ನವ ದೆಹಲಿ: ಶಾರ್ಜಾ ದಿಂದ ಶನಿವಾರ ತಡ ರಾತ್ರಿ ಹೈದರಾಬಾದ್‌ಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ (Indigo Flight) ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ಅದನ್ನು ಸುರಕ್ಷಿತವಾಗಿ ಇಳಿಸಲಾಗಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ ಈ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದೆ. ಭಾರತದ ವಿಮಾನ ಕರಾಚಿಯಲ್ಲಿ ಇಳಿಯುತ್ತಿರುವುದು ಈ ತಿಂಗಳಿನಲ್ಲಿ ಇದು ಎರಡನೇ ಬಾರಿಯಾಗಿದೆ. ಜುಲೈ ೫ರಂದು ದೆಹಲಿಯಿಂದ ದುಬೈಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನವನ್ನು ಇಂಧನ ಸೋರಿಕೆಯ ಅನುಮಾನದ ಹಿನ್ನೆಲೆಯಲ್ಲಿ ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿತ್ತು. ಅದರಲ್ಲಿದ್ದ ೧೬೦ ಪ್ರಯಾಣಿಕರಿಗೆ ಬೇರೆ ವಿಮಾನದಲ್ಲಿ ದುಬೈಗೆ ತೆರಳಲು ವ್ಯವಸ್ಥೆ ಮಾಡಲಾಗಿತ್ತು.
ಎ೩೨೦ ವಿಮಾನ ಶಾರ್ಜಾದಿಂದ ಹೊರಟ ನಂತರ ಅದರಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪೈಲಟ್ ಮಾಹಿತಿ ನೀಡಿದ್ದು, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ಅದನ್ನು ಹತ್ತಿರದ ಕರಾಚಿ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ. ಅಲ್ಲಿ ಈಗ ಇಳಿದುಕೊಂಡಿರುವ ಪ್ರಯಾಣಿಕರನ್ನು ಕರೆತರಲು ಬೇರೆ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ಭಾನುವಾರ ನೀಡಿರುವ ಹೇಳಿಕೆ ತಿಳಿಸಿದೆ.
“ಶಾರ್ಜಾ- ಹೈದರಾಬಾದ್ ನಡುವಿನ ಇಂಡಿಗೋ ವಿಮಾನ 6E- 1406 ಅನ್ನು ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕರಾಚಿಗೆ ಕಳುಹಿಸಲಾಗಿದೆ. ಎಂಜಿನ್ ೨ರಲ್ಲಿ ಈ ತಾಂತ್ರಿಕ ಸಮಸ್ಯೆ ಉಂಟಾಗಿದ್ದನ್ನು ಪೈಲಟ್ ಗುರುತಿಸಿದ್ದಾರೆ. ಅಗತ್ಯ ಪ್ರಕ್ರಿಯೆಗಳನ್ನು ಪಾಲಿಸಲಾಗಿದೆ” ಎಂದು ಇಂಡಿಗೋ ತಿಳಿಸಿದೆ.
ಇಂಡಿಗೋ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಳ್ಳುವುದು ಸಾಮಾನ್ಯವೆಂಬಂತಾಗಿದೆ. ಜುಲೈ ೧೪ರಂದು ನವ ದೆಹಲಿ ವಡೋದರ ನಡುವಿನ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ ಅದನ್ನು ಜೈಪುರದಲ್ಲಿ ಇಳಿಸಲಾಗಿತ್ತು.
ಇದನ್ನೂ ಓದಿ| 35 ಸಾವಿರ ಅಡಿ ಎತ್ತರದಲ್ಲಿ ನಡೆಯಬಹುದಾಗಿದ್ದ ವಿಮಾನಗಳ ಡಿಕ್ಕಿಯನ್ನು ಪೈಲಟ್ ತಪ್ಪಿಸಿದ್ದು ಹೇಗೆ?