Site icon Vistara News

EMERGENCY: ಎಂದಿಗೂ ಮರೆಯಲಾಗದ ಕರಾಳ ಇತಿಹಾಸ, ಕಹಿ ನೆನಪಿಗೆ 47 ವರ್ಷ

Indira gandhi

60 ಕೋಟಿ ಜನ ಗಾಢ ನಿದ್ದೆಯಲ್ಲಿದ್ದಾಗ ಪ್ರಧಾನಿ ಇಂದಿರಾ ಗಾಂಧಿ ಕೈಗೊಂಡಿದ್ದರು ಘೋರ ನಿರ್ಧಾರ.

ರಾತ್ರೋರಾತ್ರಿ ಕರಾಳ ಆದೇಶಕ್ಕೆ ಹಾಕಿಸಿಕೊಳ್ಳಲಾಗಿತ್ತು ರಾಷ್ಟ್ರಪತಿಯವರ ಅಂಕಿತ.

ಮರುಕ್ಷಣದಿಂದಲೇ ಕಸಿದುಕೊಳ್ಳಲಾಗಿತ್ತು ಎಲ್ಲ ಮೂಲಭೂತ ಹಕ್ಕುಗಳ ಸ್ವಾತಂತ್ರ್ಯ

ಬರೋಬ್ಬರಿ 21 ತಿಂಗಳ ಬರ್ಬರ ಹಿಂಸೆ ನರಳಿ ಹೋಗಿತ್ತು, ಕನಲಿ ಹೋಗಿತ್ತು ಭಾರತ

ಹಾಗಿದ್ದರೆ ಪ್ರಧಾನಿ ಇಂದಿರಾ ಗಾಂಧಿ ಇಂಥ ಕಠೋರ ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಿದ್ದೇಕೆ?

ಸಂವಿಧಾನದಲ್ಲಿ ಅದಕ್ಕೆ ಅವಕಾಶ ಇದೆಯಾ? ಯಾವ ಸಂದರ್ಭದಲ್ಲಿ ಎಮರ್ಜೆನ್ಸಿ ಘೋಷಿಸಬಹುದು?

ತುರ್ತುಪರಿಸ್ಥಿತಿ ಕರಾಳ ದಿನಗಳು ಹೇಗಿದ್ದವು? ಸರ್ಕಾರ ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ಸಾಧಿಸಿದ್ದಾದರೂ ಏನನ್ನು? ಕಹಿ ನೆನಪಿಗೆ ಈಗ ೪೭ ವರ್ಷ

ಎಲ್ಲವನ್ನೂ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಇಡೀ ದೇಶಕ್ಕೆ ಬರ ಸಿಡಿಲಿನಂತೆ ಎರಗಿದ್ದ ಎಮರ್ಜೆನ್ಸಿ
ಆವತ್ತು 1975ರ ಜೂನ್ 25ರ ಮಧ್ಯರಾತ್ರಿ. ಅಂದಿನ ಪ್ರಧಾನಿ ಇಂದಿರಾ ಗಾಂದಿ ದುಡುದುಡನೆ ಹೆಜ್ಜೆ ಇಡುತ್ತಾ ರಾಷ್ಟ್ರಪತಿ ಭವನಕ್ಕೆ ಧಾವಿಸಿದರು. ಅಲ್ಲಿದ್ದವರು ಫಕ್ರುದ್ದೀನ್‌ ಅಲಿ. ಅವರ ಮುಂದೆ ಕಡತವೊಂದನ್ನು ಇಟ್ಟ ಇಂದಿರಾ ಸಹಿ ಮಾಡಿ ಅಂದರು. ಫಕ್ರುದ್ದೀನ್‌ ಅಲಿ ಸಹಿ ಮಾಡಿದರು.
ಆ ಕ್ಷಣವೇ ಇಡೀ ದೇಶಕ್ಕೆ ಒಮ್ಮಿಂದೊಮ್ಮೆಗೆ ಸಿಡಿಲೇ ಎರಗಿದಂತಾಯಿತು. ಯಾಕೆಂದರೆ ಫಕ್ರುದ್ದೀನ್‌ ಅಲಿ ಅವರು ಸಹಿ ಹಾಕಿದ್ದು ಸಾಮಾನ್ಯ ಕಡತವಾಗಿರಲಿಲ್ಲ. ಇಡೀ ದೇಶವನ್ನು ಕತ್ತಲಲ್ಲಿ ಮುಳುಗಿಸುವ, ಸರ್ವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಕರಾಳ ಶಾಸನ ಅದಾಗಿತ್ತು. ಅದುವೇ ಎಮರ್ಜೆನ್ಸಿ. ಭಯಾನಕ ತುರ್ತು ಪರಿಸ್ಥಿತಿ!

ಮುಂದೆ ಬರೋಬ್ಬರಿ 21 ತಿಂಗಳ ಕಾಲ ದೇಶ ಅನುಭವಿಸಿದ್ದು ವಸ್ತುಶಃ ನರಕ ಯಾತನೆ. ನಾಗರಿಕರ ಮೂಲಭೂತ ಹಕ್ಕುಗಳೆಲ್ಲ ಮೂಲೆ ಸೇರಿದವು. ಚುನಾವಣೆಗಳನ್ನು ಮತಪೆಟ್ಟಿಗೆಯೊಳಗೆ ತಳ್ಳಿ ಸೀಲು ಬಡಿಯಲಾಯಿತು. ಪ್ರತಿಪಕ್ಷದ ನಾಯಕರನ್ನೆಲ್ಲ ಮನೆ ಮನೆ ಹುಡುಕಿ ತಂದು ಜೈಲಿಗೆ ತಳ್ಳಲಾಯಿತು. ಪತ್ರಿಕೆಗಳು ಪ್ರಕಟವಾಗದಂತೆ ನಿರ್ಬಂಧಿಸಲಾಯಿತು. ಕೋರ್ಟ್‌ಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡವು. ಅಂತಿಮವಾಗಿ 1977ರ ಮಾರ್ಚ್‌ 21ರಂದು ಅದೇ ತುರ್ತು ಪರಿಸ್ಥಿತಿಯನ್ನು ರದ್ದು ಮಾಡಿದ ದಿನ ಭಾರತ ಎರಡನೇ ಸ್ವಾತಂತ್ರ್ಯ ಸಮರ ಗೆದ್ದ ಸಂಭ್ರಮವನ್ನು ಆಚರಿಸಿತು.
ಅಧಿಕಾರ ಕಳೆದುಕೊಳ್ಳುವ ಭಯ, ಒಳಗಿಂದೊಳಗೆ ನಡೆಯುತ್ತಿದ್ದ ಷಢ್ಯಂತ್ರಗಳು, ಕುರ್ಚಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕೆಂಬ ಭಯಾನಕ ಹಠವನ್ನು ಹೊತ್ತಿದ್ದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅಂತಿಮವಾಗಿ ಉರುಳಿಸಿದ ದಾಳವೇ ಈ ತುರ್ತು ಪರಿಸ್ಥಿತಿ.

ಮಾಧ್ಯಮಗಳ ಮೇಲೆ ಪ್ರಹಾರ, ಪತ್ರಿಕಾ ಸ್ವಾತಂತ್ರ್ಯ ಹರಣ

ಅತ್ತ ಫಕ್ರುದ್ದೀನ್‌ ಅಲಿ ಅವರು ಕಡತಕ್ಕೆ ಸಹಿ ಹಾಕುತ್ತಿದ್ದಂತೆಯೇ ಇತ್ತ ಒಮ್ಮಿಂದೊಮ್ಮೆಗೇ ದಿಲ್ಲಿಯ ಪತ್ರಿಕಾ ಕಚೇರಿಗಳ ಪವರ್‌ ಕಟ್‌ ಆಗಿ ಹೋಯಿತು. ಯಾಕೆಂದರೆ, ಆ ಸುದ್ದಿ ಪತ್ರಿಕೆಗಳ ಮೂಲಕ ಜನರಿಗೆ ತಲುಪಬಾರದು ಎಂದು. ಮರು ದಿನ ಬೆಳಗ್ಗೆ ಆಕಾಶವಾಣಿಯಲ್ಲಿ ದೇಶವೇ ತಲ್ಲಣಗೊಳ್ಳುವ ಸುದ್ದಿ ಬಿತ್ತರಗೊಂಡಿತು: ಎಮರ್ಜೆನ್ಸಿ!

ಮುಂದಿನ ಎರಡು ದಿನಗಳ ಕಾಲವೂ ಪತ್ರಿಕಾ ಕಾರ್ಯಾಲಯಗಳಿಗೆ ವಿದ್ಯುತ್ ಬರಲೇ ಇಲ್ಲ. ಎರಡು ದಿನಗಳ ಕಾಲ ಏನನ್ನೂ ಬರೆಯುವಂತಿಲ್ಲ ಎಂದು ತಾಕೀತು ಮಾಡಲಾಯಿತು. ಬಳಿಕವೂ ಪತ್ರಿಕೆಗಳಲ್ಲಿ ಬರುವ ಪ್ರತಿ ಸುದ್ದಿಯನ್ನೂ ಸಂಬಂಧಿತ ಹಿರಿಯ ಅಧಿಕಾರಿ ಫೈನಲ್‌ ಮಾಡಿಯೇ ಪ್ರಿಂಟ್‌ ಮಾಡಬೇಕಾಗಿತ್ತು. ಇದನ್ನು ವಿರೋಧಿಸಿ ಕೆಲವು ಪತ್ರಿಕೆಗಳು ಸಂಪಾದಕೀಯನ್ನು ಖಾಲಿ ಬಿಟ್ಟು ಪ್ರತಿಭಟಿಸಿದವು, ಕೆಲವು ಕಪ್ಪು ಬಣ್ಣದಿಂದ ಮುಚ್ಚಿದವು. ಅಪ್ಪಿ ತಪ್ಪಿ ಎಮರ್ಜೆನ್ಸಿ ಬಗ್ಗೆ ಏನಾದರೂ ಬರೆದರೆ ನೇರವಾಗಿ ಜೈಲಿಗೇ ಹಾಕಲಾಯಿತು. ಇದನ್ನೆಲ್ಲ ನೋಡುತ್ತಾ ಜನರೊಳಗೆ ಆಕ್ರೋಶವೂ ಕೊತಕೊತ ಕುದಿಯತೊಡಗಿತು.

ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿತು. ಎಮರ್ಜೆನ್ಸಿ ಘೋಷಿಸಿದ ನಡು ರಾತ್ರಿಯಲ್ಲೇ ಜನಪ್ರಿಯ ನಾಯಕ ಜಯಪ್ರಕಾಶ ನಾರಾಯಣ ಅವರ ನಿವಾಸಕ್ಕೆ ಪೊಲೀಸರು ಮುತ್ತಿಗೆ ಹಾಕಿ ಬಂಧಿಸಿದ್ದರು. ಮೊರಾರ್ಜಿ ದೇಸಾಯಿ ಅವರನ್ನೂ ಅರೆಸ್ಟ್ ಮಾಡಲಾಯಿತು. ಸಮಾಜವಾದಿ ಪಕ್ಷದ ಮಧು ಲಿಮಯೆ, ಸಮರ ಗುಹ, ಭಾರತೀಯ ಲೋಕದಳದ ಚೌಧುರಿ ಚರಣ ಸಿಂಗ್, ಸಂಸ್ಥಾ ಕಾಂಗ್ರೆಸ್ನ ಅಶೋಕ್ ಮೆಹ್ತಾ ಸೆರೆಯಾದರು.

ಮಧ್ಯರಾತ್ರಿ ಪೊಲೀಸರು ಬಂದು ಬಾಗಿಲು ತಟ್ಟುವುದು, ಮಲಗಿದ್ದವರನ್ನೆಲ್ಲ ಎಬ್ಬಿಸಿ ಜೀಪುಗಳಲ್ಲಿ ತುಂಬಿ ಸ್ಟೇಷನ್ಗೆ ಕರೆದೊಯ್ಯುವುದು ಸಾಮಾನ್ಯ ದೃಶ್ಯವಾಗತೊಡಗಿತು. ಆರೆಸ್ಸೆಸ್ ಸೇರಿದಂತೆ ಹಲವು ಸಂಘಟನೆಗಳನ್ನು ನಿಷೇಧಿಸಲಾಯಿತು. ಹಳ್ಳಿ ಹಳ್ಳಿಗಳಲ್ಲಿ ಜನರನ್ನು ಠಾಣೆಗೆ ಎಳೆದೊಯ್ಯಲಾಯಿತು. ಪತ್ರಿಕೆ, ಕೋರ್ಟ್, ಸಭೆ, ಮೆರವಣಿಗೆ, ಸಂಘ ಸಂಸ್ಥೆಗಳು, ವಿರೋಧಪಕ್ಷ, ಚುನಾವಣೆ ಎಲ್ಲವನ್ನೂ ನಿರ್ಬಂಧಿಸಿ ಅಕ್ಷರಶಃ ಸರ್ವಾಧಿಕಾರಿ ಆಡಳಿತವನ್ನು ಜಾರಿಗೊಳಿಸಲಾಯಿತು. ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಲಾಯಿತು. ಪೊಲೀಸರ ಲಾಠಿ ಪ್ರಹಾರ, ಜೈಲಿನಲ್ಲಿ ದೌರ್ಜನ್ಯಕ್ಕೆ ಕರ್ನಾಟಕ ಒಂದರಲ್ಲೇ ಸಾವಿರಾರು ಮಂದಿ ತುತ್ತಾಗಿದ್ದರು. ಹಲವಾರು ಮಂದಿ ವಿಕಲಚೇತನರಾಗಿದ್ದರು.

ಆದರೆ ಹೋರಾಟ ಮಾತ್ರ ಮುಂದುವರಿಯಿತು. ಅಸಂಖ್ಯಾತ ಹೋರಾಟಗಾರರು ಭೂಗತರಾಗಿ ಪ್ರತಿಭಟನೆ ನಡೆಸಿದರು. ಇದು ಮುಂದೆ ದೇಶದ ರಾಜಕೀಯ ಇತಿಹಾಸವನ್ನೇ ಬದಲಿಸಿತು. ಎಮರ್ಜೆನ್ಸಿ ಮುಗಿಯುವ ಸಂದರ್ಭದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಯಿತು. 1977ರ ಲೋಕಸಭಾ ಚುನಾವಣೆಯಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪರಿವಾರ 295 ಕ್ಷೇತ್ರಗಳಲ್ಲಿ ಗೆದ್ದರೆ, ಕಾಂಗ್ರೆಸ್ 154 ಕ್ಷೇತ್ರಗಳಿಗೆ ಕುಸಿಯಿತು. ಕಾಂಗ್ರೆಸ್ಗೆ ಪರ್ಯಾಯ ಸಾಧ್ಯ ಎಂಬುದನ್ನು ಇತಿಹಾಸ ತೋರಿಸಿಕೊಟ್ಟಿತು. ಮೊರಾರ್ಜಿ ದೇಸಾಯಿ ಪ್ರಧಾನಿಯಾದರು.

ಆಂತರಿಕ ಕ್ಷೋಭೆಯ ಕಾರಣ ಕೊಟ್ಟ ಇಂದಿರಾ ಗಾಂಧಿ

ದೇಶದಲ್ಲಿ ಆಂತರಿಕ ಕ್ಷೋಭೆ ಹೆಚ್ಚುತ್ತಿರುವುದರಿಂದ ಪ್ರಜಾಪ್ರಭುತ್ವದ ಸಂರಕ್ಷಣೆಗೆ ತುರ್ತುಪರಿಸ್ಥಿತಿಯನ್ನು ಹೇರಲಾಗಿದೆ ಎಂಬ ಕಾರಣವನ್ನು ಅಂದಿನ ಪ್ರಧಾನಿ ಇಂದಿರಾಗಾಂಧಿ ಹೇಳಿದ್ದರು. ಆದರೆ ಆಂತರಿಕ ಕ್ಷೋಭೆ ಎಂದರೆ ಯಾವುದು ಏನು-ಎತ್ತ ಎಂಬ ವಿವರಗಳನ್ನು ನೀಡಿರಲಿಲ್ಲ. ಕೇಳುವುದಕ್ಕೂ ಮುನ್ನ ಎಮರ್ಜೆನ್ಸಿ ಜಾರಿಯಾಗಿತ್ತು. ರೇಡಿಯೊ ಭಾಷಣದಲ್ಲಿ ಎಮರ್ಜೆನ್ಸಿಯನ್ನು ಪ್ರಧಾನಿ ಇಂದಿರಾಗಾಂಧಿ ಘೋಷಿಸುವುದಕ್ಕೆ ಇನ್ನೊಂದು ಗಂಟೆಯಷ್ಟೇ ಇದೆ ಎನ್ನುವಾಗ ಸಚಿವ ಸಂಪುಟದ ಇತರ ಸಚಿವರಿಗೆ ತಿಳಿಸಲಾಗಿತ್ತು.

ಏನಿದು ಎಮರ್ಜೆನ್ಸಿ?

ಸಂವಿಧಾನದ 352ನೇ ವಿಧಿಯ ಪ್ರಕಾರ ರಾಷ್ಟ್ರಪತಿಯವರು ತುರ್ತುಪರಿಸ್ಥಿತಿಯನ್ನು ಹೇರಬಹುದು. ದೇಶದ ಭದ್ರತೆಗೆ ಧಕ್ಕೆಯಾಗುವಂತೆ ಬಾಹ್ಯ ಅತಿಕ್ರಮಣವಾದಾಗ, ದೇಶ ಯುದ್ಧವನ್ನು ಸಾರಿದಾಗ, ಮತ್ತು ದೇಶದಲ್ಲಿ ಸಶಸ್ತ್ರ ದಂಗೆ ಸಂಭವಿಸಿದಾಗ ತುರ್ತುಪರಿಸ್ಥಿತಿಯನ್ನು ವಿಧಿಸಬಹುದು. ಸ್ವತಂತ್ರ ಭಾರತದಲ್ಲಿ 1975ರ ಎಮರ್ಜೆನ್ಸಿಗೆ ಮೊದಲು ಎರಡು ಸಲ ಎಮರ್ಜೆನ್ಸಿ ಘೋಷಿಸಲಾಗಿತ್ತು. 1962ರ ಅಕ್ಟೋಬರ್ನಿಂದ 1968ರ ಜನವರಿ ತನಕ ಮೊದಲ ಸಲ ಚೀನಾ ವಿರುದ್ಧದ ಯುದ್ಧದ ಸಂದರ್ಭ ತುರ್ತುಪರಿಸ್ಥಿತಿ ಘೋಷಿಸಲಾಗಿತ್ತು. 1971ರ ಡಿಸೆಂಬರ್ 3ರಿಂದ 17ರ ತನಕ ಎರಡನೇ ಸಲ ಎಮರ್ಜೆನ್ಸಿ ಘೋಷಿಸಲಾಯಿತು. ಆಗ ಭಾರತ-ಪಾಕಿಸ್ತಾನ ಯುದ್ಧ ನಡೆದಿತ್ತು. ಮೊದಲ ಎರಡು ಸಂದರ್ಭಗಳಿಗೆ ಇತಿಹಾಸದಲ್ಲಿ ಯಾವುದೇ ತಕರಾರು ಇರಲಿಲ್ಲ. ಆದರೆ ಮೂರನೇ ಎಮರ್ಜೆನ್ಸಿ ಮಾತ್ರ ಅತಿ ಘೋರ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಇಂದಿಗೂ ದೊಡ್ಡ ಕಳಂಕವಾಗಿದೆ.

ತುರ್ತುಪರಿಸ್ಥಿತಿಗೆ ಕಾರಣವಾದ ಬೆಳವಣಿಗೆಗಳೇನು?

ಭಾರತದಲ್ಲಿ 1967 ಮತ್ತು 1971ರ ಅವಧಿಯಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಜನಪ್ರಿಯತೆ ಭಾರಿ ವೃದ್ಧಿಸಿತ್ತು. “ಇಂದಿರಾ ಈಸ್ ಇಂಡಿಯಾ, ಇಂಡಿಯಾ ಈಸ್ ಇಂದಿರಾʼ ಎಂಬ ಸ್ಲೋಗನ್ ಜನಪ್ರಿಯವಾಗಿತ್ತು. ಗರೀಬೀ ಹಟಾವೊ ಎಂದು ಘೋಷಿಸಿದ್ದ ಇಂದಿರಾಗಾಂಧಿ ಅವರು ಇದಕ್ಕಾಗಿ ಉಗ್ರ ಸಮಾಜವಾದಿ ಸಿದ್ಧಾಂತ ಅನುಸರಿಸಿದರು. ಖಾಸಗಿ ಬ್ಯಾಂಕ್ಗಳನ್ನು ರಾಷ್ಟ್ರೀಕರಣಗೊಳಿಸಿದರು. 1971ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ 352 ಕ್ಷೇತ್ರಗಳಲ್ಲಿ ಗೆದ್ದು ಜಯಭೇರಿ ದಾಖಲಿಸಿತ್ತು. ಅದೇ ವರ್ಷ ಡಿಸೆಂಬರ್ನಲ್ಲಿ ಪಾಕಿಸ್ತಾನದ ಜತೆಗಿನ ಯುದ್ಧದಲ್ಲಿ ಭಾರತಕ್ಕೆ ಗೆಲುವಾಯಿತು. ಪೂರ್ವ ಪಾಕಿಸ್ತಾನವನ್ನು ಮುಕ್ತಿಗೊಳಿಸಿ ಬಾಂಗ್ಲಾದೇಶ ಹುಟ್ಟಿಕೊಂಡಿತು. ಈ ಎರಡು ಸಾಧನೆಗಳಿಂದ ಇಂದಿರಾಗಾಂಧಿ ಜನಪ್ರಿಯತೆಯ ತುತ್ತತುದಿಯಲ್ಲಿದ್ದರು.

ರಾಜಕೀಯ ಅರಾಜಕತೆ, ಭ್ರಷ್ಟಾಚಾರ

ಕಾಲಕ್ರಮೇಣ ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರ ಅತಿಯಾಗತೊಡಗಿತು. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದರು. ಹಲವು ರಾಜ್ಯಗಳಲ್ಲಿ ಜನ ಬೀದಿಗಿಳಿಯತೊಡಗಿದರು. ವಿದ್ಯಾರ್ಥಿ ಸಂಘಟನೆಗಳು ವ್ಯಾಪಕವಾಗಿ ಪ್ರತಿಭಟನೆಗಳನ್ನು ನಡೆಸಿದವು. ಗುಜರಾತ್ನಲ್ಲಿ ನವನಿರ್ಮಾಣ ಆಂದೋಲನ ಚುರುಕಾಯಿತು. ಕೇಂದ್ರ ಸರ್ಕಾರ ಬಲವಂತವಾಗಿ ಗುಜರಾತ್ ವಿಧಾನಸಭೆಯನ್ನು ವಿಸರ್ಜಿಸಿತು. ಗುಜರಾತ್ ಮಾತ್ರವಲ್ಲದೆ, ಬಿಹಾರ, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಅರಾಜಕ ಪರಿಸ್ಥಿತಿ ಉಂಟಾಯಿತು. ಇದು ಇಂದಿರಾ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿತ್ತು.

ಜಯಪ್ರಕಾಶ ನಾರಾಯಣ ಚಳುವಳಿಯ ಕೆಚ್ಚು

ಬಿಹಾರದಲ್ಲಿ ಗಾಂಧಿವಾದಿ ಹಾಗೂ ಸಮಾಜವಾದಿ ನಾಯಕ ಜಯಪ್ರಕಾಶ ನಾರಾಯಣ ಅವರ ನೇತೃತ್ವದಲ್ಲಿ ಇಂದಿರಾ ಸರ್ಕಾರದ ವಿರುದ್ಧ ಚಳುವಳಿ ತೀವ್ರತೆ ಪಡೆದು ಇತರ ಕಡೆಗಳಿಗೆ ಹರಡಿತು. ಜೇಪಿ ಎಂದೇ ಜನಪ್ರಿಯರಾಗಿದ್ದ ಜಯಪ್ರಕಾಶ ನಾರಾಯಣ ಅವರು ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ವಿರುದ್ಧ ದೇಶಾದ್ಯಂತ ಪ್ರಬಲ ಜನಾಂದೋಲನ ನಡೆಸಿದರು. ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಇಂದಿರಾ ಸರ್ಕಾರವನ್ನು ಹೊಣೆಯಾಗಿಸಿದರು.

ಚುನಾವಣೆಯಲ್ಲಿ ಅಕ್ರಮವಾಗಿ ಗೆದ್ದಿದ್ದ ಇಂದಿರಾ ಗಾಂಧಿ

ಇಂದಿರಾಗಾಂಧಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ಎಮರ್ಜೆನ್ಸಿಯನ್ನು ದುರುಪಯೋಗ ಮಾಡಿಕೊಂಡರು ಎಂಬ ವಾದವಿದೆ. ಇದಕ್ಕೆ ಪುಷ್ಟಿ ನೀಡುವ ಐತಿಹಾಸಿಕ ಬೆಳವಣಿಗೆ 1971ರ ಲೋಕಸಭೆ ಚುನಾವಣೆಯಲ್ಲಿ ನಡೆದಿತ್ತು. ಆಗ ಇಂದಿರಾಗಾಂಧಿ ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಅವರ ಸಮೀಪದ ಪ್ರತಿಸ್ಪರ್ಧಿಯಾಗಿದ್ದವರು ಸಂಯುಕ್ತ ಸಮಾಜವಾದಿ ಪಕ್ಷದ ಅಭ್ಯರ್ಥಿ ರಾಜ್ ನಾರಾಯಣ್. ಇಂದಿರಾಗಾಂಧಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆದ್ದಿದ್ದರು. ಆದರೆ ಚುನಾವಣೆಯಲ್ಲಿ ಅಕ್ರಮ ಮಾಡುವ ಮೂಲಕ ಇಂದಿರಾ ಗೆದ್ದಿದ್ದಾರೆ ಎಂದು ರಾಜ್ ನಾರಾಯಣ್ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ನಾಲ್ಕು ವರ್ಷಗಳ ವಿಚಾರಣೆ ನಡೆದು ಕೊನೆಗೆ ಪ್ರಧಾನಿ ಇಂದಿರಾಗಾಂಧಿ ತಪ್ಪಿತಸ್ಥೆ ಎಂದು ಕೋರ್ಟ್ ತೀರ್ಪು ಪ್ರಕಟಿಸಿತು. ಹಾಗೂ 6 ವರ್ಷಗಳ ಕಾಲ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಿತು. ಇದರಿಂದ ವಿಚಲಿತರಾದ ಇಂದಿರಾ ಗಾಂಧಿ ಅವರು ಅಧಿಕಾರ ಉಳಿಸಿಕೊಳ್ಳಲು ಎಮರ್ಜೆನ್ಸಿ ವಿಧಿಸಿದರು ಎಂಬ ವಾದವಿದೆ.

ಮೊರಾರ್ಜಿ ದೇಸಾಯಿ, ವಾಜಪೇಯಿ, ಆಡ್ವಾಣಿ, ಹೋರಾಟ

ಜನತಾ ಪರಿವಾರ ಹಾಗೂ ಜನಸಂಘದ ಈಗಿನ ಬಹುತೇಕ ಹಿರಿಯ ನಾಯಕರೆಲ್ಲ ತುರ್ತು ಪರಿಸ್ಥಿತಿಯ ಸಂದರ್ಭ ಜೈಲು ಸೇರಿದವರೇ ಆಗಿದ್ದಾರೆ. ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಮೊದಲಾದ ಘಟಾನುಘಟಿ ನಾಯಕರು ಎಮರ್ಜೆನ್ಸಿ ಸಂದರ್ಭ ಸೆರೆವಾಸ ಅನುಭವಿಸಿದ್ದರು. ಜಯಪ್ರಕಾಶ ನಾರಾಯಣ, ಮೊರಾರ್ಜಿ ದೇಸಾಯಿ, ಬಿಜು ಪಟ್ನಾಯಕ್, ಅಟಲ್ ಬಿಹಾರಿ ವಾಜಪೇಯಿ, ಎಲ್ಕೆ ಆಡ್ವಾಣಿ, ಚಂದ್ರಶೇಖರ್, ನಾನಾಜಿ ದೇಶ್ಮುಖ್, ಆರೆಸ್ಸೆಸ್ನ ಬಾಳಾ ಸಾಹೇಬ್ ದೇವರಸ್, ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ, ರಾಮ್ ವಿಲಾಸ್ ಪಾಸ್ವಾನ್, ಅರುಣ್ ಜೇಟ್ಲಿ ಹೀಗೆ ಎಲ್ಲರೂ ಎಮರ್ಜೆನ್ಸಿ ವಿರೋಧಿಸಿ ಜೈಲಿನಲ್ಲಿದ್ದರು. ಎಮರ್ಜೆನ್ಸಿ ಇಂಥ ಎಲ್ಲ ನಾಯಕರ ರಾಜಕೀಯ ಜೀವನದಲ್ಲೊಂದು ಮಹತ್ತರ ಟರ್ನಿಂಗ್ ಪಾಯಿಂಟ್ ಆಯಿತು. ಜನಸಂಘ ಇತಿಹಾಸದ ಪುಟ ಸೇರಿ ಭಾಜಪ ಹುಟ್ಟಿಕೊಂಡಿತು.

ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿದ್ದ ವಾಜಪೇಯಿ, ಆಡ್ವಾಣಿ

ಎಮರ್ಜೆನ್ಸಿ ಘೋಷಣೆಯಾದ ಕೂಡಲೇ ಜಯಪ್ರಕಾಶ ನಾರಾಯಣ, ಮೊರಾರ್ಜಿ ದೇಸಾಯಿ ಅವರನ್ನು ದಿಲ್ಲಿಯಲ್ಲಿ ರಾತ್ರಿಯಲ್ಲೇ ಬಂಧಿಸಲಾಗಿತ್ತು. ಮರು ದಿನವೇ ಬೆಂಗಳೂರಿನಲ್ಲಿ ಜನಸಂಘದ ಚಟುವಟಿಕೆಯಲ್ಲಿದ್ದ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಶ್ಯಾಮನಂದನ್ ಮಿಶ್ರಾ ಅವರನ್ನೂ ಬಂಧಿಸಲಾಯಿತು. ಅಡ್ವಾಣಿ 19 ತಿಂಗಳು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿದ್ದರು.


ಕರ್ನಾಟಕದಲ್ಲೂ ತುರ್ತುಪರಿಸ್ಥಿತಿ ವಿರುದ್ಧದ ಹೋರಾಟ ತೀವ್ರ ಸ್ವರೂಪ ಪಡೆದಿತ್ತು. ಭೂಗತ ಹೋರಾಟ ನಡೆಯುತ್ತಿತ್ತು. ಮಾಜಿ ದಂಡನಾಯಕ ಜನರಲ್ ಕಾರ್ಯಪ್ಪ, ಉಡುಪಿಯ ಪೇಜಾವರ ಮಠಾಧಿಪತಿ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರು ಇಂದಿರಾ ಗಾಂಧಿ ಅವರಿಗೆ ಕಳಿಸಿದ ಸಂದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಕೂಡಲೇ ಹಿಂಪಡೆಯುವಂತೆ ಮನವಿ ಮಾಡಿದರೂ, ಪ್ರಯೋಜನವಾಗಿರಲಿಲ್ಲ.

ಕಾರ್ಮಿಕರನ್ನು ಒಗ್ಗೂಡಿಸಿದ ಜಾರ್ಜ್ ಫರ್ನಾಂಡಿಸ್

ಎಮರ್ಜೆನ್ಸಿ ವಿರುದ್ಧ ಪ್ರಬಲ ಹೋರಾಟ ನಡೆಸಿದ ಧೀಮಂತ ನಾಯಕ ಜಾರ್ಜ್ ಫರ್ನಾಂಡಿಸ್. ಲಕ್ಷಾಂತರ ಕಾರ್ಮಿಕರನ್ನು ಪ್ರಭಾವಿಸಿ ಸಂಘಟಿಸಿದರು. 1976ರಲ್ಲಿ ಹೋರಾಟ ನಡೆಸುತ್ತಿದ್ದಾಗಲೇ ಅವರನ್ನು ಬಂಧಿಸಿ ಕೈಕೊಳ ತೊಡಿಸಿ ಜೈಲಿನಲ್ಲಿಡಲಾಯಿತು. ರೈಲ್ವೆ ಸೇತುವೆಯನ್ನು ಸ್ಫೋಟಿಸಲು ಯತ್ನಿಸಿದ ಆರೋಪವನ್ನು ಅವರ ವಿರುದ್ಧ ದಾಖಲಿಸಲಾಗಿತ್ತು. ಎಮರ್ಜೆನ್ಸಿಯುದ್ದಕ್ಕೂ ಅವರನ್ನು ಸರ್ಕಾರ ಬಿಡುಗಡೆಗೊಳಿಸಲಿಲ್ಲ. 1977ರ ಲೋಕಸಭೆ ಚುನಾವಣೆ ವೇಳೆಯೂ ಬಿಡಲಿಲ್ಲ. ಆದರೆ ಜಾರ್ಜ್ ಫರ್ನಾಂಡಿಸ್ ಅದೆಷ್ಟು ಜನಪ್ರಿಯರಾಗಿದ್ದರೆಂದರೆ, ಜೈಲಿನಿಂದಲೇ ಜಾಫರ್ಪುರ ಕ್ಷೇತ್ರದಿಂದ ಜನತಾ ಪರಿವಾರದ ಅಭ್ಯರ್ಥಿಯಾಗಿ ನಿಂತರು. ಮಾತ್ರವಲ್ಲದೆ ಗೆದ್ದರು. ಬಳಿಕ ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರದಲ್ಲಿ ಸಚಿವರಾದರು.

ಎಮರ್ಜೆನ್ಸಿ ಕಾಂಗ್ರೆಸ್ಗೆ ಈಗಲೂ ಕಳಂಕ

ತುರ್ತು ಪರಿಸ್ಥಿತಿ ಈಗಲೂ ಕಾಂಗ್ರೆಸ್ಗೆ ಭಾರಿ ಕಳಂಕವಾಗಿದೆ. ಬಿಜೆಪಿ ಮತ್ತು ಇತರ ಪಕ್ಷಗಳು ಕಾಂಗ್ರೆಸ್ ವಿರುದ್ಧ ಬಳಸುವ ಅಸ್ತ್ರಗಳಲ್ಲಿ ಈಗಲೂ ಎಮರ್ಜೆನ್ಸಿಯೂ ಒಂದಾಗಿದೆ. ಅದರ ಮಾತೆತ್ತಿದರೆ ಕಾಂಗ್ರೆಸ್ ನಾಯಕರಿಗೆ ಸಮರ್ಥಿಸಲು ಪದಗಳು ಹೊರಡುವುದಿಲ್ಲ.
” ಒಂದು ಕುಟುಂಬ ತನ್ನ ಅಧಿಕಾರ ದಾಹಕ್ಕಾಗಿ ಇಡೀ ದೇಶದ ಮೇಲೆ ವಿಧಿಸಿದ ಎಮರ್ಜೆನ್ಸಿಯನ್ನು ಹಾಗೂ ಅದರ ವಿರುದ್ಧ ಅಸಂಖ್ಯಾತ ಹೋರಾಟಗಾರರು ನಡೆಸಿದ ತ್ಯಾಗ ಬಲಿದಾನವನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ದಿನ ಬೆಳಗಾಗುವುದರೊಳಗೆ ಇಡೀ ದೇಶ ಜೈಲಾಗಿತ್ತು. ಮಾಧ್ಯಮ, ಕೋರ್ಟ್, ವಾಕ್ ಸ್ವಾತಂತ್ರ್ಯ ಎಲ್ಲವನ್ನೂ ಹತ್ತಿಕ್ಕಲಾಗಿತ್ತು. ಈ ಸಂದರ್ಭ ಎಮರ್ಜೆನ್ಸಿ ಹೆಸರಿನಲ್ಲಿ ಬಡವರು, ಜನ ಸಾಮಾನ್ಯರ ಮೇಲೆ ನಡೆದ ಘೋರ ದೌರ್ಜನ್ಯ ಎಸಗಲಾಯಿತುʼʼ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತುರ್ತುಪರಿಸ್ಥಿತಿಯ 45ನೇ ವರ್ಷಾಚರಣೆ ಸಂದರ್ಭ ಟ್ವೀಟ್ ಮಾಡಿದ್ದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ ಕೃತಿಯೊಂದರಲ್ಲಿ, ಇಂದಿರಾಗಾಂಧಿಯವರು ವಿಧಿಸಿದ ಎಮರ್ಜೆನ್ಸಿ ಇಂದು ದುಸ್ಸಾಹಸ. ಅದನ್ನು ತಪ್ಪಿಸಬಹುದಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

Exit mobile version