Site icon Vistara News

Elon Musk: ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ, ಟ್ವಿಟರ್‌ ನೌಕರರನ್ನು ಜೈಲಿಗೆ ಕಳುಹಿಸಲು ಇಷ್ಟವಿಲ್ಲ: ಎಲಾನ್‌ ಮಸ್ಕ್

elon musk

ವಾಷಿಂಗ್ಟನ್‌: ಟ್ವಿಟರ್‌ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಎಲಾನ್‌ ಮಸ್ಕ್‌ (Elon Musk) ಅವರು ಇತ್ತೀಚೆಗಷ್ಟೇ ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫಾಲೋ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಅಷ್ಟೇ ಅಲ್ಲ, ಭಾರತಕ್ಕೆ ಟೆಸ್ಲಾ ಕಂಪನಿ ಕಾಲಿಡಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ. ಇಂತಹ ಮಾತುಗಳು ಕೇಳುತ್ತಿರುವ ಮಧ್ಯೆಯೇ ಎಲಾನ್‌ ಮಸ್ಕ್‌ ಅವರು ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದಾರೆ. “ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಲನೆ ಕಷ್ಟಸಾಧ್ಯ. ನಮ್ಮ ಟ್ವಿಟರ್‌ ಸಂಸ್ಥೆಯ ಉದ್ಯೋಗಿಗಳನ್ನು ಜೈಲಿಗೆ ಕಳುಹಿಸಲು ನನಗೆ ಇಷ್ಟವಿಲ್ಲ” ಎಂದು ಹೇಳಿದ್ದಾರೆ.

ಬಿಬಿಸಿಗೆ ನೀಡಿದ ಸಂದರ್ಶನದ ವೇಳೆ ಈ ಕುರಿತು ಎಲಾನ್‌ ಮಸ್ಕ್‌ ಪ್ರಸ್ತಾಪಿಸಿದರು. “ಭಾರತದಲ್ಲಿ ಸಾಮಾಜಿಕ ಜಾಲತಾಣಗಳ ನಿಯಮಗಳು ತುಂಬ ಕಠಿಣವಾಗಿವೆ. ಹಾಗಾಗಿ, ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಲನೆ ಕಷ್ಟಸಾಧ್ಯ. ಸೆನ್ಸಾರ್‌ಶಿಪ್‌ ಪಾಲನೆಯು ಅನಿವಾರ್ಯವಾಗಿದೆ. ಹಾಗಾಗಿ, ಅಮೆರಿಕ ಸೇರಿ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳಂತೆ ಭಾರತದಲ್ಲಿ ಟ್ವಿಟರ್‌ ಬಳಕೆದಾರರಿಗೆ ಎಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಲು ಸಾಧ್ಯವಿಲ್ಲ” ಎಂದು ಮಸ್ಕ್‌ ಹೇಳಿದರು.

“ಭಾರತದಲ್ಲಿ ಪದೇಪದೆ ಟ್ವಿಟರ್‌ ಖಾತೆಗಳನ್ನು ರದ್ದುಗೊಳಿಸುವುದು, ಕಂಟೆಂಟ್‌ಗಳನ್ನು ಸೆನ್ಸಾರ್‌ ಮಾಡುವುದು ನಡೆಯುತ್ತಲೇ ಇರುತ್ತದೆ. ನಾವೇನಾದರೂ ನಿಯಮಗಳನ್ನು ಪಾಲಿಸದಿದ್ದರೆ ಭಾರತದಲ್ಲಿ ಕೆಲಸ ಮಾಡುವ ಟ್ವಿಟರ್‌ ನೌಕರರು ಜೈಲಿಗೆ ಹೋಗಬೇಕಾಗುತ್ತದೆ. ನಾವು ಭಾರತದ ಕಾನೂನನ್ನು ಮೀರಿ ಏನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ ನಾವು ಸಾಮಾಜಿಕ ಜಾಲತಾಣಗಳ ನಿಯಮಗಳನ್ನು ಪಾಲಿಸುತ್ತಿದ್ದೇವೆ ಹಾಗೂ ಮುಂದೆಯೂ ಪಾಲಿಸುತ್ತೇವೆ” ಎಂದು ಸ್ಪಷ್ಟಪಡಿಸಿದರು.

ನರೇಂದ್ರ ಮೋದಿ ಅವರ ಕುರಿತು ಬಿಬಿಸಿಯು ಡಾಕ್ಯುಮೆಂಟರಿ ಬಿಡುಗಡೆ ಮಾಡಿದ್ದಾಗ, ಅದಕ್ಕೆ ಸಂಬಂಧಿಸಿದ ಎಲ್ಲ ಕಂಟೆಂಟ್‌ಗಳನ್ನು ಡಿಲೀಟ್‌ ಮಾಡುವಂತೆ ಕೇಂದ್ರ ಸರ್ಕಾರ ಟ್ವಿಟರ್‌ಗೆ ಸೂಚಿಸಿತ್ತು. ಬಿಬಿಸಿ ಡಾಕ್ಯುಮೆಂಟರಿ, ಆ ಕುರಿತ ಕಂಟೆಂಟ್‌ ತೆರವಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಸ್ಕ್‌, “ಡಾಕ್ಯುಮೆಂಟರಿ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ” ಎಂದಷ್ಟೇ ಹೇಳಿದರು. ಹಾಗೆಯೇ, ಭಾರತದಲ್ಲಿ ಸಾಮಾಜಿಕ ಜಾಲತಾಣಗಳ ಕುರಿತ ಯಾವ ನಿಯಮಗಳು ಕಠಿಣವಾಗಿವೆ ಎಂಬ ಬಗ್ಗೆ ಅವರು ಪ್ರತ್ಯೇಕವಾಗಿ ಪ್ರಸ್ತಾಪಿಸಿಲ್ಲ.

ಭಾರತದಲ್ಲಿ ನೂತನ ಐಟಿ ನಿಯಮಗಳ ಪ್ರಕಾರ, ಸಾಮಾಜಿಕ ಜಾಲತಾಣಗಳು ನಿಯಮ ಪಾಲನೆ ಮಾಡುವುದು ಅನಿವಾರ್ಯವಾಗಿದೆ. ಹಿಂಸೆ, ಅಶ್ಲೀಲತೆ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಅಂಶಗಳುಳ್ಳ ಕಂಟೆಟ್‌ಗಳನ್ನು ಆಯಾ ಜಾಲತಾಣಗಳು ಸೆನ್ಸಾರ್‌ ಮಾಡಬೇಕಿದೆ. ಹೀಗೆ, ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಸರ್ಕಾರವು ಹಲವು ನಿಯಮಗಳನ್ನು ರೂಪಿಸಿದೆ.

ಇದನ್ನೂ ಓದಿ: Musk Follows Modi: ಟ್ವಿಟರ್‌ನಲ್ಲಿ ಮೋದಿಯನ್ನು ಫಾಲೋ ಮಾಡಿದ ಎಲಾನ್‌ ಮಸ್ಕ್‌; ಭಾರತಕ್ಕೂ ಬರುತ್ತಾ ಟೆಸ್ಲಾ?

Exit mobile version