Site icon Vistara News

Electoral Bonds: ₹1368 ಕೋಟಿ ದೇಣಿಗೆ ನೀಡಿದ ‘ಲಾಟರಿ ಕಿಂಗ್’ ಯಾರು?

santiago martin lottery king

ಹೊಸದಿಲ್ಲಿ: ಚುನಾವಣಾ ಬಾಂಡ್‌ಗಳನ್ನು (Electoral Bonds) ಖರೀದಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಸಂಸ್ಥೆ- ವ್ಯಕ್ತಿಗಳ ಪಟ್ಟಿಯನ್ನು ಚುನಾವಣಾ ಆಯೋಗ ಗುರುವಾರ ಬಿಡುಗಡೆ ಮಾಡಿದೆ. ಇದರಲ್ಲಿ ₹1368 ಕೋಟಿಯಷ್ಟು ಭಾರಿ ಮೊತ್ತವನ್ನು ದೇಣಿಗೆ ನೀಡಿದ, “ಲಾಟರಿ ಕಿಂಗ್” (lottery king) ಎಂದು ಕರೆಯಲ್ಪಡುವ ವ್ಯಕ್ತಿಯ ಬಗ್ಗೆ ಈಗ ಕುತೂಹಲ ಮೂಡಿದೆ.

ಇವರ ಹೆಸರು ಸ್ಯಾಂಟಿಯಾಗೊ ಮಾರ್ಟಿನ್. ಇವರು ನಡೆಸುತ್ತಿರುವ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿಯಿಂದ ಹೆಚ್ಚಿನ ಮೊತ್ತದ ದೇಣಿಗೆಗಳನ್ನು ನೀಡಲಾಗಿದೆ. ಈತನ ಮೇಲೆ ಇಡಿ ವಂಚನೆ ಕೇಸು ದಾಖಲಿಸಿ ತನಿಖೆಯನ್ನೂ ನಡೆಸುತ್ತಿದೆ.

ಸ್ಯಾಂಟಿಯಾಗೊ ಮಾರ್ಟಿನ್ ಯಾರು?

ಸ್ಯಾಂಟಿಯಾಗೊ ಮಾರ್ಟಿನ್ ಮ್ಯಾನ್ಮಾರ್‌ನ ಯಾಂಗೋನ್‌ನಲ್ಲಿ ಕಾರ್ಮಿಕನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಎಂದು ಅವರ ಚಾರಿಟೇಬಲ್‌ ಜಾಲತಾಣ ಹೇಳುತ್ತದೆ. 1988ರಲ್ಲಿ ಅವರು ಭಾರತಕ್ಕೆ ಬಂದರು ಮತ್ತು ತಮಿಳುನಾಡಿನಲ್ಲಿ ಲಾಟರಿ ವ್ಯಾಪಾರವನ್ನು ಪ್ರಾರಂಭಿಸಿದರು. ಈಶಾನ್ಯ ಭಾರತಕ್ಕೆ ತೆರಳುವ ಮೊದಲು ಕರ್ನಾಟಕ ಮತ್ತು ಕೇರಳದಲ್ಲಿ ವ್ಯವಹಾರವನ್ನು ವಿಸ್ತರಿಸಿದರು.

ಈಶಾನ್ಯ ಭಾರತದಲ್ಲಿ ಸರ್ಕಾರಿ ಲಾಟರಿ ಯೋಜನೆಗಳನ್ನು ನಿರ್ವಹಿಸುವ ಮೂಲಕ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದರು. ನಂತರ ಭೂತಾನ್ ಮತ್ತು ನೇಪಾಳದಲ್ಲಿ ಘಟಕಗಳನ್ನು ಪ್ರಾರಂಭಿಸುವ ಮೂಲಕ ತಮ್ಮ ವ್ಯವಹಾರವನ್ನು ಕಡಲಾಚೆಗೆ ಕೊಂಡೊಯ್ದರು. ನಂತರ ಅವರು ನಿರ್ಮಾಣ, ರಿಯಲ್ ಎಸ್ಟೇಟ್, ಜವಳಿ ಮತ್ತು ಆತಿಥ್ಯ ಸೇರಿದಂತೆ ಇತರ ವ್ಯವಹಾರಗಳಲ್ಲಿ ತೊಡಗಿಕೊಂಡರು..

“ಅವರು ಆಲ್ ಇಂಡಿಯಾ ಫೆಡರೇಶನ್ ಆಫ್ ಲಾಟರಿ ಟ್ರೇಡ್ ಮತ್ತು ಅಲೈಡ್ ಇಂಡಸ್ಟ್ರೀಸ್‌ನ ಅಧ್ಯಕ್ಷರೂ ಆಗಿದ್ದಾರೆ. ಇದು ಭಾರತದಲ್ಲಿ ಲಾಟರಿ ವ್ಯಾಪಾರದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ತೊಡಗಿರುವ ಸಂಸ್ಥೆ. ಅವರ ಉದ್ಯಮ, ಫ್ಯೂಚರ್ ಗೇಮಿಂಗ್ ಸೊಲ್ಯೂಷನ್ಸ್ ಇಂಡಿಯಾ ಪ್ರೈ. ಪ್ರತಿಷ್ಠಿತ ವಿಶ್ವ ಲಾಟರಿ ಅಸೋಸಿಯೇಷನ್‌ನ ಆನ್‌ಲೈನ್ ಗೇಮಿಂಗ್ ಮತ್ತು ಕ್ಯಾಸಿನೊಗಳು ಮತ್ತು ಸ್ಪೋರ್ಟ್ಸ್ ಬೆಟ್ಟಿಂಗ್ ಕ್ಷೇತ್ರಕ್ಕೆ ವಿಸ್ತರಿಸುತ್ತಿದೆ” ಎಂದು ವೆಬ್‌ಸೈಟ್ ಹೇಳಿಕೊಂಡಿದೆ.

ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ 2019 ಮತ್ತು 2024ರ ನಡುವೆ ರಾಜಕೀಯ ಪಕ್ಷಗಳಿಗೆ ₹1368 ಕೋಟಿ ದೇಣಿಗೆ ನೀಡಿದೆ. ಯಾವ ಪಕ್ಷಗಳಿಗೆ ನೀಡಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ಜಾರಿ ನಿರ್ದೇಶನಾಲಯವು ಈತನ ಕಂಪನಿಯ ವಿರುದ್ಧ, 2019ರಿಂದ ಪಿಎಂಎಲ್‌ಎ ಕಾನೂನನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ತನಿಖೆ ನಡೆಸುತ್ತಿದೆ. ಇಡಿಯವರು ಮೇ 2023ರಲ್ಲಿ ಕೊಯಮತ್ತೂರು ಮತ್ತು ಚೆನ್ನೈನಲ್ಲಿ ಕಂಪನಿ ಮೇಲೆ ದಾಳಿ ನಡೆಸಿದ್ದರು. ಸಿಕ್ಕಿಂನ ಕಂಪನಿಯು ಕೇರಳದಲ್ಲಿ ಲಾಟರಿಗಳನ್ನು ಮಾರಾಟ ಮಾಡಿದೆ ಎಂದು ಆರೋಪಿಸಿ ಕೇಂದ್ರೀಯ ತನಿಖಾ ದಳದ ಚಾರ್ಜ್ ಶೀಟ್ ಅನ್ನು ಆಧರಿಸಿ ಇಡಿ ತನಿಖೆಯನ್ನು ನಡೆಸಲಾಗಿದೆ.

ಏಪ್ರಿಲ್ 2009ರಿಂದ ಆಗಸ್ಟ್ 2010ರವರೆಗೆ ಬಹುಮಾನ-ವಿಜೇತ ಟಿಕೆಟ್‌ಗಳ ಕ್ಲೈಮ್ ಅನ್ನು ಹೆಚ್ಚಿಸಿದ ಕಾರಣದಿಂದ ಸಿಕ್ಕಿಂಗೆ ₹910 ಕೋಟಿ ನಷ್ಟವನ್ನು ಮಾರ್ಟಿನ್ ಮತ್ತು ಅವರ ಕಂಪನಿಗಳು ತಂದೊಡ್ಡಿವೆ ಎಂದು ಇಡಿ ಆರೋಪಿಸಿದೆ.

SBI ಪಟ್ಟಿಯಲ್ಲಿರುವ ಇತರ ದಾನಿಗಳು

ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ₹966 ಕೋಟಿ ದೇಣಿಗೆ ನೀಡಿದೆ. ಹೈದರಾಬಾದ್ ಮೂಲದ ಕಂಪನಿಯು ಪ್ರಸ್ತುತ ಹಲವಾರು ಮೂಲಸೌಕರ್ಯ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಚುನಾವಣಾ ಸಮಿತಿಯು ಅಪ್‌ಲೋಡ್ ಮಾಡಿದ ಮಾಹಿತಿಯ ಪ್ರಕಾರ, ಚುನಾವಣಾ ಬಾಂಡ್‌ಗಳ ಖರೀದಿದಾರರಲ್ಲಿ ಸ್ಪೈಸ್‌ಜೆಟ್, ಇಂಡಿಗೋ, ಗ್ರಾಸಿಮ್ ಇಂಡಸ್ಟ್ರೀಸ್, ಮೇಘಾ ಎಂಜಿನಿಯರಿಂಗ್, ಪಿರಮಲ್ ಎಂಟರ್‌ಪ್ರೈಸಸ್, ಟೊರೆಂಟ್ ಪವರ್, ಭಾರ್ತಿ ಏರ್‌ಟೆಲ್, ಡಿಎಲ್‌ಎಫ್ ಕಮರ್ಷಿಯಲ್ ಡೆವಲಪರ್ಸ್, ವೇದಾಂತ ಲಿಮಿಟೆಡ್, ಅಪೊಲೊ ಟೈರ್ಸ್, ಎಡೆಲ್‌ವೀಸ್, ಪಿವಿಆರ್, ಕೆವೆಂಟರ್, ಸುಲಾ ವೈನ್ಸ್, ವೆಲ್ಸ್‌ಪನ್, ಸನ್ ಫಾರ್ಮಾ, ವರ್ಧಮಾನ್ ಟೆಕ್ಸ್‌ಟೈಲ್ಸ್, ಜಿಂದಾಲ್ ಗ್ರೂಪ್, ಫಿಲಿಪ್ಸ್ ಕಾರ್ಬನ್ ಬ್ಲಾಕ್ ಲಿಮಿಟೆಡ್, ಸಿಯೆಟ್ ಟೈರ್ಸ್, ಡಾ ರೆಡ್ಡೀಸ್ ಲ್ಯಾಬೋರೇಟರೀಸ್, ಐಟಿಸಿ, ಕೇಪೀ ಎಂಟರ್‌ಪ್ರೈಸಸ್, ಸಿಪ್ಲಾ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಇವೆ.

ಇದನ್ನೂ ಓದಿ: Electoral Bond: ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದವರ ವಿವರ ಬಹಿರಂಗ; ಇವರೇ ನೋಡಿ ಟಾಪ್‌ 10 ದಾನಿಗಳು

Exit mobile version