ಪೀಠವು ಅನಾಮಧೇಯ ರಾಜಕೀಯ ಧನಸಹಾಯವನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು. ಇದನ್ನು “ಅಸಂವಿಧಾನಿಕ” ಎಂದು ಕರೆದಿತ್ತು ಮತ್ತು ದಾನಿಗಳು ಮತ್ತು ಸ್ವೀಕರಿಸುವವರ ಮೊತ್ತವನ್ನು ಮಾರ್ಚ್ 13ರೊಳಗೆ ಬಹಿರಂಗಪಡಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು. ಎರಡು ವಿಭಾಗಗಳಲ್ಲಿ ಎಸ್‌ಬಿಐ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಒಂದು ವಿಭಾಗದಲ್ಲಿ, ಚುನಾವಣೆ ಬಾಂಡ್‌ಗಳನ್ನು ಖರೀದಿಸಿ ದೇಣಿಗೆ ನೀಡಿದವರ ಮಾಹಿತಿ, ಹೆಸರು, ಅವರು ನೀಡಿದ ಮೊತ್ತದ ದಾಖಲೆ ಇರಬೇಕು. ಇನ್ನು, ಎರಡನೇ ಭಾಗದಲ್ಲಿ ರಾಜಕೀಯ ಪಕ್ಷಗಳು ಬಾಂಡ್‌ಗಳ ಮೂಲಕ ದೇಣಿಗೆಯನ್ನು ನಗದೀಕರಣ ಮಾಡಿಕೊಂಡಿರುವ ಕುರಿತು ಮಾಹಿತಿ ಇರಬೇಕು ಎಂದು ಸೂಚಿಸಿತ್ತು.

ಯಾರಿಗೆ ಎಷ್ಟು ದೇಣಿಗೆ?

ಬಹಿರಂಗಗೊಂದ ಮಾಹಿತಿಯ ಪ್ರಕಾರ 1,260 ಕಂಪನಿಗಳು ಮತ್ತು ವ್ಯಕ್ತಿಗಳು 2019 ಮತ್ತು 2024ರ ನಡುವೆ 12,155.51 ರೂ. ಮೌಲ್ಯದ 22,217 ಬಾಂಡ್‌ಗಳನ್ನು ಖರೀದಿಸಿದ್ದಾರೆ. 23 ರಾಜಕೀಯ ಪಕ್ಷಗಳು ಈ ಬಾಂಡ್‌ಗಳನ್ನು ರಿಡೀಮ್ ಮಾಡಿಕೊಂಡಿವೆ. ಬಿಜೆಪಿ 6,061 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ರಿಡೀಮ್ ಮಾಡಿದೆ. ಅಚ್ಚರಿಯೆಂದರೆ 1,610 ಕೋಟಿ ರೂ. ಮೌಲ್ಯದ ಬಾಂಡ್‌ಗಳೊಂದಿಗೆ ತೃಣಮೂಲ ಕಾಂಗ್ರೆಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 1422 ಕೋಟಿ ರೂ. ಪಡೆದ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Electoral Bonds: ₹1368 ಕೋಟಿ ದೇಣಿಗೆ ನೀಡಿದ ‘ಲಾಟರಿ ಕಿಂಗ್’ ಯಾರು?

ತಮಿಳುನಾಡು ಮೂಲದ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್‌ ಈ ಐದು ವರ್ಷಗಳಲ್ಲಿ ಅತಿದೊಡ್ಡ ಮೊತ್ತವನ್ನು ದೇಣಿಗೆ ನೀಡಿದೆ- 1,368 ಕೋಟಿ ರೂ. ಆಂಧ್ರಪ್ರದೇಶ ಮೂಲದ ಮೇಘಾ ಎಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ 891 ಕೋಟಿ ರೂ., ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ 410 ಕೋಟಿ ರೂ., ವೇದಾಂತ ಲಿಮಿಟೆಡ್ 400 ಕೋಟಿ ರೂ. ಮತ್ತು ಹಲ್ದಿಯಾ ಎನರ್ಜಿ ಲಿಮಿಟೆಡ್ 377 ಕೋಟಿ ರೂ. ದೇಣಿಗೆ ನೀಡಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version