ನವದೆಹಲಿ: ಯೂಟ್ಯೂಬರ್, ಬಿಗ್ ಬಾಸ್ OTT2 ವಿಜೇತ ಸಿದ್ದಾರ್ಥ್ ಯಾದವ್ ಅಲಿಯಾಸ್ ಎಲ್ವಿಶ್ ಯಾದವ್ (Elvish Yadav) ವಿರುದ್ಧ ಜಾರಿ ನಿರ್ದೇಶನಾಲಯ(ED) ಅಕ್ರಮ ಹಣ ವರ್ಗಾವಣೆ ಕೇಸ್ (Money laundering case) ದಾಖಲಿಸಿದೆ. ಉತ್ತರಪ್ರದೇಶದ ಗೌತಮ್ ಬುದ್ಧನಗರ ಜಿಲ್ಲೆಯಲ್ಲಿ ದಾಖಲಾಗಿರುವ ಎಫ್ ಐಆರ್ ಮತ್ತು ಚಾರ್ಜ್‌ಶೀಟ್‌ಗಳ ಆಧಾರದ ಮೇಲೆ ಇಡಿ ಎಲ್ವಿಶ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(PMLA)ಯಲ್ಲಿ ಕೇಸ್ ದಾಖಲಿಸಿದೆ.
ಎಲ್ವಿಶ್ ಯಾದವ್ ಅಕ್ರಮವಾಗಿ ಹಣ ಪಡೆದು ವಿವಿಧ ಕಡೆಗಳಲಿ ರೇವ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಎಂಬುದು ಚಾರ್ಜ್‌ಶೀಟ್ ನಲ್ಲಿ ದಾಖಲಿಸಲಾಗಿದೆ. ಹೀಗಾಗಿ ಶೀಘ್ರದಲ್ಲೇ ಎಲ್ವಿಶ್‌ನನ್ನು ಇಡಿ ವಿಚಾರಣೆಗೊಳಪಡಿಸಲಿದೆ. ಇನ್ನು ಪ್ರಕರಣದಲ್ಲಿ ಭಾಗಿಯಾದ ಇನ್ನಿತರ ಆರೋಪಿಗಳನ್ನೂ ಇಡಿ ಗ್ರಿಲ್ ಮಾಡಲಿದೆ. ಯಾದವ್ ಜೊತೆಗೆ ಒಟ್ಟು ಆರು ಜನರ ವಿರುದ್ಧ ಇಡಿ ಕೇಸ್ ದಾಖಲಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸಿದ ಆರೋಪದ ಮೇಲೆ ಯೂಟ್ಯೂಬರ್, ಬಿಗ್ ಬಾಸ್ OTT2 ವಿಜೇತ ಎಲ್ವಿಶ್ ಯಾದವ್ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಇವರ ಗ್ಯಾಂಗ್‌ನ ಐವರು ಸದಸ್ಯರನ್ನು ನೋಯ್ಡಾದಲ್ಲಿ ಬಂಧಿಸಲಾಗಿತ್ತು. ಸೆಕ್ಟರ್ 51ರ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾವಿನ ವಿಷ ಲಭ್ಯವಿತ್ತು ಎಂದು ಪೊಲೀಸರು ತಿಳಿಸಿದ್ದರು. ಬಂಧಿತರನ್ನು ಆಗ್ನೇಯ ದೆಹಲಿಯ ಬದರ್‌ಪುರದ ಮೊಹರ್‌ಬಂದ್ ಗ್ರಾಮದ ನಿವಾಸಿಗಳಾದ ರಾಹುಲ್(32), ತೀತುನಾಥ್ (45), ಜೈಕರನ್ (50), ನಾರಾಯಣ್ (50) ಮತ್ತು ರವಿನಾಥ್ (45) ಎಂದು ಗುರುತಿಸಲಾಗಿತ್ತು.
ವಿದೇಶಿ ಪ್ರಜೆಗಳಿಗೂ ಆತಿಥ್ಯ ನೀಡಿದ ರೇವ್ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಕೆಲವರು ಹಾವಿನ ವಿಷವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆರೋಪಿಯಿಂದ ಐದು ನಾಗರಹಾವು ಸೇರಿದಂತೆ ಒಂಬತ್ತು ಹಾವುಗಳು ಹಾಗೂ ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿದ್ದು, ಹಾವುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಅಂದು ಎಲ್ವಿಶ್ ಯಾದವ್ ಅವರನ್ನು ಬಂಧಿಸಿರಲಿಲ್ಲ.
ವಿವಿಧ ಸ್ಥಳಗಳಿಂದ ಹಾವುಗಳನ್ನು ಹಿಡಿದು ಅವುಗಳ ವಿಷವನ್ನು ಹೊರತೆಗೆಯುತ್ತಿದ್ದರು, ಎಲ್ವಿಶ್ ಯಾದವ್ ಅವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಪಾರ್ಟಿಗಳಲ್ಲಿ ವಿಷವನ್ನು ಪೂರೈಸಲು ಅವರು ಭಾರಿ ಮೊತ್ತದ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ಈ ಮುಂಚೆ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: Rahul Gandhi: ಪ್ರಧಾನಿ ದ್ವಾರಕಾ ಪೂಜೆ ಒಂದು ನಾಟಕ; ಮತ್ತೆ ಸನಾತನ ಆಚರಣೆ ಬಗ್ಗೆ ರಾಹುಲ್ ಪ್ರಶ್ನೆ
ಎಲ್ವಿಶ್ ಯಾದವನ್ನು ನೋಯ್ಡಾ ಪೊಲೀಸರು ಹಾವಿನ ವಿಷ ಬಳಸಿದ ಪ್ರಕರಣದಲ್ಲಿ ಮಾ.17ರಂದು ಬಂಧಿಸಿದ್ದರು. ವಿಚಾರಣೆ ಬಳಿಕ ಜಾಮೀನು ಪಡೆದು ಹೊರ ಬಂದರು. ಹಾಗೇ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆಯೂ ಜಾಮೀನು ಪಡೆದಿದ್ದ. ಇದಾದ ಕೆಲವೇ ದಿನಗಳಲ್ಲಿ ಎಲ್ವಿಶ್ 3 ಕೋಟಿ ರೂ ಮೌಲ್ಯದ ಮರ್ಸಿಡಿಸ್ ಗ್ವ್ಯಾಗನ್ G350 D (Mercedes G Wagon) ಖರೀದಿಸಿದ್ದ.