Site icon Vistara News

Lok Sabha Election: ಇಂಡಿಯಾ ಒಕ್ಕೂಟಕ್ಕೆ ಶಾಕ್;‌ ಮೈತ್ರಿ ತೊರೆದ ಮೆಹಬೂಬಾ ಮುಫ್ತಿ

Lok Sabha Election

End Of INDIA Bloc In Kashmir As Mehbooba Mufti's PDP Plans To Go Solo For Lok Sabha Election 2024

ಶ್ರೀನಗರ: ಲೋಕಸಭೆ ಚುನಾವಣೆ (Lok Sabha Election) ಕಾವು ದಿನೇದಿನೆ ಬೇಸಿಗೆಯ ಬಿಸಿಲಿಗಿಂತಲೂ ಜಾಸ್ತಿಯಾಗುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ (NDA), ಕಾಂಗ್ರೆಸ್‌ ಮುಂದಾಳತ್ವದಲ್ಲಿ ರಚಿಸಲಾದ ಇಂಡಿಯಾ ಒಕ್ಕೂಟದ (India Bloc) ಪಕ್ಷಗಳು ಸೇರಿ ಎಲ್ಲ ರಾಜಕೀಯ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಇನ್ನಿಲ್ಲದ ರಣತಂತ್ರ ರೂಪಿಸುತ್ತಿವೆ. ಇದರ ಮಧ್ಯೆಯೇ, ಜಮ್ಮು-ಕಾಶ್ಮೀರದಲ್ಲಿ (Jammu Kashmir) ಪಿಡಿಪಿಯು ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂಬುದಾಗಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ (Mehbooba Mufti) ಅವರು ಘೋಷಣೆ ಮಾಡಿದ್ದಾರೆ. ಇದರಿಂದ ಇಂಡಿಯಾ ಒಕ್ಕೂಟಕ್ಕೆ ಭಾರಿ ಹಿನ್ನಡೆಯಾದಂತಾಗಿದೆ.

“ಜಮ್ಮು-ಕಾಶ್ಮೀರದ ಮೂರಕ್ಕೆ ಮೂರು ಲೋಕಸಭೆ ಕ್ಷೇತ್ರಗಳಲ್ಲಿ ಪಿಡಿಪಿ ಸ್ಪರ್ಧಿಸಲಿದೆ. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಉಮರ್‌ ಅಬ್ದುಲ್ಲಾ ಅವರು ಸಹಕಾರ ನೀಡುತ್ತಿಲ್ಲ. ಇಂಡಿಯಾ ಒಕ್ಕೂಟದ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷವು ನಾವು ಸ್ವತಂತ್ರವಾಗಿ ಸ್ಪರ್ಧಿಸುವ ಹೊರತು ಬೇರೆ ಆಯ್ಕೆಯನ್ನೇ ನೀಡಿಲ್ಲ. ಹಾಗಾಗಿ, ಪಿಡಿಪಿಯು ಜಮ್ಮು-ಕಾಶ್ಮೀರದ ಮೂರು ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಅಭ್ಯರ್ಥಿಗಳ ಆಯ್ಕೆ ಕುರಿತು ಶೀಘ್ರದಲ್ಲೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ಮೆಹಬೂಬಾ ಮುಫ್ತಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬ ಧ್ಯೇಯದಿಂದ ಅಸ್ತಿತ್ವಕ್ಕೆ ಬಂದಿರುವ ಇಂಡಿಯಾ ಒಕ್ಕೂಟವು ಲೋಕಸಭೆ ಚುನಾವಣೆಯ ಮೊದಲೇ ಛಿದ್ರ ಛಿದ್ರವಾಗಿದೆ. ಟಿಎಂಸಿಯು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದೆ. ಪಂಜಾಬ್‌ನಲ್ಲಿ ಆಪ್‌ ಕೂಡ ಮೈತ್ರಿ ಇಲ್ಲದೆಯೇ ಸ್ಪರ್ಧಿಸಲು ಮುಂದಾಗಿದೆ. ಇದಾದ, ನಿತೀಶ್‌ ಕುಮಾರ್‌ ಅವರು ಕೂಡ ಮೈತ್ರಿಕೂಟಕ್ಕೆ ವಿದಾಯ ಹೇಳಿರುವುದು ಒಕ್ಕೂಟದ ಒಗ್ಗಟ್ಟಿಗೆ ಭಾರಿ ಪೆಟ್ಟು ಬಿದ್ದಂತಾಗಿದೆ.

ಇದನ್ನೂ ಓದಿ: Vijender Singh: ಕಾಂಗ್ರೆಸ್​ಗೆ ಪಂಚ್​ ನೀಡಿ ಬಿಜೆಪಿ ಸೇರಿದ ಬಾಕ್ಸರ್‌ ವಿಜೇಂದರ್ ಸಿಂಗ್

ನಿತೀಶ್‌ ಕುಮಾರ್‌ ಅವರ ವಿದಾಯವು ಇಂಡಿಯಾ ಒಕ್ಕೂಟಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ. ನಿತೀಶ್‌ ಕುಮಾರ್‌ ಮಾತ್ರವಲ್ಲ, ರಾಷ್ಟ್ರೀಯ ಲೋಕದಳ (RLD) ಕೂಡ ಇಂಡಿಯಾ ಒಕ್ಕೂಟಕ್ಕೆ ವಿದಾಯ ಹೇಳಿದೆ. ಇನ್ನು, ಕಾಂಗ್ರೆಸ್‌ನ ಸಾಲು ಸಾಲು ನಾಯಕರು ಬಿಜೆಪಿ ಸೇರ್ಪಡೆಯಾಗಿರುವುದು ಕೂಡ ಪಕ್ಷಕ್ಕೆ ವೈಯಕ್ತಿಕವಾಗಿ ಹಿನ್ನಡೆಯಾದಂತಾಗಿದೆ. ಇಷ್ಟೆಲ್ಲ ಬೆಳವಣಿಗೆಗಳು ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version