ನವದೆಹಲಿ: ಸುಪ್ರೀಂ ಕೋರ್ಟ್ (Supreme Court) ಆದೇಶದ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಗುರುವಾರ ಚುನಾವಣಾ ಬಾಂಡ್ (Electoral Bonds)ಗಳ ವಿಶಿಷ್ಟ ಸಂಖ್ಯೆಗಳು ಸೇರಿದಂತೆ ಸಂಪೂರ್ಣ ವಿವರಗಳನ್ನು ಚುನಾವಣಾ ಆಯೋಗ (Election Commission)ಕ್ಕೆ ಸಲ್ಲಿಸಿದೆ. ಮಾರ್ಚ್ 18ರಂದು ಸುಪ್ರೀಂ ಕೋರ್ಟ್ ಎಸ್‌ಬಿಐಗೆ ತನ್ನ ಬಳಿ ಇರುವ ಚುನಾವಣಾ ಬಾಂಡ್‌ಗಳ ಎಲ್ಲ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸುವಂತೆ ಸೂಚಿಸಿತ್ತು. ಇದರೊಂದಿಗೆ ಚುನಾವಣಾ ಬಾಂಡ್ ಖರೀದಿಸುವವರ ಹೆಸರು, ಮುಖಬೆಲೆ ಮತ್ತು ಬಾಂಡ್‌ನ ನಿರ್ದಿಷ್ಟ ಸಂಖ್ಯೆ, ಬಾಂಡ್ ಅನ್ನು ನಗದೀಕರಿಸಿದ ಪಕ್ಷದ ಹೆಸರು, ರಾಜಕೀಯ ಪಕ್ಷಗಳ ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳು, ಮುಖಬೆಲೆ ಮತ್ತು ನಗದೀಕರಿಸಿದ ಬಾಂಡ್‌ಗಳ ಸಂಖ್ಯೆ ತಿಳಿಯಲಿದೆ.
ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖರೀದಿದಾರರ ವಿವರಗಳು ಮತ್ತು ಪಕ್ಷಗಳು ಸ್ವೀಕರಿಸಿದ ಮೊತ್ತ ಮತ್ತು ನಿಧಿಯ ವಿವರಗಳನ್ನು ಪ್ರತ್ಯೇಕವಾಗಿ ಸಲ್ಲಿಸಿತ್ತು. “ರಾಜಕೀಯ ಪಕ್ಷಗಳ ಸಂಪೂರ್ಣ ಬ್ಯಾಂಕ್ ಖಾತೆ ಸಂಖ್ಯೆಗಳು ಮತ್ತು ಕೆವೈಸಿ ವಿವರಗಳನ್ನು ಸಾರ್ವಜನಿಕಗೊಳಿಸಲಾಗುತ್ತಿಲ್ಲ. ಏಕೆಂದರೆ ಇದು ಖಾತೆಯ ಭದ್ರತೆಗೆ (ಸೈಬರ್ ಭದ್ರತೆ) ಧಕ್ಕೆ ತರಬಹುದು. ಅಂತೆಯೇ ಭದ್ರತಾ ಕಾರಣಗಳಿಗಾಗಿ ಖರೀದಿದಾರರ ಕೆವೈಸಿ ವಿವರಗಳನ್ನು ಸಹ ಬಹಿರಂಗಗೊಳಿಸುತ್ತಿಲ್ಲ. ಆದಾಗ್ಯೂ ರಾಜಕೀಯ ಪಕ್ಷಗಳನ್ನು ಗುರುತಿಸಲು ಅವು ಅಗತ್ಯವಿಲ್ಲʼʼ ಎಂದು ಎಸ್‌ಬಿಐ ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿತ್ತು.
ಇದೀಗ ಕೆವೈಸಿ ವಿವರಗಳು ಮತ್ತು ಸಂಪೂರ್ಣ ಖಾತೆ ಸಂಖ್ಯೆಗಳನ್ನು ಹೊರತುಪಡಿಸಿ ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಈಗ ಯಾವುದೇ ಬಹಿರಂಗಪಡಿಸದ ವಿವರಗಳಿಲ್ಲ ಎಂದು ಬ್ಯಾಂಕ್ ಅಧ್ಯಕ್ಷರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡಲು ವ್ಯಕ್ತಿಗಳು ಮತ್ತು ಉದ್ಯಮಗಳಿಗೆ ಅವಕಾಶ ನೀಡುವ ಚುನಾವಣಾ ಬಾಂಡ್‌ಗಳ (Electoral Bond) ಸಂಪೂರ್ಣ ಡೇಟಾವನ್ನು ಹಂಚಿಕೊಳ್ಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಸರ್ವೋಚ್ಛ ನ್ಯಾಯಾಲಯವು ಈ ಯೋಜನೆಯನ್ನು ಕೆಲವು ದಿನಗಳ ಹಿಂದೆ ರದ್ದುಗೊಳಿಸಿತ್ತು. ಕಳೆದ 5 ವರ್ಷಗಳಲ್ಲಿ ಮಾಡಿದ ದೇಣಿಗೆಗಳ ಬಗ್ಗೆ ಎಲ್ಲ ವಿವರಗಳನ್ನು ಹಂಚಿಕೊಳ್ಳುವಂತೆ ಬ್ಯಾಂಕಿಗೆ ನಿರ್ದೇಶನ ನೀಡಿತ್ತು.
ಚುನಾವಣಾ ಆಯೋಗದ ಅರ್ಜಿ ಆಲಿಸಿದ ಸುಪ್ರೀಂ ಕೋರ್ಟ್, ಸುಪ್ರೀಂ ಕೋರ್ಟ್ ಒದಗಿಸಿದ ದತ್ತಾಂಶವು ಅಪೂರ್ಣವಾಗಿದೆ ಎಂದು ಹೇಳಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಪೀಠವು ಈಗಾಗಲೇ ಹಂಚಿಕೊಂಡಿರುವ ವಿವರಗಳ ಜೊತೆಗೆ ಚುನಾವಣಾ ಬಾಂಡ್ ಸಂಖ್ಯೆ ಸೇರಿದಂತೆ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸುವಂತೆ ಎಸ್‌ಬಿಐಗೆ ನಿರ್ದೇಶನ ನೀಡಿತ್ತು.
ಇದನ್ನೂ ಓದಿ: Electoral Bonds: ಚುನಾವಣಾ ಬಾಂಡ್‌ಗಳ ಕುರಿತು ಹೆಚ್ಚಿನ ಮಾಹಿತಿ ಬಹಿರಂಗ; ಇದರಲ್ಲಿ ಏನಿದೆ?
ಚುನಾವಣಾ ಬಾಂಡ್ ಸಂಖ್ಯೆಗಳು ದಾನಿಗಳು ಮತ್ತು ರಾಜಕೀಯ ಪಕ್ಷಗಳ ನಡುವಿನ ಸಂಪರ್ಕವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. ಈ ಹಿಂದೆ ಬಹಿರಂಗಪಡಿಸಿದ ವಿವರಗಳ ಪ್ರಕಾರ, ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್ ಒಡೆತನದ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವೀಸಸ್ ಚುನಾವಣಾ ಬಾಂಡ್‌ಗಳನ್ನು ಹೆಚ್ಚು ಖರೀದಿಸಿದವರ ಪೈಕಿ ಮೊದಲ ಸ್ಥಾನದಲ್ಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ