Site icon Vistara News

Electrocution: ಡಿಜೆ ವಾಹನಕ್ಕೆ ಹೈಟೆನ್ಷನ್‌ ವಿದ್ಯುತ್‌ ತಂತಿ ತಗುಲಿ ಆಘಾತ; 8 ಮಂದಿ ಭಕ್ತರ ಸಾವು

Electrocution

ಪಾಟ್ನಾ: ಬಿಹಾರದ ಹಾಜಿಪುರ ಜಿಲ್ಲೆಯ ಸುಲ್ತಾನ್‌ಪುರ ಗ್ರಾಮದಲ್ಲಿ ಸೋಮವಾರ ಮುಂಜಾನೆ ಡಿಜೆ ವಾಹನಕ್ಕೆ ವಿದ್ಯುತ್‌ ತಂತಿ ತಗುಲಿ ವಿದ್ಯುದಾಘಾತದಿಂದ (Electrocution) ಸುಮಾರು 8 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಹರಿಹರನಾಥ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರ ಮೆರವಣಿಗೆ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಮೃತರನ್ನು ಕನ್ವರ್‌ ಯಾತ್ರಾರ್ಥಿಗಳು ಎಂದು ಗುರುತಿಸಲಾಗಿದೆ.

ಮೃತರು ಹಾಜಿಪುರದ ಕೈಗಾರಿಕಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುವ ಸುಲ್ತಾನ್‌ಪುರದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಹೇಗಾಯ್ತು ದುರಂತ?

ಶ್ರಾವಣ ಮಾಸದ ಹಿನ್ನಲೆಯಲ್ಲಿ ಈ ಗ್ರಾಮದ ಯುವಕರು ಪ್ರತಿ ಸೋಮವಾರ ಹರಿಹರನಾಥ ದೇವಸ್ಥಾನಕ್ಕೆ ಜಲಾಭಿಷೇಕ ಮಾಡಲು ಮೆರವಣಿಗೆ ಮೂಲಕ ತೆರಳುವುದು ವಾಡಿಕೆ. ಅದರಂತೆ ಆಗಸ್ಟ್‌ 5ರಂದೂ (ಇಂದು) ಈ ಯುವಕರ ತಂಡ ಟ್ರ್ಯಾಕ್ಟರ್‌ ಟ್ರಾಲಿಗೆ ದೊಡ್ಡ ದೊಡ್ಡ ಸೌಂಡ್‌ ಬಾಕ್ಸ್‌ ಅಳವಡಿಸಿ ಡಿಜೆ ವ್ಯವಸ್ಥೆ ಮಾಡಿದ್ದರು. ಈ ಟ್ರ್ಯಾಕ್ಟರ್‌ ಚಲಿಸುವಾಗ ರಸ್ತೆಯಲ್ಲಿದ್ದ ಹೈಟೆನ್ಷನ್‌ ತಂತಿಗೆ ತಗುಲಿ ಅಪಘಡ ಸಂಭವಿಸಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ʼʼವೈಶಾಲಿ ಜಿಲ್ಲೆಯ ಹಾಜಿಪುರ-ಜಂಡಾಹಾ ರಸ್ತೆಯ ನೈಪರ್ ಗೇಟ್ ಬಳಿಯ ಚೌಹರ್ಮಲ್ ಸ್ಥಳದಲ್ಲಿ ಈ ಅಪಘಾತ ಸಂಭವಿಸಿದೆ. ಮಾಹಿತಿ ಪಡೆದ ಪೊಲೀಸರು ಗಾಯಾಳುಗಳನ್ನು ಹಾಜಿಪುರ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ. ಹಾಜಿಪುರದ ಪಹೇಲಾಜಾ ಘಾಟ್‌ನಿಂದ ಜಲಾಭಿಷೇಕಕ್ಕೆ ಅಗತ್ಯವಾದ ನೀರು ಸಂಗ್ರಹಿಸಿ ಬಾಬಾ ಹರಿಹರನಾಥ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

“ಭಕ್ತರು ಬಾಬಾ ಧಾಮ್‌ಗೆ ತೆರಳುತ್ತಿದ್ದ ಡಿಜೆ ಟ್ರಾಲಿ 11,000 ವೋಲ್ಟ್ ತಂತಿಯ ಸಂಪರ್ಕಕ್ಕೆ ಬಂದ ಕಾರಣ ಶಾಕ್‌ ಹೊಡೆದು ಎಂಟು ಜನರು ಸಾವನ್ನಪ್ಪಿದ್ದಾರೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸ್ಥಳೀಯರು ವಿದ್ಯುತ್‌ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿಸದ್ದಾರೆ. ಇಷ್ಟು ದೊಡ್ಡ ಆಘಾತ ನಡೆದರೂ ತಕ್ಷಣ ಸ್ಪಂದಿಸಲಿಲ್ಲ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಆಗಸ್ಟ್ 1ರಂದು ಜಾರ್ಖಂಡ್‌ನಲ್ಲಿಯೂ ಇದೇ ರೀತಿಯ ದುರಂತ ಸಂಭವಿಸಿತ್ತು. ಲತೇಹರ್ ಜಿಲ್ಲೆಯಲ್ಲಿ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಐದು ಮಂದಿ ಕನ್ವರ್‌ ಯಾತ್ರಾರ್ಥಿಗಳು ಮೃತಪಟ್ಟಿದ್ದರು. ಮುಂಜಾನೆ 3 ಗಂಟೆ ಸುಮಾರಿಗೆ ಬಾಲುಮಠ್ ಪೊಲೀಸ್ ಠಾಣೆ ಪ್ರದೇಶದ ತಾಮ್ ತಾಮ್ ತೋಲಾ ಬಳಿ ಈ ಘಟನೆ ನಡೆದಿದ್ದು, ದಿಯೋಘರ್‌ನ ಬಾಬಾ ಬೈದ್ಯನಾಥ ದೇವಸ್ಥಾನದಿಂದ ಹಿಂದಿರುಗುತ್ತಿದ್ದಾಗ ಭಕ್ತರಿದ್ದ ವಾಹನವು ಕಂಬಕ್ಕೆ ಡಿಕ್ಕಿ ಹೊಡೆದಿತ್ತು.

ದೇಗುಲದ ಗೋಡೆ ಕುಸಿದು 9 ಮಕ್ಕಳ ದಾರುಣ ಸಾವು

ಭೋಪಾಲ್‌: ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಗೋಡೆ ಕುಸಿದು 9 ಮಕ್ಕಳು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಶಾಹಪುರದ ಹರ್ದೌಲ್ ಬಾಬಾ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಈ ದಾರುಣ ಘಟನೆ ನಡೆದಿತ್ತು.

ಇದನ್ನೂ ಓದಿ: Waqf Board: ಜಾಮಾ ಮಸೀದಿ ಸೇರಿ ವಕ್ಫ್‌ ಬೋರ್ಡ್‌ಗೆ ಕಾಂಗ್ರೆಸ್‌ ನೀಡಿದ 123 ಆಸ್ತಿ ಸ್ವಾಧೀನಕ್ಕೆ ಕೇಂದ್ರ ಸರ್ಕಾರ ನಿರ್ಧಾರ!

Exit mobile version