Site icon Vistara News

Electronic voting machine: ಎಲೆಕ್ಟ್ರಾನಿಕ್ ಮತಯಂತ್ರ ಹೇಗೆ ಕೆಲಸ ಮಾಡುತ್ತೆ ಗೊತ್ತಾ ?

Electronic voting machine

ಬೆಂಗಳೂರು: ಲೋಕಸಭಾ ಚುನಾವಣೆ (loksabha election) ಸಂದರ್ಭದಲ್ಲಿ ಈ ಬಾರಿ ಮತ್ತೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳ (Electronic voting machine) ಬಗ್ಗೆ ಚರ್ಚೆ ಶುರುವಾಗಿದೆ. ಚುನಾವಣೆ ಅಧಿಕಾರಿಗಳು ಹೇಳಿದಂತೆ ನಾವು ಹೋಗಿ ಮತ ಚಲಾಯಿಸಿ ಬರುತ್ತೇವೆ. ಆದರೆ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಹೆಚ್ಚಿನವರಿಗೆ ಇನ್ನೂ ಗೊತ್ತೇ ಇಲ್ಲ. ಭಾರತದಲ್ಲಿ (india) ಮೊದಲ ಬಾರಿಗೆ 1998ರ ಚುನಾವಣೆಯಲ್ಲಿ ಪರಿಚಯಿಸಲ್ಪಟ್ಟ ಈ ಮತಯಂತ್ರದ ಬಳಕೆ ದೇಶದಲ್ಲಿ ಪ್ರಾರಂಭವಾಗಿ 26 ವರ್ಷಗಳಾದರೂ ಇದರ ಕುರಿತು ಗೊಂದಲಗಳೂ ಇನ್ನೂ ಸಾಕಷ್ಟು ಮಂದಿಯಲ್ಲಿದೆ.

ಮತ ಚಲಾಯಿಸಬಹುದಾದ ಪ್ರತಿ ಅಭ್ಯರ್ಥಿಗೆ ಬಟನ್‌ಗಳನ್ನು ಹೊಂದಿರುವ ವೋಟಿಂಗ್ ಗ್ಯಾಜೆಟ್‌ಗಳೇ ಇವಿಎಂಗಳಾಗಿವೆ (EVM). ಇದರಲ್ಲಿ ಎರಡು ಭಾಗಗಳಿವೆ. ಒಂದು ನಿಯಂತ್ರಣ ಘಟಕ ಹಾಗೂ ಮತ್ತೊಂದು ಮತಯಂತ್ರ ಘಟಕ. ಇವುಗಳನ್ನು ಪರಸ್ಪರ ಕೇಬಲ್ ಮೂಲಕ ಸಂಪರ್ಕಿಸಲಾಗಿರುತ್ತದೆ.

ನಿಯಂತ್ರಣ ಘಟಕವನ್ನು ಮತದಾನದ ಉಸ್ತುವಾರಿ ಹೊಂದಿರುವ ವ್ಯಕ್ತಿ ನಿಯಂತ್ರಿಸುತ್ತಾನೆ ಹಾಗೂ ಮತದಾನ ಘಟಕವನ್ನು ಮತದಾರರು ತಮ್ಮ ಮತ ಚಲಾಯಿಸಲು ಬಳಕೆಗೆ ನೀಡಲಾಗುತ್ತದೆ.

ಇದನ್ನೂ ಓದಿ: Lok Sabha Election 2024: ಚುನಾವಣೆ ಅಕ್ರಮ ತಡೆಯಲು ವೆಬ್‌ ಕಾಸ್ಟಿಂಗ್‌, ಡಿಸಿಯಿಂದಲೇ ನೇರ ವೀಕ್ಷಣೆ

ಇವಿಎಂ ಬಂದ ಬಳಿಕ ಮತಗಟ್ಟೆಗಳಲ್ಲಿ ಕಾಗದದ ಬಳಕೆ ಕಡಿಮೆಯಾಗಿದೆ. ಆದ್ದರಿಂದ ಮತಗಟ್ಟೆ ಅಧಿಕಾರಿಗಳು ಯಾವುದೇ ಕಾಗದದ ಮತಪತ್ರವನ್ನು ನೀಡುವುದಿಲ್ಲ. ಬದಲಿಗೆ ಅವರು ಮತದಾನವನ್ನು ಪ್ರಾರಂಭಿಸಲು ಎವಿಎಂ ನಲ್ಲಿ ಅವರು ಬಟನ್ ಒತ್ತುತ್ತಾರೆ. ಬಳಿಕ ನಿರ್ಧಿಷ್ಟ ಸ್ಥಳದಲ್ಲಿ ಪರದೆಯ ಮೇಲೆ ಕಾಣುವ ಮತದಾರ ಇಷ್ಟ ಪಡುವ ವ್ಯಕ್ತಿಯ ಎದುರಲ್ಲಿ ಇರುವ ಬಟನ್ ಒತ್ತುವ ಮೂಲಕ ಸುಲಭವಾಗಿ ಮತ ಚಲಾಯಿಸಬಹುದು.

ಮತದಾನ ಪ್ರಕ್ರಿಯೆ ಹೇಗೆ ?

ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ನಲ್ಲಿ ನಿಯಂತ್ರಣ ಘಟಕ ಮತ್ತು ಮತದಾನ ಘಟಕವಿದ್ದು, ಐದು ಮೀಟರ್ ಕೇಬಲ್ ಮೂಲಕ ನಿಯಂತ್ರಣ ಘಟಕದೊಂದಿಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ. ನಿಯಂತ್ರಣ ಘಟಕ ಪೋಲಿಂಗ್ ಆಫೀಸರ್ ಬಳಿ ಇಡಲಾಗುತ್ತದೆ. ಮತದಾನ ಘಟಕ ಮತದಾನ ವಿಭಾಗದೊಳಗೆ ಇರಿಸಲಾಗುತ್ತದೆ. ಮತಗಟ್ಟೆ ಅಧಿಕಾರಿಯು ನಿಯಂತ್ರಣ ಘಟಕದಲ್ಲಿರುವ ‘ಬ್ಯಾಲೆಟ್’ ಬಟನ್ ಒತ್ತಿದ ಬಳಿಕ ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾಯಿಸಬಹುದು.

ಇವಿಎಂ ವಿನ್ಯಾಸ ಯಾರು ಮಾಡಿದ್ದು?

ಇವಿಎಂಗಳನ್ನು ಚುನಾವಣಾ ಆಯೋಗವು ಎರಡು ಸಾರ್ವಜನಿಕ ವಲಯದ ಸಂಸ್ಥೆಗಳಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಬೆಂಗಳೂರು (ರಕ್ಷಣಾ ಸಚಿವಾಲಯ) ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಹೈದರಾಬಾದ್ ನ (ಪರಮಾಣು ಶಕ್ತಿ ಇಲಾಖೆ) ಸಹಯೋಗದೊಂದಿಗೆ ವಿನ್ಯಾಸಗೊಳಿಸಿದೆ.

ವಿದ್ಯುತ್ ಇಲ್ಲದ ಕಾರ್ಯನಿರ್ವಹಿಸುತ್ತದೆಯೇ ?

ಹೌದು ಇವಿಎಂಗಳಿಗೆ ವಿದ್ಯುತ್ ಅಗತ್ಯವಿಲ್ಲ. ಅವು ಸಾಮಾನ್ಯ 7.5 ವೋಲ್ಟ್ ಕ್ಷಾರೀಯ ಪವರ್ ಪ್ಯಾಕ್‌ನಲ್ಲಿ ಚಾಲನೆಯಲ್ಲಿರುತ್ತದೆ. ಆದ್ದರಿಂದ, ವಿದ್ಯುತ್ ಸಂಪರ್ಕವಿಲ್ಲದ ಪ್ರದೇಶಗಳಲ್ಲಿಯೂ ಇದು ಕಾರ್ಯನಿರ್ವಹಿಸುತ್ತದೆ.

ಗರಿಷ್ಠ ಎಷ್ಟು ಮತ ಚಲಾಯಿಸಬಹುದು?

2000-05 ಮಾದರಿಯ ಹಳೆಯ ಆವೃತ್ತಿಗಳಲ್ಲಿ ಗರಿಷ್ಠ 3,840 ಮತ್ತು 2006ರ ಅನಂತರದ ಹೊಸ ಆವೃತ್ತಿಯಗಳಲ್ಲಿ 2000 ಮತಗಳನ್ನು ಚಲಾಯಿಸಬಹುದು.


ಗರಿಷ್ಠ ಎಷ್ಟು ಅಭ್ಯರ್ಥಿಗೆ ?

ಒಂದು ಇವಿಎಂ ಯಂತ್ರದಲ್ಲಿ ಗರಿಷ್ಠ 64 ಅಭ್ಯರ್ಥಿಗಳಿಗೆ (ನೋಟಾ ಸೇರಿದಂತೆ) ಮತ ಚಲಾಯಿಸಲು ಅವಕಾಶವಿದೆ. ಬ್ಯಾಲೆಟ್ ಯೂನಿಟ್‌ನಲ್ಲಿ 16. ಒಟ್ಟು ಅಭ್ಯರ್ಥಿಗಳ ಸಂಖ್ಯೆ 16 ಮೀರಿದರೆ ಎರಡು, 32 ಮೀರಿದರೆ ಮೂರು ಹೀಗೆ ಒಟ್ಟು ನಾಲ್ಕು ಮತಯಂತ್ರವನ್ನು ಮೊದಲ ಮತಯಂತ್ರಕ್ಕೆ ಸರಣಿಯಾಗಿ ಜೋಡಿಸಬಹುದು. 2013ರ ಬಳಿಕ ತಯಾರಿಸಲಾದ ಇವಿಎಂಗಳಲ್ಲಿ 24 ಬ್ಯಾಲೆಟ್ ಯೂನಿಟ್‌ಗಳನ್ನು ಗರಿಷ್ಠ 384 ಅಭ್ಯರ್ಥಿಗಳಿಗೆ (ನೋಟಾ ಸೇರಿದಂತೆ) ಒಂದು ನಿಯಂತ್ರಣ ಘಟಕಕ್ಕೆ ಜೋಡಿಸಬಹುದಾಗಿದೆ.

ಇವಿಎಂ ಬೆಲೆ ಎಷ್ಟು?

ಪ್ರತಿ ಘಟಕಕ್ಕೆ 1989-90 ಮಾದರಿ ಇವಿಎಂ 5,500 ರೂ., 2000-05 ಮಾದರಿ 8,670 ರೂ., 2006ರ ನಂತರದ ಮಾದರಿಗೆ 8,670 ರೂ. ಇದು ಅಬಕಾರಿ ಸುಂಕ, ಮಾರಾಟ ತೆರಿಗೆ ಮತ್ತು ಸಾರಿಗೆ ಇತ್ಯಾದಿಗಳನ್ನು ಹೊರತುಪಡಿಸಿದೆ.

ಫಲಿತಾಂಶ ಎಷ್ಟು ವರ್ಷ ಉಳಿಯುತ್ತದೆ ?

ಇವಿಎಂ ನ ನಿಯಂತ್ರಣ ಘಟಕವು ಫಲಿತಾಂಶವನ್ನು 10 ಮತ್ತು ಅದಕ್ಕಿಂತಲೂ ಹೆಚ್ಚು ವರ್ಷಗಳವರೆಗೆ ಉಳಿಸಿಕೊಳ್ಳಬಹುದು.

ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸಬಹುದೇ ?

ಸಾಧ್ಯವಿಲ್ಲ. ಒಮ್ಮೆ ನಿರ್ಧಿಷ್ಟ ಅಭ್ಯರ್ಥಿಗೆ ಗುಂಡಿಯನ್ನು ಒತ್ತಿದರೆ ಆ ಅಭ್ಯರ್ಥಿಗೆ ಮತ ದಾಖಲಾಗುತ್ತದೆ ಮತ್ತು ಯಂತ್ರವು ಲಾಕ್ ಆಗುತ್ತದೆ.

ಸರಿ ಇದೆ ಎಂದು ಪರಿಶೀಲಿಸುವುದು ಹೇಗೆ?

ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರು ಮತ್ತು ಚಿಹ್ನೆಯ ಪಕ್ಕದಲ್ಲಿರುವ ಬ್ಯಾಲೆಟ್ ಯೂನಿಟ್‌ನಲ್ಲಿ ‘ಅಭ್ಯರ್ಥಿ’ ಬಟನ್ (ನೀಲಿ ಬಟನ್) ಒತ್ತಿದಾಗ ಮತ ದಾಖಲಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಅಭ್ಯರ್ಥಿಯ ಹೆಸರು ಮತ್ತು ಚಿಹ್ನೆಯ ಪಕ್ಕದಲ್ಲಿ ಬೀಪ್ ಧ್ವನಿಯೊಂದಿಗೆಸಣ್ಣ ಕೆಂಪು ದೀಪ ಬೆಳಗುತ್ತದೆ. ಇದು ಮತಯಂತ್ರ ಸರಿ ಇದೆ ಎಂಬುದನ್ನು ಖಚಿತಪಡಿಸುತ್ತದೆ.

ಒಟ್ಟು ಮತಗಳ ಸಂಖ್ಯೆ ತಿಳಿಯುವುದು ಹೇಗೆ?

ಇವಿಎಂಗಳಲ್ಲಿರುವ ‘ಒಟ್ಟು’ ಬಟನ್ ಗುಂಡಿಯನ್ನು ಒತ್ತಿ ತಿಳಿದುಕೊಳ್ಳಬಹುದು. ಇದು ಅಭ್ಯರ್ಥಿವಾರು ಲೆಕ್ಕವನ್ನು ಸೂಚಿಸುವುದಿಲ್ಲ.

ಮತದಾನ ಮುಕ್ತಾಯ ಹೇಗೆ ?

ಕೊನೆಯ ಮತದಾರರು ಮತ ಚಲಾಯಿಸಿದ ಬಳಿಕ ನಿಯಂತ್ರಣ ಘಟಕದ ಉಸ್ತುವಾರಿ ಅಧಿಕಾರಿ ‘ಮುಚ್ಚು’ ಬಟನ್ ಅನ್ನು ಒತ್ತುತ್ತಾರೆ. ಇದರ ಬಳಿಕ ಇವಿಎಂ ಯಾವುದೇ ಮತಗಳನ್ನು ಸ್ವೀಕರಿಸುವುದಿಲ್ಲ.

ಮೊದಲು ಬಳಸಿದ್ದು ಯಾವಾಗ ?

1982ರ ಮೇ ತಿಂಗಳಲ್ಲಿ ಕೇರಳ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ A17 ಇವಿಎಂಗಳನ್ನು ಮೊದಲು ಪರೂರ್ ವಿಧಾನಸಭಾ ಕ್ಷೇತ್ರದ 50 ಮತಗಟ್ಟೆಗಳಲ್ಲಿ ಬಳಸಲಾಯಿತು.

ಯಾರು ಯಾರಿಗೆ ಮತ ಚಲಾಯಿಸಿದರು ?

ಇವಿಎಂನ ಮೂಲಕ ಯಾರು ಯಾರಿಗೆ ಮತ ಹಾಕಿದರು ಎಂಬುದನ್ನು ನೋಡಬಹುದು. ಇದರಲ್ಲಿ “ಡಿಕೋಡರ್” ಎಂಬ ಸಾಧನವನ್ನು ಬಳಸಿಕೊಂಡು ಯಾರಿಗೆ ಯಾರು ಮತ ಹಾಕಿದರು ಎಂಬುದನ್ನು ನೋಡಬಹುದು. ಆದರೆ ಈ ಡಿಕೋಡರ್‌ಗಳನ್ನು ಬಳಸಲು ಅನುಮತಿ ಇಲ್ಲ. ಯಾಕೆಂದರೆ ಇದು ಕಾನೂನು ಉಲ್ಲಂಘನೆಯಾಗಿದೆ.

Exit mobile version