Site icon Vistara News

Electoral Bonds: ಚುನಾವಣೆ ಬಾಂಡ್‌ ವಿವಾದದಿಂದ ಬಿಜೆಪಿಗೆ ಹಾನಿ?

Narendra Modi

ಹೊಸದಿಲ್ಲಿ: ಚುನಾವಣಾ ಬಾಂಡ್‌ (Electoral Bonds) ವಿವಾದವು ತಮ್ಮ ಸರಕಾರಕ್ಕೆ ಲೋಕಸಭೆ ಚುನಾವಣೆ (Lok Sabha Election 2024) ಸಂದರ್ಭದಲ್ಲಿ ಹಿನ್ನಡೆ ಉಂಟು ಮಾಡಿದೆ ಎಂಬ ಟೀಕೆಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ನಿರಾಕರಿಸಿದ್ದು, ಯಾವುದೇ ವ್ಯವಸ್ಥೆಯು ಪರಿಪೂರ್ಣವಾದುದಲ್ಲ ಮತ್ತು ಯಾವುದೇ ನ್ಯೂನತೆಗಳಿದ್ದರೆ ಅದನ್ನು ಸುಧಾರಿಸಬಹುದು ಎಂದು ಹೇಳಿದ್ದಾರೆ.

“ನಾವು ಏನು ಮಾಡಿದ್ದೇವೆ ಎಂದು ಚುನಾವಣೆ ಬಾಂಡ್‌ ವಿಚಾರದಲ್ಲಿ ಹಿನ್ನಡೆ ಅನುಭವಿಸಬೇಕಿದೆ? ಬಾಂಡ್‌ ವಿಷಯದಲ್ಲಿ ನೃತ್ಯ ಮಾಡುತ್ತಿರುವವರು ಮತ್ತು ಅದರ ಬಗ್ಗೆ ಖುಷಿ ಪಡುತ್ತಿರುವವರು ಪಶ್ಚಾತ್ತಾಪ ಪಡಲಿದ್ದಾರೆ ಎಂದು ನಾನು ದೃಢವಾಗಿ ನಂಬುತ್ತೇನೆ” ಎಂದು ಅವರು ಖಾಸಗಿ ಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು.

“ನಮ್ಮ ಸರ್ಕಾರ ಜಾರಿಗೆ ತಂದಿರುವ ಚುನಾವಣಾ ಬಾಂಡ್ ವ್ಯವಸ್ಥೆಯಿಂದಾಗಿ ಪಕ್ಷಗಳಿಗೆ ಬಂದಿರುವ ಹಣದ ಮೂಲಗಳು ಮತ್ತು ಅದರ ಫಲಾನುಭವಿಗಳನ್ನು ಕಂಡುಹಿಡಿಯಬಹುದು. ಇಂದು ಆ ಹಣದ ಒಂದು ಜಾಡು ಲಭ್ಯವಿದ್ದರೆ ಅದಕ್ಕೆ ಬಾಂಡ್‌ಗಳ ಉಪಸ್ಥಿತಿಯೇ ಕಾರಣ” ಎಂದು ಅವರು ಹೇಳಿದರು. 2014ರ ಮೊದಲಿನ ಚುನಾವಣೆಗಳಲ್ಲಿ ಹಣದ ಮೂಲಗಳು ಮತ್ತು ಅದರ ಫಲಾನುಭವಿಗಳ ಬಗ್ಗೆ ಯಾವುದೇ ಸಂಸ್ಥೆ ನಿಖರವಾಗಿ ಹೇಳಬಹುದೇ ಎಂದು ಅವರು ಕೇಳಿದರು.

“ಯಾವುದೇ ವ್ಯವಸ್ಥೆಯು ಪರಿಪೂರ್ಣವಾಗಿಲ್ಲ. ನ್ಯೂನತೆಗಳಿರಬಹುದು; ಅದನ್ನು ಸುಧಾರಿಸಬಹುದು” ಎಂದು ಅವರು ಹೇಳಿದರು.

ಅನಾಮಧೇಯ ದಾನಿಗಳಿಂದ ಧನಸಹಾಯ ಪಡೆಯುವ ಬಾಂಡ್‌ ಪದ್ಧತಿಯನ್ನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ಬಣ್ಣಿಸಿದೆ. ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಾರ್ವಜನಿಕ ಡೊಮೇನ್‌ನಲ್ಲಿ ತರುವಂತೆ ಕೋರ್ಟ್‌ ಆದೇಶಿಸಿತ್ತು. ಇದನ್ನು ವಿರೋಧ ಪಕ್ಷಗಳು ಆಧಾರವಾಗಿಟ್ಟುಕೊಂಡು ಸರ್ಕಾರದ ಮೇಲೆ ದಾಳಿ ಮಾಡುತ್ತಿವೆ. ಕ್ರಿಮಿನಲ್ ತನಿಖೆಗಳನ್ನು ಎದುರಿಸುತ್ತಿರುವ ಅನೇಕ ಸಂಸ್ಥೆಗಳು ಕೂಡ ಈ ಬಾಂಡ್‌ಗಳ ದೊಡ್ಡ ಖರೀದಿದಾರರಾಗಿ ಹೊರಹೊಮ್ಮಿವೆ.

“ಮಾಡುವ ಪ್ರತಿಯೊಂದರಲ್ಲೂ ರಾಜಕೀಯವನ್ನು ನೋಡಬಾರದು. ನಾನು ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ತಮಿಳುನಾಡು ನಮ್ಮ ದೊಡ್ಡ ಶಕ್ತಿಗಳಲ್ಲೊಂದು” ಎಂದು ಅವರು ಪ್ರತಿಪಾದಿಸಿದರು. ಮತಗಳು ನಮ್ಮ ಮುಖ್ಯ ಕಾಳಜಿಯಾಗಿದ್ದರೆ ನಾವು ಈಶಾನ್ಯ ರಾಜ್ಯಗಳಿಗೆ ಇಷ್ಟು ಮಾಡುತ್ತಿರಲಿಲ್ಲ” ಎಂದು ಪ್ರಧಾನಿ ಹೇಳಿದರು. ಅವರ ಸರ್ಕಾರದ ಸಚಿವರು 150ಕ್ಕೂ ಹೆಚ್ಚು ಬಾರಿ ಈ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಮೋದಿ ಇತರ ಎಲ್ಲ ಪ್ರಧಾನಿಗಳಿಗಿಂತ ಹೆಚ್ಚು ಬಾರಿ ಅಲ್ಲಿಗೆ ಹೋಗಿದ್ದಾರೆ.

“ನಾನು ರಾಜಕಾರಣಿ ಎಂಬ ಕಾರಣಕ್ಕೆ ನಾನು ಚುನಾವಣೆ ಗೆಲ್ಲಲು ಮಾತ್ರ ಕೆಲಸ ಮಾಡುತ್ತೇನೆ ಎಂದಲ್ಲ. ತಮಿಳುನಾಡು ಅಪಾರ ಸಾಮರ್ಥ್ಯವನ್ನು ಹೊಂದಿದೆ, ಅದನ್ನು ವ್ಯರ್ಥ ಮಾಡಬಾರದು” ಎಂದು ಅವರು ಹೇಳಿದರು.

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಸಮಾಜದ ವಿವಿಧ ವರ್ಗಗಳನ್ನು ಸಂಪರ್ಕಿಸುತ್ತದೆ ಮತ್ತು ಜನರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ತಮಿಳುನಾಡಿನಲ್ಲಿ ಅದು ಪಡೆಯುವ ಮತಗಳು ಡಿಎಂಕೆ ವಿರೋಧಿಯಾಗಿರುವುದಿಲ್ಲ, ಆದರೆ ಬಿಜೆಪಿ ಪರವಾಗಿರುತ್ತದೆ ಎಂದು ಹೇಳಿದರು.

ಕಳೆದ 10 ವರ್ಷಗಳಿಂದ ನಾವು ಮಾಡಿರುವ ಕೆಲಸಗಳನ್ನು ಜನ ಕಣ್ಣಾರೆ ಕಂಡಿದ್ದಾರೆ. ಈ ಬಾರಿ ಬಿಜೆಪಿ-ಎನ್‌ಡಿಎ ಅಧಿಕಾರ ಎಂದು ತಮಿಳುನಾಡು ನಿರ್ಧರಿಸಿದೆ ಎಂದರು. ತಮಿಳುನಾಡಿನಲ್ಲಿ ಒಬ್ಬನೇ ಒಬ್ಬ ಪುರಸಭೆ ಅಭ್ಯರ್ಥಿ ಇಲ್ಲದಿದ್ದರೂ ಬಿಜೆಪಿ ತುಂಬಾ ಕೆಲಸ ಮಾಡಿದೆ ಎಂದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಯುವಕರನ್ನು ಆಕರ್ಷಿಸುತ್ತಿದ್ದಾರೆ. ಹಣ ಮತ್ತು ಭ್ರಷ್ಟಾಚಾರ ಅವರಿಗೆ ಪ್ರೇರಣೆಯಾಗಿದ್ದರೆ, ಅವರು ಡಿಎಂಕೆಗೆ ಸೇರಬಹುದಿತ್ತು ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.

“ವಿಕಸಿತ ಭಾರತ ಎಂದರೆ ದೇಶದ ಪ್ರತಿಯೊಂದು ಮೂಲೆಯೂ ಅಭಿವೃದ್ಧಿಯಾಗಬೇಕು. ತಮಿಳುನಾಡು ನಮ್ಮ ಕನಸಿನ ವಿಕಸಿತ ಭಾರತದ ಹಿಂದಿನ ಶಕ್ತಿಯಾಗಬಲ್ಲ ಸಾಮರ್ಥ್ಯ ಹೊಂದಿವೆ ಎಂದು ನಾನು ನಂಬುತ್ತೇನೆ” ಎಂದು ಅವರು ಹೇಳಿದರು.

ತಮಿಳು ಭಾಷೆಯ ರಾಜಕೀಯೀಕರಣದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಬಿಜೆಪಿಯು ಪ್ರಾದೇಶಿಕ ಭಾಷೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ‘ತಮಿಳು ಭಾಷೆಯ ರಾಜಕೀಯೀಕರಣದಿಂದ ತಮಿಳುನಾಡಿಗೆ ಮಾತ್ರವಲ್ಲದೆ ದೇಶಕ್ಕೂ ಹಾನಿಯಾಗಿದೆ’ ಎಂದರು.

ಇದನ್ನೂ ಓದಿ: Lok Sabha Election 2024: ಭ್ರಷ್ಟಾಚಾರಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಕ್ರಮ ನಿಶ್ಚಿತ; ವಿಪಕ್ಷಗಳ ವಿರುದ್ಧ ಮೋದಿ ಗುಡುಗು

Exit mobile version