ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಕನಿಷ್ಠ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ (Terrorists Killed). ಈ ಮೂಲಕ ಗಡಿ ನಿಯಂತ್ರಣ ರೇಖೆ (LoC) ಉದ್ದಕ್ಕೂ ಒಳನುಸುಳಯುವ ಭಯೋತ್ಪಾದಕರ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಹತ ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ (Encounter In Uri).
ಉತ್ತರ ಕಾಶ್ಮೀರದ ಉರಿ ಸೆಕ್ಟರ್‌ನ ಗೊಹಲ್ಲಾನ್ ಪ್ರದೇಶದ ನಿಯಂತ್ರಣ ರೇಖೆಯ ಉದ್ದಕ್ಕೂ ಸೇನಾ ಸಿಬ್ಬಂದಿ ಉಗ್ರರ ಅನುಮಾನಾಸ್ಪದ ಚಲನೆಯನ್ನು ಗಮನಿಸಿ ಈ ಬಗ್ಗೆ ಪ್ರಶ್ನಿಸಿದರು. ಆಗ ಭಯೋತ್ಪಾದಕರು ಗುಂಡು ಹಾರಿಸಿದರು. ಬಳಿಕ ಸೇನಾ ಸಿಬ್ಬಂದು ಪ್ರತಿ ದಾಳಿ ನಡೆಸಿ ಇಬ್ಬರನ್ನು ಹತ್ಯೆ ಮಾಡಿದ್ದಾರೆ. ʼʼಬಳಿಕ ನಡೆದ ಶೋಧ ಕಾರ್ಯಾಚರಣೆಯಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಜೂನ್ 9ರಂದು ನಡೆದ ಭಯೋತ್ಪಾದಕರ ಗುಂಡಿನ ದಾಳಿಯ ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಮೃತಪಟ್ಟಿದ್ದರು. ಜಮ್ಮು-ಕಾಶ್ಮೀರದಲ್ಲಿರುವ ಶಿವ ಖೋರಿ ದೇವಸ್ಥಾನಕ್ಕೆ ಹಿಂದು ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಪಾಕಿಸ್ತಾನದ ಲಷ್ಕರೆ ತಯ್ಬಾ ಉಗ್ರ ಸಂಘಟನೆಯು ದಾಳಿ ನಡೆಸಿದ್ದು, ಉಗ್ರನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಲ್ಲದೆ ಉಗ್ರನ ಕುರಿತು ಸುಳಿವು ನೀಡಿದರೆ 20 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.
ಅದಾದ ಬಳಿಕವೂ ಭಯೋತ್ಪಾದಕರು ದಾಳಿ ನಡೆಸಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ. ನಂತರ ಸೇಡು ತೀರಿಸಿಕೊಂಡ ಭಾರತೀಯ ಸೇನೆ ಈಗಾಗಲೇ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಕಥುವಾ ಜಿಲ್ಲೆಯ ಸೈದಾ ಸುಖಲ್ ಗ್ರಾಮದಲ್ಲಿ ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಅಡಗಿದ್ದ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಸಿಆರ್‌ಪಿಎಫ್ ಸಿಬ್ಬಂದಿಯೊಬ್ಬರು ಹತರಾಗಿದ್ದರು. ಬಳಿಕ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದರು.
ಇದನ್ನೂ ಓದಿ: Kathua Terror Attack: ಯೋಧನ ಹತ್ಯೆಗೆ ಪ್ರತಿಕಾರ; ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ
ಜಮ್ಮುವಿನಿಂದ 60 ಕಿ.ಮೀ ದೂರದಲ್ಲಿರುವ, ಅಂತಾರಾಷ್ಟ್ರೀಯ ಗಡಿ ಬಳಿಯ ಗ್ರಾಮದಲ್ಲಿ ಜೂನ್ 11ರ ಸಂಜೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಓರ್ವ ನಾಗರಿಕ ಗಾಯಗೊಂಡಿದ್ದ. ನಂತರ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಒಬ್ಬ ಭಯೋತ್ಪಾದಕನನ್ನು ಕೊಂದಿದೆ. ಇನ್ನೊಬ್ಬನನ್ನು ಜೂನ್ 12ರ ಮುಂಜಾನೆ ಗುಂಡಿಕ್ಕಿ ಕೊಲ್ಲಲಾಯಿತು. ಈ ಮಧ್ಯೆ ಪೊಲೀಸರು ಶಂಕಿತ ನಾಲ್ವರು ಉಗ್ರರ ರೇಖಾಚಿತ್ರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಉಗ್ರರ ದಾಳಿಗಳು ಜಾಸ್ತಿಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ, ಸೇನಾ ಮುಖ್ಯಸ್ಥರು ಸೇರಿ ಹಲವರೊಂದಿಗೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದರು. ಜಮ್ಮು ಹಾಗೂ ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟಹಾಕಬೇಕು ಎಂದು ಸೂಚಿಸಿದ್ದರು.