ಛತ್ತೀಸ್ ಗಢ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಒಬ್ಬ ಮಹಿಳೆ ಸೇರಿದಂತೆ 13 ಮಂದಿ ನಕ್ಸಲರು ಹತರಾಗಿದ್ದಾರೆ (Encounter) ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ಬಿಜಾಪುರ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಮತ್ತು ಛತ್ತೀಸ್‌ಗಢ ಪೊಲೀಸರ ಭದ್ರತಾ ಪಡೆಗಳೊಂದಿಗಿನ ಭೀಕರ ಗುಂಡಿನ ಚಕಮಕಿಯಲ್ಲಿ 13 ಮಂದಿ ನಕ್ಸಲರು ಹತರಾಗಿದ್ದು, ಈ ವರ್ಷ ಇದುವರೆಗೆ ಕೊಲ್ಲಲ್ಪಟ್ಟ ನಕ್ಸಲರ ಸಂಖ್ಯೆ 50ಕ್ಕೆ ತಲುಪಿದೆ. 2023ರಲ್ಲಿ 22 ಮಾವೋವಾದಿಗಳು ಹತರಾಗಿದ್ದರು.
ಗಾಯಗೊಂಡ ಸಿಆರ್‌ಪಿಎಫ್ ಸಿಬ್ಬಂದಿ
ಎನ್‌ಕೌಂಟರ್ ಸ್ಥಳದಲ್ಲಿ ಶೋಧ ಕಾರ್ಯಾಚರಣೆಗಳು ತಡರಾತ್ರಿಯವರೆಗೂ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹತರಾದ ನಕ್ಸಲರ ಹೆಸರು ಇನ್ನಷೇ ಗೊತ್ತಾಗಬೇಕಿದೆ. ಭದ್ರತಾ ಸಿಬ್ಬಂದಿ ಸುರಕ್ಷಿತವಾಗಿ ತಮ್ಮ ಶಿಬಿರಗಳಿಗೆ ಮರಳಿದ ನಂತರ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ. ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಐಇಡಿ ಸ್ಫೋಟದಲ್ಲಿ ರಾಜೇಂದ್ರ ಕುಮಾರ್ ಮತ್ತು ಗುಂಡೇಟಿನಿಂದ ಸಂದೀಪ್ ಕುಮಾರ್ ಗಾಯಗೊಂಡಿದ್ದಾರೆ.
ಬಿಜಾಪುರ ಜಿಲ್ಲಾ ಕೇಂದ್ರದಿಂದ 45 ಕಿಲೋಮೀಟರ್ ಮತ್ತು ಗಂಗಾಳೂರಿನ ಬ್ಲಾಕ್ ಹೆಡ್ ಕ್ವಾರ್ಟರ್‌ನಿಂದ 10 ಕಿಲೋಮೀಟರ್ ದೂರದಲ್ಲಿರುವ ಕೇಂದ್ರ ಮತ್ತು ಕರ್ಚೋಲಿ ಅರಣ್ಯಗಳಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡ ನಕ್ಸಲರ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತರ್ ರೇಂಜ್) ಸುಂದರರಾಜ್ ಪಿ ತಿಳಿಸಿದ್ದಾರೆ.
ಇದನ್ನೂ ಓದಿ:ಅಜ್ಜ ಹೂಡಿಕೆ ಮಾಡಿದ್ದು 500, ಮೊಮ್ಮಗನಿಗೆ ಸಿಕ್ಕಿದ್ದು 3.75 ಲಕ್ಷ ರೂಪಾಯಿ; ಇದುವೇ ಷೇರು ಪೇಟೆ ಮ್ಯಾಜಿಕ್!
ಸೋಮವಾರ ಮಾವೋವಾದಿ ಕೇಡರ್ ನ ಕೂಟದ ಬಗ್ಗೆ ಗುಪ್ತಚರ ಮಾಹಿತಿ ಸಿಕ್ಕಿದೆ. ರಾತ್ರಿಯಲ್ಲಿ ಅನೇಕ ಏಜೆನ್ಸಿಗಳ ಸಿಬ್ಬಂದಿ – ಛತ್ತೀಸ್‌ಗಢ ಪೊಲೀಸ್‌ನ ಜಿಲ್ಲಾ ಮೀಸಲು ಗಾರ್ಡ್ ಮತ್ತು ವಿಶೇಷ ಕಾರ್ಯಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಅದರ ಗೆರಿಲ್ಲಾ ಘಟಕ ಕಮಾಂಡೋ ಜಿಲ್ಲೆಯ ಗಂಗಲೂರು, ಚೇರ್ಪಾಲ್, ಬಸಗುಡ, ಪಲ್ನಾರ್, ಪುಸ್ನಾರ್ ಮತ್ತು ಮುದ್ವೆಂಡಿ ಶಿಬಿರಗಳಿಂದ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಅನ್ನು ನಿಯೋಜಿಸಲಾಯಿತು.
13 ಮಂದಿ ನಕ್ಸಲರ ಮೃತದೇಹಗಳ ವಶ
ಇದುವರೆಗೆ 13 ನಕ್ಸಲರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಘು ಮೆಷಿನ್ ಗನ್ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಶೋಧ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ. ನಾಳೆ ಅವರ ಗುರುತುಗಳ ಕುರಿತು ಇನ್ನಷ್ಟು ಸ್ಪಷ್ಟನೆ ಸಿಗಲಿದೆ. ಮೇಲ್ನೋಟಕ್ಕೆ, ಅವರು PLGA (ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ) ಕಂಪನಿ ನಂ. 2 ಸದಸ್ಯರಾಗಿದ್ದಾರೆ ಎಂದು ತೋರುತ್ತದೆ ಎಂದು ಸುಂದರರಾಜ್ ಪಿ ತಿಳಿಸಿದ್ದಾರೆ.
12 ತಿಂಗಳುಗಳಲ್ಲಿ 42 ನಾಗರಿಕರ ಕೊಲೆ
ಜುಲೈ 2019 ರ ನಂತರ ಬಸ್ತಾರ್ ಜಿಲ್ಲೆಯ ನಾಗರ್ನಾರ್ ಪ್ರದೇಶದ ಒಡಿಶಾ ಗಡಿಯ ಬಳಿ ನಡೆದ ಕಾರ್ಯಾಚರಣೆಯಲ್ಲಿ 7 ಬಂಡುಕೋರರನ್ನು ಹತ್ಯೆ ಮಾಡಿದ ನಂತರ ಇದೀಗ ಛತ್ತೀಸ್ ಗಢದಲ್ಲಿ ಮಾವೋವಾದಿಗಳಿಗೆ ಈ ಸಾವುಗಳು ದೊಡ್ಡ ಹೊಡೆತವಾಗಿದೆ. ನಿಷೇಧಿತ ಸಿಪಿಐ (ಮಾವೋವಾದಿ) ಯ ಕಾರ್ಯಕರ್ತರು ಜನವರಿ 2024 ರಿಂದ 19 ನಾಗರಿಕರನ್ನು ಕೊಂದಿದ್ದಾರೆ ಎಂದು ಸರ್ಕಾರಿ ದಾಖಲೆಗಳು ತೋರಿಸುತ್ತವೆ, 2023 ರ 12 ತಿಂಗಳುಗಳಲ್ಲಿ 42 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ.