Site icon Vistara News

Elon Musk: ಹ್ಯಾಟ್ರಿಕ್‌ ಸರದಾರ ನರೇಂದ್ರ ಮೋದಿಗೆ ಎಲಾನ್‌ ಮಸ್ಕ್ ಅಭಿನಂದನೆ

Narendra Modi

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024)ಯಲ್ಲಿ ಬಹುಮತ ಪಡೆದು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರಿಗೆ ದೇಶ-ವಿದೇಶಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ನಾಳೆ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ. ಈ ಮಧ್ಯೆ ಟೆಸ್ಲಾ ಮತ್ತು ಎಕ್ಸ್ ಮಾಲೀಕ ಎಲಾನ್‌ ಮಸ್ಕ್(Elon Musk) ಕೂಡ ನರೇಂದ್ರ ಮೋದಿಯ ಹ್ಯಾಟ್ರಿಕ್‌ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಮಸ್ಕ್‌, ತಮ್ಮ ಕಂಪನಿಗಳು ಭಾರತದಲ್ಲಿ ಅತ್ಯಾಕರ್ಷಕ ಕೆಲಸವನ್ನು ಮಾಡಲು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ. ವಿಶ್ವದ ಅತಿದೊಡ್ಡ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು! ಮುಂದಿನ ದಿನಗಳಲ್ಲಿ ಭಾರತದಲ್ಲಿ ನನ್ನ ಕಂಪನಿಗಳು ಅತ್ಯಾಕರ್ಷಕ ಕೆಲಸ ಮಾಡಲಿರುವ ಆಶಾಭಾವನೆ ನನ್ನಲ್ಲಿದೆ ಎಂದು ಎಲಾನ್‌ ಮಸ್ಕ್ ಶುಕ್ರವಾರ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವರ್ಷದ ಏಪ್ರಿಲ್‌ 21 ಹಾಗೂ 22ರಂದು ಮಸ್ಕ್ ಭಾರತಕ್ಕೆ ಭೇಟಿ ನೀಡಲು ಸಿದ್ಧರಾಗಿದ್ದರು. ಆದರೆ ಅವರು ಕೊನೆಯ ಕ್ಷಣದಲ್ಲಿ ಭಾರತ ಪ್ರವಾಸವನ್ನು ರದ್ದುಗೊಳಿಸಿದರು. ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು, ದುರದೃಷ್ಟವಶಾತ್, ಟೆಸ್ಲಾ ಕಟ್ಟುಪಾಡುಗಳಿಂದಾಗಿ ಭಾರತ ಭೇಟಿ ವಿಳಂಬವಾಗುತ್ತದೆ. ಆದರೆ ಈ ವರ್ಷಾಂತ್ಯದಲ್ಲಿ ಭೇಟಿ ನೀಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ಮಸ್ಕ್ ಎಂದಿದ್ದರು.

ಮೋದಿ ಪ್ರತಿಕ್ರಿಯೆ

ಇನ್ನು ಎಲನ್‌ ಮಸ್ಕ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನರೇಂದ್ರ ಮೋದಿ, ನಿಮ್ಮ ಪ್ರೀತಿಗೆ ಧನ್ಯವಾದಗಳು ಮಸ್ಕ್‌, ನಿಪ್ರತಿಭಾವಂತ ಭಾರತೀಯ ಯುವಕರು, ರಾಜಕೀಯ ನೀತಿಗಳು ಮತ್ತು ಸ್ಥಿರವಾದ ಪ್ರಜಾಪ್ರಭುತ್ವದ ರಾಜಕೀಯವು ನಮ್ಮ ಎಲ್ಲಾ ಪಾಲುದಾರರಿಗೆ ವ್ಯಾಪಾರ ವಾತಾವರಣವನ್ನು ಒದಗಿಸುವುದನ್ನು ಮುಂದುವರಿಸುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ.

ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾರತದ ಏಳು ನೆರೆಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ: Narendra Modi: ಮೋದಿ ಪ್ರಮಾಣವಚನಕ್ಕೆ 7 ವಿದೇಶಿ ನಾಯಕರು; 8000 ಅತಿಥಿಗಳು

Exit mobile version