ಹೊಸದಿಲ್ಲಿ: ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಕಾಂಗ್ರೆಸ್‌ಗಿಂತ (Congress) ಹೆಚ್ಚಿನ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು (Electoral Bonds) ಪಡೆದುಕೊಂಡಿದೆ ಎಂದು ಭಾರತೀಯ ಚುನಾವಣಾ ಆಯೋಗದ (Election commission of India) ಅಂಕಿಅಂಶಗಳು ಗುರುವಾರ ಬಹಿರಂಗಪಡಿಸಿವೆ. ಭಾರತೀಯ ಜನತಾ ಪಕ್ಷವು (BJP) ಚುನಾವಣಾ ಬಾಂಡ್‌ಗಳ ಯೋಜನೆಯ ಮೂಲಕ ಎಲ್ಲಾ ರಾಜಕೀಯ ಪಕ್ಷಗಳಿಗಿಂತ ಹೆಚ್ಚಿನ ಮೊತ್ತವನ್ನು ಪಡೆದುಕೊಂಡಿದೆ.
ಬಾಂಡ್‌ಗಳನ್ನು ಖರೀದಿಸಿದವರ ಪಟ್ಟಿಯಲ್ಲಿ ಅನೇಕ ಉನ್ನತ ಕಾರ್ಪೊರೇಟ್ ಸಂಸ್ಥೆಗಳು ಕಾಣಿಸಿಕೊಂಡಿದ್ದರೂ, ತಮಿಳುನಾಡು ಮೂಲದ ಲಾಟರಿ ಸಂಸ್ಥೆಯೊಂದು ಅತಿದೊಡ್ಡ ದಾನಿ ಎನಿಸಿದೆ. ಲಾಟರಿ ಕಿಂಗ್ ಎನಿಸಿದ ಸ್ಯಾಂಟಿಯಾಗೋ ಮಾರ್ಟಿನ್ ಎಂಬಾತ ಈ ದಾನ ನೀಡಿದ್ದಾನೆ.
ECI ಎರಡು ದಾಖಲೆಗಳನ್ನು ಅಪ್‌ಲೋಡ್ ಮಾಡಿದೆ. ಅದರ ಪ್ರಕಾರ, 1260 ಕಂಪನಿಗಳು ಮತ್ತು ವ್ಯಕ್ತಿಗಳು 2019 ಮತ್ತು 2024ರ ನಡುವೆ ₹12,155.51 ಮೌಲ್ಯದ 22217 ಬಾಂಡ್‌ಗಳನ್ನು ಖರೀದಿಸಿದ್ದಾರೆ. 23 ರಾಜಕೀಯ ಪಕ್ಷಗಳು ಈ ಬಾಂಡ್‌ಗಳನ್ನು ರಿಡೀಮ್ ಮಾಡಿಕೊಂಡಿವೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ₹6061 ಕೋಟಿ ಮೌಲ್ಯದ ಬಾಂಡ್‌ಗಳನ್ನು ರಿಡೀಮ್ ಮಾಡಿದೆ. ಅಚ್ಚರಿಯೆಂದರೆ ₹1610 ಕೋಟಿ ಮೌಲ್ಯದ ಬಾಂಡ್‌ಗಳೊಂದಿಗೆ ತೃಣಮೂಲ ಕಾಂಗ್ರೆಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ₹1422 ಕೋಟಿಯೊಂದಿಗೆ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ.
ತಮಿಳುನಾಡು ಮೂಲದ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಈ ಐದು ವರ್ಷಗಳಲ್ಲಿ ಅತಿದೊಡ್ಡ ಮೊತ್ತವನ್ನು ದೇಣಿಗೆ ನೀಡಿದೆ- ₹1368 ಕೋಟಿ. ಆಂಧ್ರಪ್ರದೇಶ ಮೂಲದ ಮೇಘಾ ಎಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ₹891 ಕೋಟಿ, ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ ₹410 ಕೋಟಿ, ವೇದಾಂತ ಲಿಮಿಟೆಡ್ 400 ಕೋಟಿ ಮತ್ತು ಹಲ್ದಿಯಾ ಎನರ್ಜಿ ಲಿಮಿಟೆಡ್ ₹377 ಕೋಟಿ ದೇಣಿಗೆ ನೀಡಿವೆ.
ಉಕ್ಕಿನ ಉದ್ಯಮಿ ಲಕ್ಷ್ಮಿ ಮಿತ್ತಲ್, ಸುನಿಲ್ ಭಾರ್ತಿ ಮಿತ್ತಲ್ ಅವರ ಭಾರ್ತಿ ಏರ್‌ಟೆಲ್, ಐಟಿಸಿ, ಮಹೀಂದ್ರಾ ಮತ್ತು ಮಹೀಂದ್ರಾ, ಡಿಎಲ್‌ಎಫ್, ಪಿವಿಆರ್, ಬಿರ್ಲಾಸ್, ಬಜಾಜ್, ಜಿಂದಾಲ್ಸ್, ಸ್ಪೈಸ್‌ಜೆಟ್, ಇಂಡಿಗೋ ಮತ್ತು ಗೋಯೆಂಕಾಸ್ ಪಕ್ಷಗಳಿಗೆ ದೇಣಿಗೆ ನೀಡಿದ ಗಮನಾರ್ಹ ಹೆಸರುಗಳಲ್ಲಿ ಸೇರಿವೆ. ಸುನಿಲ್ ಮಿತ್ತಲ್ ಅವರ ಮೂರು ಕಂಪನಿಗಳು ಸೇರಿ ಒಟ್ಟು ₹246 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿವೆ. ಲಕ್ಷ್ಮಿ ನಿವಾಸ್ ಮಿತ್ತಲ್ ವೈಯಕ್ತಿಕವಾಗಿ ₹35 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದ್ದಾರೆ.
ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಕ್ಕೆ ನೀಡಿದ ದೇಣಿಗೆಗಳನ್ನು ʼಅಧ್ಯಕ್ಷರು, ಅಖಿಲ ಭಾರತ ಕಾಂಗ್ರೆಸ್ ಸಮಿತಿ’ ಮತ್ತು ʼಅಧ್ಯಕ್ಷ, ಸಮಾಜವಾದಿ ಪಕ್ಷ’ ಹೆಸರಿನಲ್ಲಿ ನೀಡಲಾಗಿದೆ. 22,217 ಎಲೆಕ್ಟೋರಲ್ ಬಾಂಡ್‌ಗಳಲ್ಲಿ 22030 ಅನ್ನು ಏಪ್ರಿಲ್ 1, 2019 ಮತ್ತು ಫೆಬ್ರವರಿ 15ರ ನಡುವೆ ರಿಡೀಮ್ ಮಾಡಲಾಗಿದೆ ಎಂದು ಎಸ್‌ಬಿಐ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.
ಚುನಾವಣಾ ಬಾಂಡ್‌ಗಳ ಖರೀದಿದಾರರಲ್ಲಿ ಸ್ಪೈಸ್‌ಜೆಟ್, ಇಂಡಿಗೋ, ಗ್ರಾಸಿಮ್ ಇಂಡಸ್ಟ್ರೀಸ್, ಮೇಘಾ ಇಂಜಿನಿಯರಿಂಗ್, ಪಿರಮಲ್ ಎಂಟರ್‌ಪ್ರೈಸಸ್, ಟೊರೆಂಟ್ ಪವರ್, ಭಾರ್ತಿ ಏರ್‌ಟೆಲ್, ಡಿಎಲ್‌ಎಫ್ ಕಮರ್ಷಿಯಲ್ ಡೆವಲಪರ್ಸ್, ವೇದಾಂತ ಲಿಮಿಟೆಡ್, ಅಪೊಲೊ ಟೈರ್ಸ್, ಎಡೆಲ್‌ವೀಸ್, ಪಿವಿಆರ್, ಕೆವೆಂಟರ್, ಸನ್‌ಪುನ್, ಸನ್‌ಪುನ್, ಸುಲಾ, ಸುಲಾ ವರ್ಧಮಾನ್ ಟೆಕ್ಸ್‌ಟೈಲ್ಸ್, ಜಿಂದಾಲ್ ಗ್ರೂಪ್, ಫಿಲಿಪ್ಸ್ ಕಾರ್ಬನ್ ಬ್ಲಾಕ್ ಲಿಮಿಟೆಡ್, ಸಿಯೆಟ್ ಟೈರ್‌ಗಳು, ಡಾ ರೆಡ್ಡೀಸ್ ಲ್ಯಾಬೋರೇಟರೀಸ್, ಐಟಿಸಿ, ಕೇಪೀ ಎಂಟರ್‌ಪ್ರೈಸಸ್, ಸಿಪ್ಲಾ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಪ್ರಮುಖವಾಗಿವೆ.
ಯೋಜನೆಯ ಲಾಭ ಪಡೆದ ರಾಜಕೀಯ ಪಕ್ಷಗಳೆಂದರೆ- ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ, ಬಿಆರ್‌ಎಸ್, ಶಿವಸೇನೆ, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್, ಡಿಎಂಕೆ, ಜೆಡಿ-ಎಸ್, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್, ಜೆಡಿಯು, ಆರ್‌ಜೆಡಿ, ಎಎಪಿ, ಸಮಾಜವಾದಿ ಪಕ್ಷ, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಬಿಜೆಡಿ, ಗೋವಾ ಫಾರ್ವರ್ಡ್ ಪಾರ್ಟಿ, ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ, ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ, ಜೆಎಂಎಂ, ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಮತ್ತು ಜನ ಸೇನಾ ಪಕ್ಷ.
ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದ ವ್ಯಕ್ತಿಗಳಲ್ಲಿ ಪ್ರಮುಖರಾದವರು ಕಿರಣ್ ಮಜುಂದಾರ್ ಶಾ, ವರುಣ್ ಗುಪ್ತಾ, ಬಿ ಕೆ ಗೋಯೆಂಕಾ, ಜೈನೇಂದ್ರ ಶಾ ಮತ್ತು ಮೋನಿಕಾ ಎಂಬ ಹೆಸರಿನ ವ್ಯಕ್ತಿ. ಬಜಾಜ್ ಆಟೋ ₹ 18 ಕೋಟಿ, ಬಜಾಜ್ ಫೈನಾನ್ಸ್ ₹ 20 ಕೋಟಿ, ಮೂರು ಇಂಡಿಗೋ ಸಂಸ್ಥೆಗಳು ₹ 36 ಕೋಟಿ, ಸ್ಪೈಸ್‌ಜೆಟ್ ₹ 65 ಲಕ್ಷ ಮತ್ತು ಇಂಡಿಗೋದ ರಾಹುಲ್ ಭಾಟಿಯಾ ₹ 20 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದ್ದಾರೆ.
ಇದನ್ನೂ ಓದಿ: Electoral Bonds: ₹1368 ಕೋಟಿ ದೇಣಿಗೆ ನೀಡಿದ ‘ಲಾಟರಿ ಕಿಂಗ್’ ಯಾರು?